ಕೊರೊನಾ ಲಾಕ್ಡೌನ್ ಎಲ್ಲೆಡಬಿಗಿ ಬಂದೋ ಬಸ್ತ್. ಈ ಸಂದರ್ಭ ಅನೇಕರಿಗೆ ಅಗತ್ಯ ಕೆಲಸ ಮಾಡಲು ಸಾಧ್ಯವಾಗಲಿಲ್ಲ. ಬಡವರಿಗಂತೂ ಏನೇನೂ ಮಾಡಲು ಸಾಧ್ಯವಾಗಿಲ್ಲ. ಇಂತಹ ಬಡ ಕುಟುಂಬವೊಂದಕ್ಕೆ ನೆರವಾದ್ದು ಗುತ್ತಿಗಾರು ಗ್ರಾಪಂ ಅಧ್ಯಕ್ಷರ ನೇತೃತ್ವದ ತಂಡ. ಗುತ್ತಿಗಾರು ಕೊರೊನಾ ಕಾರ್ಯಪಡೆಯ ಸದಸ್ಯರೆಲ್ಲರ ಸಹಕಾರದಿಂದ ಗುತ್ತಿಗಾರು ಗ್ರಾಪಂ ಅಧ್ಯಕ್ಷ ಅಚ್ಚುತ ಗುತ್ತಿಗಾರು ಈ ಕಾರ್ಯ ನೆರೆವೇರಿಸಿ ಮಾದರಿ ಎನಿಸಿದ್ದಾರೆ.
ಗುತ್ತಿಗಾರು ಗ್ರಾಪಂ ಅಧ್ಯಕ್ಷ ಅಚ್ಚುತ ಗುತ್ತಿಗಾರು ಅಡಿಕೆ ಮರದ ತುಂಡನ್ನು ಹೊತ್ತು ತಂದರು…. !. ಇದು ಪಂಚಾಯತ್ ವ್ಯಾಪ್ತಿಯ ನಾಲ್ಕೂರು ಗ್ರಾಮದ ಸಾಲ್ತಾಡಿಯಲ್ಲಿನ ಸುಬ್ರಾಯ ಗೌಡ ಅವರ ಮನೆ ದುರಸ್ತಿ ಕಾರ್ಯಕ್ಕೆ. ಇವರ ಜೊತೆ ಗ್ರಾಪಂ ಸದಸ್ಯ ರಾಕೇಶ್ ಮೆಟ್ಟಿನಡ್ಕ ಹಾಗೂ ಕೊರೊನಾ ಕಾರ್ಯಪಡೆಯ ಸದಸ್ಯರು ಸಾತ್ ನೀಡಿದ್ದಾರೆ. 3 ದಿನಗಳ ಸತತ ಕೆಲಸದಿಂದ ಬಡ ಕುಟುಂಬವೊಂದಕ್ಕೆ ಮನೆ ದುರಸ್ತಿ ಮಾಡಿಸಿದ್ದಾರೆ. ಕೊರೊನಾ ಲಾಕ್ಡೌನ್ ನಡುವೆ ಮಾದರಿ ಕೆಲಸವನ್ನು ಈ ತಂಡ ಮಾಡಿದೆ.
ಗುತ್ತಿಗಾರು ಪಂಚಾಯತ್ ವ್ಯಾಪ್ತಿಯ ನಾಲ್ಕೂರು ಗ್ರಾಮದ ಸಾಲ್ತಾಡಿಯಲ್ಲಿನ ಸುಬ್ರಾಯ ಗೌಡ ಅವರದು ಬಡ ಕುಟುಂಬ. ವಯಸ್ಸಾದ ಹಿನ್ನೆಲೆಯಲ್ಲಿ ಕೆಲಸ ಮಾಡಲು ಕಷ್ಟವಾಗಿದೆ. ಇವರ ಪತ್ನಿ ಭಾಗೀರಥಿ ವೃದ್ದೆಯಾಗಿದ್ದಾರೆ. ಕಳೆದ ಕೆಲವು ಸಮಯಗಳಿಂದ ಈ ದಂಪತಿಗಳ ಮನೆ ಶಿಥಿಲವಾಗಿತ್ತು. ಇದನ್ನು ಗಮನಿಸಿದ ಗುತ್ತಿಗಾರು ಗ್ರಾಮ ಪಂಚಾಯತ್ ಅಧ್ಯಕ್ಷ ಅಚ್ಚುತ ಗುತ್ತಿಗಾರು ನೇತೃತ್ವದ ತಂಡವು ಕೊರೊನಾ ಕಾರ್ಯ ಪಡೆ ಸದಸ್ಯರ ಮೂಲಕ ದುರಸ್ತಿಗೆ ಸಿದ್ಧವಾಯಿತು. ಇದಕ್ಕಾಗಿ ಬೇಕಾದ ಎಲ್ಲಾ ಸಾಮಾಗ್ರಿ ಸಿದ್ಧ ಮಾಡಿ ಸ್ವತ: ಅಧ್ಯಕ್ಷರೇ ಮರಗಳನ್ನು ಹೊತ್ತು ತಂದರು. ಅವರ ಜೊತೆ ಕಾರ್ಯಪಡೆ ಸದಸ್ಯರೂ ಸೇರಿಕೊಂಡರು. ಅದಾದ ಬಳಿಕ 2 ದಿನದಲ್ಲಿ ಮನೆ ಕೆಲಸ ಪೂರ್ತಿ ಮಾಡಿ ಕೊಟ್ಟರು.
