ಸುಳ್ಯ: ಪಯಸ್ವಿನಿ ನದಿ ಆಶ್ರಯಿಸಿಕೊಂಡಿರುವ ಗಡಿ ಗ್ರಾಮಗಳಲ್ಲಿ ನೀರಿನ ಸಮಸ್ಯೆ ತೀವ್ರಗೊಂಡಿದೆ. ಜನರು ನೀರಿಗಾಗಿ ಹಾಹಾಕಾರ ಪಡುವ ಸ್ಥಿತಿ ನಿರ್ಮಾಣವಾಗಿದೆ.
ಸುಳ್ಯ ಮತ್ತು ಕಾಸರಗೋಡು ಜಿಲ್ಲೆಯ ಗಡಿ ಪ್ರದೇಶಗಳಾದ ಪಂಜಿಕಲ್ಲು, ಮುರೂರು, ಮಂಡೆಕೋಲು ಭಾಗಗಳಲ್ಲಿ ಕಳೆದ ಒಂದು ತಿಂಗಳಿನಿಂದ ಈ ರೀತಿಯ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಪ್ರದೇಶಗಳ ಪ್ರಮುಖ ಜಲ ಮೂಲವಾದ ಪಯಸ್ವಿನಿ ನದಿ ಬತ್ತಿರುವುದರಿಂದ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಸಂಪೂರ್ಣ ಹರಿವು ನಿಲ್ಲಿಸಿದ ಪಯಸ್ವಿನಿಯ ಒಡಲಿನಲ್ಲಿ ಬಂಡೆ ಕಲ್ಲುಗಳು ಮಾತ್ರ ಗೋಚರಿಸುತ್ತದೆ. ಕಿಲೋಮೀಟರ್ ದೂರಕ್ಕೆ ನೀರೇ ಇಲ್ಲದೆ ಕೇವಲ ಬಂಡೆ ಕಲ್ಲುಗಳ ರಾಶಿಯೇ ಕಾಣಿಸುತಿದೆ. ನದಿಯ ಅಲ್ಲಲ್ಲಿ ಕೆಲವು ಹೊಂಡಗಳಲ್ಲಿ ಮಾತ್ರ ಅಲ್ಪ ಸ್ವಲ್ಪ ನೀರು ಕಾಣಿಸುತ್ತಿದೆ. ನದಿ ಪಕ್ಕದ ಕೃಷಿ ಭೂಮಿಗೂ ನೀರು ಸಾಕಾಗದೆ ಅಡಿಕೆ, ತೆಂಗು ಸೇರಿದಂತೆ ಕೃಷಿಗಳು ನಾಶವಾಗಿದೆ ಎನ್ನುತ್ತಾರೆ ಈ ಭಾಗದ ಕೃಷಿಕರು.
ಕೊಡಗು ಜಿಲ್ಲೆಯ ಜೋಡುಪಾಲ, ಮೊಣ್ಣಂಗೇರಿ ಭಾಗಗಳಲ್ಲಿ ಕಳೆದ ಕೆಲವು ದಿನಗಳಲ್ಲಿ ಸುರಿದ ಮಳೆಯಿಂದಾಗಿ ಪಯಸ್ವಿನಿ ನೀರಿನ ಹರಿವು ಆರಂಭವಾದರೂ ಕೆಳ ಭಾಗಕ್ಕೆ ಇನ್ನೂ ತಲುಪದ ಕಾರಣ ಗಡಿ ಪ್ರದೇಶದಲ್ಲಿ ನದಿಯಲ್ಲಿ ನೀರೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.
ಹೊಂಡಗಳಲ್ಲಿ ಮಾತ್ರ ಅಲ್ಪ ನೀರು ಉಳಿದಿದೆ:
ಪಂಜಿಕಲ್ಲು, ಮುರೂರು ಭಾಗಗಳಲ್ಲಿ ನದಿ ಪೂರ್ತಿಯಾಗಿ ಬರಡಾಗಿದ್ದು ಈ ಭಾಗದಲ್ಲಿ ನದಿಯಲ್ಲಿದ್ದ ಜಲಚರಗಳು ಸಂಪೂರ್ಣ ನಾಶವಾಗಿದೆ. ನೀರಿನ ಹರಿವು ನಿಂತು ಹೋಗಿ ಕೆಲವು ಹೊಂಡದಲ್ಲಿ ಮಾತ್ರ ನೀರಿನ ಶೇಖರಣೆಯಿದ್ದು ಆ ನೀರು ಬಿಸಿಲಿನ ತಾಪಕ್ಕೆ ಬಿಸಿಯಾಗಿ ಜಲಚರಗಳು ಸಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. 2016ರಲ್ಲಿ ಕೆಲವು ಭಾಗಗಳಲ್ಲಿ ಪಯಸ್ವಿನಿ ನದಿ ಬತ್ತಿ ಹೋಗಿ ಜಲಚರಗಳ ಮಾರಣ ಹೋಮ ಸಂಭವಿಸಿತ್ತು.
ಬಿಸಿಲು ಮತ್ತು ಏರಿದ ಉಷ್ಣಾಂಶ ಹಾಗು ಮಳೆಯ ಕೊರತೆಯಿಂದ ಈ ಬಾರಿ ಜನವರಿ ತಿಂಗಳಲ್ಲೇ ನೀರಿನ ಮೂಲಗಳು ಬತ್ತಲು ಆರಂಭಿಸಿತ್ತು. ಮಾರ್ಚ್ ಕೊನೆಯವರೆಗೂ ಒಂದೇ ಒಂದು ಮಳೆ ದೊರೆಯದ ಕಾರಣ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿತು. ನೀರಿಗೆ ಹಾಹಾಕಾರ ಪಡುವ ಪರಿಸ್ಥಿತಿ ಸೃಷ್ಠಿಯಾಗಿದೆ. ಕಳೆದ ಒಂದು ವಾರದಿಂದ ಸ್ವಲ್ಪ ಮಳೆ ಬಂದರೂ ನೀರಿನ ಲಭ್ಯತೆ ಇನ್ನೂ ಹೆಚ್ಚಾಗಿಲ್ಲ ಎನುತ್ತಾರೆ ಸ್ಥಳೀಯರು.