ಪುತ್ತೂರು: ನೆಲ, ಜಲವೇ ಮುಂತಾದ ನೈಸರ್ಗಿಕ ಸಂಪನ್ಮೂಲಗಳು ಮನುಷ್ಯನ ದುರಾಸೆಗೆ ಬಲಿಯಾಗಿ ಇನ್ನೆಂದೂ ಸರಿಪಡಿಸಲಾರದಷ್ಟು ಮಟ್ಟಿಗೆ ಹಾನಿಯನ್ನು ಹೊಂದಿವೆ ಎಂದು ಪರಿಸರ ತಜ್ಞ ಹಾಗೂ ಸಾಮಾಜಿಕ ಕಾರ್ಯಕರ್ತ ದಿನೇಶ್ ಹೊಳ್ಳ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗ ಮತ್ತು ಐಎಸ್‍ಟಿಇ ಸ್ಟಾಫ್ ಚಾಪ್ಟರ್ ಇದರ ಆಶ್ರಯದಲ್ಲಿ ಪಶ್ಚಿಮ ಘಟ್ಟಗಳಲ್ಲಿ ಉಂಟಾಗುವ ಭೂಕುಸಿತ ಮತ್ತು ಅದರ ಅಧ್ಯಯನ ಈ ವಿಷಯದ ಬಗ್ಗೆ ನಡೆದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತಾಡಿದರು. ಮಾನವನ ಅವಾಂತರಗಳಿಂದ ಪದೇ ಪದೇ ಭೂಕುಸಿತಗಳು ಸಂಭವಿಸುತ್ತಿದ್ದು, ಕಳೆದ ಭಾರಿ ಉಂಟಾದ ಭೂಕುಸಿತಗಳು ಇದಕ್ಕೊಂದು ಸ್ಪಷ್ಟ ನಿದರ್ಶನ ಎಂದರು. ಐಐಎಸ್‍ಸಿ ಯ ತಂತ್ರಜ್ಞರ ಅಧ್ಯಯನದ ಪ್ರಕಾರ ಎತ್ತಿನ ಹೊಳೆ ಯೋಜನೆ ಒಂದು ವ್ಯರ್ಥ ಪ್ರಯತ್ನ. ಯೋಜನಾ ಪ್ರದೇಶದಲ್ಲೇ ಸಾಕಷ್ಟು ನೀರು ಲಭ್ಯವಿಲ್ಲ ಎಂದು ಅವರು ನುಡಿದರು.
ಪ್ರಾಂಶುಪಾಲ ಡಾ.ಎಂ.ಎಸ್.ಗೋವಿಂದೇಗೌಡ ಮಾತನಾಡಿ ಕಳೆದ ಮಳೆಗಾಲದಲ್ಲಿ ನಡೆದ ಪ್ರಾಕೃತಿಕ ವೈಪರೀತ್ಯಗಳಿಗೆ ಮಾನವನ ಯೋಜನಾರಹಿತವಾದ ಕೆಲಸಗಳೇ ಕಾರಣ ಎಂದರು. ಹರಿಯುವ ನೀರನ್ನು ಚಲಿಸುವಂತೆ ಮಾಡಿ ಎಲ್ಲೆಡೆಯೂ ನೀರಿಂಗಿಸುವ ಕಾರ್ಯದಲ್ಲಿ ತೊಡಗಿಸಿಕೊಂಡರೆ ನೀರಿನ ಕೊರತೆಯನ್ನು ಕಡಿಮೆ ಮಾಡಬಹುದು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್ ರಾವ್ ಮಾತನಾಡಿ ಪgಸರದ ಬಗ್ಗೆ ಜನಸಾಮಾನ್ಯರಲ್ಲಿ ವ್ಯಾಪಕವಾದ ಅರಿವು ಮೂಡಿಸುವ ಕಾರ್ಯ ಆಗಬೇಕಾಗಿದೆ. ನಮ್ಮ ನಡೆ ಮತ್ತು ನುಡಿಯಲ್ಲಿ ಪರಿಸರದ ಬಗ್ಗೆ ಕಾಳಜಿ ಕಂಡುಬಂದರೆ ಪ್ರಾಕೃತಿಕ ಸಂಪತ್ತು ರಕ್ಷಣೆಯಾಗಬಹುದು ಎಂದರು.
ಪರಿಸರ ತಜ್ಞ ಹಾಗೂ ವಿವೇಕಾನಂದ ಪದವಿ ಕಾಲೇಜಿನ ಉಪನ್ಯಾಸಕ ಡಾ.ಶ್ರೀಶ ಕುಮಾರ್, ವಿವೇಕಾನಂದ ಪಾಲಿಟೆಕ್ನಿಕ್‍ನ ಸಿವಿಲ್ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥ ಪ್ರೊ. ರವಿರಾಮ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದರು .ಇಂಜಿನಿಯರಿಂಗ್ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥ ಡಾ.ಸಂದೀಪ್.ಜೆ.ನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಡಾ.ಸೌಮ್ಯ.ಎನ್.ಜೆ ಸ್ವಾಗತಿಸಿ, ಸುಮಂತ್ ವಂದಿಸಿದರು. ಸಂಪದ ಕಾರ್ಯಕ್ರಮ ನಿರ್ವಹಿಸಿದರು.