ಸವಣೂರು: ಅದು ವಿಸ್ತಾರವಾದ ಗದ್ದೆ.. ತೆನೆ ತುಂಬಿ ಒಣಗಿದ ಭತ್ತದ ಪೈರುಗಳು.. ಕಣ್ಣಿಗೆ ಆನಂದವನ್ನು ನೀಡುತ್ತಿತ್ತು. ರಮಣೀಯವಾದ ತೋಟಗಳ ಮಧ್ಯೆ ವಿಸ್ತಾರವಾಗಿ ಕಂಗೊಳಿಸುತ್ತಿದ್ದ ಈ ಗದ್ದೆಯನ್ನು ನೋಡುವುದೇ ಭಾಗ್ಯದ ಸಂಗತಿ. ಆ ಗದ್ದೆಯನ್ನು ಕಾಲಾನುಕಾಲದಿಂದ ಉಳಿಸಿಕೊಂಡು ಬಂದು ಪೋಷಿಸುತ್ತಿರುವವರು ಕೃಷಿಕರಾದ ವಿವೇಕ್‍ಆಳ್ವ ಪುಣ್ಚಪ್ಪಾಡಿ.
ಆ ದಿನ ಗದ್ದೆಯ ತುಂಬೆಲ್ಲ ಸರಕಾರಿ ಸಮವಸ್ತ್ರ ಧರಿಸಿದ ಪುಟ್ಟ ಪುಟ್ಟ ಮಕ್ಕಳ ಓಡಾಟ. ಚಂದದ ಪೈರಿನ ಅಂದಕ್ಕೆ ಮತ್ತೊಂದು ಮೆರುಗು ನೀಡುತ್ತಿತ್ತು. ಅಲ್ಲಿ ಒಂದಷ್ಟು ಔಷಧೀಯ ಗಿಡಗಳು.. ಒಂದಷ್ಟು ಪ್ರಾಕೃತಿಕ ವಿಶೇಷತೆಗಳ ಸಸಿಗಳು. ಸುತ್ತಲೂ ಮನಸಿಗೆ ಮುದ ನೀಡುವ ಹಸಿರು. ಮಕ್ಕಳೆಲ್ಲರಿಗೂ ಹಸಿರ ರಸದೌತಣ. ಇದು ಪುಣ್ಚಪ್ಪಾಡಿ ಶಾಲಾ ಮಕ್ಕಳ ಪ್ರಕೃತಿ ಪಾಠದ ಸೊಬಗು. ಒಂದಿಲ್ಲೊಂದು ರೀತಿಯಲ್ಲಿ ಮಕ್ಕಳಿಗೆ ವಿಶೇಷ ಅನುಭವಗಳನ್ನುನೀಡುತ್ತಾ ಬಂದಿರುವ ಪುಣ್ಚಪ್ಪಾಡಿ ಶಾಲೆ, ಈ ಬಾರಿ ಶಾಲೆಯ ಇಕೋಕ್ಲಬ್ ವತಿಯಿಂದ ನೀಡಿದ್ದು ಗದ್ದೆನೋಡುವ ಭಾಗ್ಯವನ್ನು..ಕೃಷಿಕರಾದ ವಿವೇಕ್ ಆಳ್ವ ಪುಣ್ಚಪ್ಪಾಡಿ ಇವರ ಮನೆಯಲ್ಲಿ ನಡೆದ ಈ ಕಾರ್ಯಕ್ರಮ ನಿಜಕ್ಕೂ ವಿಶಿಷ್ಟವೇ ಸರಿ..
ಮಕ್ಕಳು ಮನೆಯಂಗಳಕ್ಕೆ ಬರುತ್ತಿದ್ದಂತೆಯೇ ಮಕ್ಕಳನ್ನು ಸ್ವಾಗತಿಸಿದ್ದು ಹಿಂದಿನ ಕಾಲದಲ್ಲಿ ಭತ್ತ ಕುಟ್ಟುತ್ತಿದ್ದ ಒನಕೆ ಮತ್ತು ನೆಲಗುಳಿ(ನೆಲಕ್ಕುರಿ). ಈ ನೆಲಗುಳಿಯಲ್ಲಿ ಭತ್ತವನ್ನು ಕುಟ್ಟಿ ಅಕ್ಕಿ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದವರು ಹಿರಿಯ ನಾಟಿವೈದ್ಯರಾದ ಬಾಲಕೃಷ್ಣ ರೈ ಮುಂಡಾಜೆ. ಭತ್ತವನ್ನು ಕುಟ್ಟುವ ಸಂಪ್ರದಾಯ, ಭತ್ತವನ್ನು ಕುಟ್ಟಿ ಅಕ್ಕಿ ಮಾಡುವ ಬಗ್ಗೆ ಪರಿಚಯ ನೀಡಿದರು.