ಈ ಕುಟುಂಬಕ್ಕೆ ಊಟಕ್ಕೆ ಬೇಕಾದ ಕಿಟ್ ವ್ಯವಸ್ಥೆ ಮಾಡಲಾಗಿತ್ತು, ಪಡಿತರ ವ್ಯವಸ್ಥೆಗೆ ಈ ತಂಡವು ಬೇಕಾದ ಸಿದ್ಧತೆ ಮಾಡಿ ವಿದ್ಯುತ್ ಸಂಪರ್ಕಕ್ಕೂ ವ್ಯವಸ್ಥೆ ಮಾಡುವ ಮೂಲಕ ಗ್ರಾಮ ಪಂಚಾಯತ್ ಮಾನವೀಯ ಕೆಲಸವನ್ನು ಮಾಡಿದೆ. ಕೊರೊನಾ ನಡುವೆ ಗುತ್ತಿಗಾರು ಗ್ರಾಪಂ ಅಧ್ಯಕ್ಷ ಅಚ್ಚುತ ಗುತ್ತಿಗಾರು ನೇತೃತ್ವದ ತಂಡದ ಪಾಸಿಟಿವ್ ಕಾರ್ಯಕ್ಕೆ ಹಾಗೂ ಕಾರ್ಯಪಡೆಯ ಸದಸ್ಯರ ಮಾನವೀಯ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಗುತ್ತಿಗಾರು ಗ್ರಾಮ ಪಂಚಾಯತ್ ಕೊರೊನಾ ವೈರಸ್ ವಿರುದ್ಧ ವಿವಿಧ ರೀತಿಯ ಜಾಗೃತಿ ಕಾರ್ಯದ ಮೂಲಕವೂ ರಾಜ್ಯದ ಗಮನ ಸೆಳೆದಿತ್ತು. ಉನ್ನತ ಅಧಿಕಾರಿಗಳು ಪಂಚಾಯತ್ ಕಾರ್ಯವನ್ನು ಗಮನಿಸಿದ್ದರು. ಗ್ರಾಪಂ ಅಧ್ಯಕ್ಷ , ಪಿಡಿಒ ಹಾಗೂ ಕಾರ್ಯಪಡೆ ಸದಸ್ಯರು ಕೊರೊನಾ ಲಾಕ್ಡೌನ್ ಸಂದರ್ಭ ಸಾಮಾಜಿಕ ಅಂತರ ಕಾಯ್ದುಕೊಳ್ಳಲು, ಮಾಸ್ಕ್ ಅಳವಡಿಕೆ ಸೇರಿದಂತೆ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿ ಮಾಡಿದ್ದರು. ಅದಲ್ಲದೆ ಈಚೆಗೆ ಲಾಕ್ಡೌನ್ ಸಡಿಲಿಕೆ ಬಳಿಕವೂ ವರ್ತಕರ ಮನವೊಲಿಸಿ ಮಧ್ಯಾಹ್ನದವರೆಗೆ ಮಾತ್ರವೇ ಅಂಗಡಿ ತೆರೆದು ಲಾಕ್ಡೌನ್ ಮುಂದುವರಿಸಲು ಹೆಜ್ಜೆ ಇರಿಸಿದ ಮೊದಲ ಪಂಚಾಯತ್ ಎಂದೂ ಜಿಲ್ಲೆಯಲ್ಲಿ ಗಮನ ಸೆಳೆದಿತ್ತು. ಇದೀಗ ಮಾನವೀಯ ಕಾರ್ಯದ ಮೂಲಕ ಗುತ್ತಿಗಾರು ಗ್ರಾಮ ಪಂಚಾಯತ್ ಮತ್ತೆ ಗಮನಸೆಳೆದಿದೆ.