ತದನಂತರ ಮಕ್ಕಳು ಓಡಿದ್ದು ಗದ್ದೆಯ ಕಡೆಗೆ… ಕೃಷಿಕರಾದ ವಿವೇಕ್ ಆಳ್ವರವರು ಮಕ್ಕಳಿಗೆ ಗದ್ದೆ ಹದಮಾಡುವುದರಿಂದ ಹಿಡಿದು ಪೈರು ಕಟಾವು ಮಾಡುವವರೆಗೆ ಸಂಪೂರ್ಣ ಮಾಹಿತಿ ತಿಳಿಸಿದರು. ಭತ್ತದ ವಿವಿಧ ತಳಿಗಳು, ತಾವೇ ಆವಿಷ್ಕರಿಸಿದ ಕೃಷಿ ಉಪಕರಣಗಳು, ಅಡಿಕೆಯಿಂದ ತಯಾರಿಸಿದದಂತ ಚೂರ್ಣ, ಮಣ್ಣಿನಿಂದ ತಯಾರಿಸಿದ ಆಧುನಿಕ ಮೈಕ್ರೋಓವನ್ ಬಗ್ಗೆ ತಿಳಿಸಿದರು.
ನಂತರ ನಾಟಿ ವೈದ್ಯರಾದ ಬಾಲಕೃಷ್ಣ ರೈ ಮುಂಡಾಜೆ ಇವರು ಔಷಧ ಗಿಡಗಳ ಬಗ್ಗೆ ವಿಸ್ತೃತ ಪರಿಚಯ ನೀಡಿದರು. ನಮ್ಮ ಹಿತ್ತಲಲ್ಲೇ ದೊರಕುವ ಸಸ್ಯಗಳಾದ ಆಡುಸೋಗೆ, ನೆಕ್ಕಿಸೊಪ್ಪು, ರಾಮಫಲ, ನಾಚಿಕೆಮುಳ್ಳು, ಕೇಪುಳು, ಕಹಿಬೇವು, ಕರಿಬೇವು, ತುಳಸಿ, ಒಂದೆಲಗ, ಬಾಳೆ, ಪಳ್ಳಿ ಸೊಪ್ಪುಹೀಗೆ ಹಲವು ಸಸ್ಯಗಳನ್ನು ಪರಿಚಯಿಸಿ ಔಷಧೀಯ ಗುಣದ ಬಗ್ಗೆ ಹಾಗೂ ಅವುಗಳ ಮಹತ್ವದ ಬಗ್ಗೆ ವಿಶೇಷವಾದ ಮಾಹಿತಿ ನೀಡಿದರು.
ಆನಂತರ ನಡೆದುದೇ ಆಹಾರದ ಪರಿಚಯ. ಹಿರಿಯರಾದ ಅಂಬುಜಾಕ್ಷಿ ಆಳ್ವ ಅವರು ಇಂದಿನ ಜಂಕ್ ಫುಡ್ ಮತ್ತು ಫಾಸ್ಟುಫುಡ್‍ಗಳು ಮನುಷ್ಯನ ಆಹಾರದ ಮೇಲೆ ಉಂಟುಮಾಡುವ ಪರಿಣಾಮಗಳ ಬಗ್ಗೆ ತಿಳಿಸಿಕೊಟ್ಟರು. ನಾವು ಮನೆಯಲ್ಲಿ ಫಾಸ್ಟುಫುಡ್ ಗಳನ್ನು ಹೇಗೆ ತಯಾರಿಸುವುದು ಎಂಬುದನ್ನು ಪ್ರಾತ್ಯಕ್ಷಿಕೆಯ ಮೂಲಕ ತಿಳಿಸುತ್ತಾ ಸಾಮಾನ್ಯ ಅವಲಕ್ಕಿಯಿಂದ ಸುಮಾರು ಹತ್ತು ಬಗೆಯ ತಿನಿಸುಗಳನ್ನು ತಯಾರಿಸಿದರು.
ಈ ಕಾರ್ಯಕ್ರಮದಲ್ಲಿ ಉಪನ್ಯಾಸಕಿ ಸ್ಮಿತಾವಿವೇಕ್, ಪುಣ್ಚಪ್ಪಾಡಿ ಶಾಲಾ ಮುಖ್ಯಗುರು ರಶ್ಮಿತಾ ನರಿಮೊಗರು, ಶಿಕ್ಷಕರಾದ ಶೋಭಾ ಕೆ., ಫ್ಲಾವಿಯಾ , ಅತಿಥಿ ಶಿಕ್ಷಕರಾದ ಯತೀಶ್ ಕುಮಾರ್, ಗೌರವ ಶಿಕ್ಷಕಿ ಯಮುನಾ.ಬಿ, ಪೋಷಕರಾದ ಕಾವೇರಿ ಅಜಿಲೋಡಿ ಕಾರ್ಯಕ್ರಮ ನಿರ್ವಹಿಸಿದರು. ಶಾಲೆಯ ಎಲ್ಲಾ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡರು.
ಅವಲಕ್ಕಿಯಿಂದ ಹಲವು ಫಾಸ್ಟುಫುಡ್: ಮನೆಯಲ್ಲಿ ಕುಟ್ಟಿ ಮಾಡಿದ ಅವಲಕ್ಕಿ ಪರಿಚಯಿಸಿ ಅವಲಕ್ಕಿಯಿಂದ ಹಲವು ಬಗೆಯ ಫಾಸ್ಟುಫುಡ್‍ಗಳನ್ನು ತಯಾರಿಸುವುದನ್ನು ತಿಳಿಸಿದರು.
ಮಕ್ಕಳೆದುರೇ ತಯಾರಿಸಿ ಮಕ್ಕಳಿಗೆ ಹಂಚಿಮಕ್ಕಳು ಈ ವಿಶಿಷ್ಟ ಬಗೆಯ ತಿನಿಸನ್ನು ಜೊತೆಗೆ ಆರೋಗ್ಯಕರ ಎಳ್ಳುಜ್ಯೂಸು ಚಪ್ಪರಿಸಿದ್ದೇ ಚಪ್ಪರಿಸಿದ್ದು. ‘ನಾವು ಎಂದೂ ಯಾವ ಎಲೆಯನ್ನು ಹಾಳು ಮಾಡುವುದಿಲ್ಲ’, ಔಷಧ ಗಿಡಗಳ ಬಗ್ಗೆ ತಿಳಿದುಕೊಂಡ ಮಕ್ಕಳ ಬಾಯಲ್ಲಿ ಬಂದ ಉದ್ಗಾರ ಇದು. ಎಲ್ಲಾ ಎಲೆಗಳಿಗೆ ಕೂಡ ಒಂದು ವಿಶೇಷವಾದ ಮಹತ್ವವಿದೆ. ಇನ್ನು ಮುಂದೆ ಯಾವುದೇ ಗಿಡಗಳನ್ನು ಕೂಡ ವಿನಾಕಾರಣ ನಾಶಮಾಡುವುದಿಲ್ಲ ಎಂದು ನಾಟಿವೈದ್ಯರ ಮುಂದೆ ನಿರ್ಧಾರ ಮಾಡಿದರು.
ಮಕ್ಕಳು ನಮ್ಮ ಮನೆಗೆ ಬಂದಿದ್ದು ಬಹಳ ಖುಷಿಯಾಯಿತು. ಮಕ್ಕಳಿಗೆ ಈ ರೀತಿ ಪ್ರಕೃತಿಯಲ್ಲಿ ಅನುಭವದ ಪಾಠ ಸಿಕ್ಕಿದಾಗ ಮಕ್ಕಳ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತದೆ.
-ವಿವೇಕ ಆಳ್ವ , ಪ್ರಗತಿಪರ ಕೃಷಿಕರು, ಪುಣ್ಚಪ್ಪಾಡಿAdvertisement