ಸವಣೂರು : ಪುಣ್ಚಪ್ಪಾಡಿ ಶಾಲೆ ಸಾಮುದಾಯಿಕ ಕೇಂದ್ರವಾಗಿ ಬೆಳೆಯುತ್ತಿದೆ ಎಂದು ಜಿ.ಪಂ.ಸದಸ್ಯೆ ಪ್ರಮೀಳಾ ಜನಾರ್ಧನ ಹೇಳಿದರು.
ಅವರು ಪುಣ್ಚಪ್ಪಾಡಿ ಶಾಲೆಯ 92ನೇ ವರ್ಷದ ವಾರ್ಷಿಕ ಹಬ್ಬ ದ್ವಾನವತಿ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಪುಣ್ಚಪ್ಪಾಡಿಯ ಊರವರು ಶಾಲೆಯನ್ನು ತಮ್ಮ ಮನೆಯಂತೆ ನೋಡಿಕೊಂಡು ಬೆಳೆಸುತ್ತಿರುವುದು ಶ್ಲಾಘನೀಯ ಎಂದರು. ಜಿಲ್ಲಾ ಪಂಚಾಯತ್ ನಿಂದ ಶಾಲೆಗೆ ಮಂಜೂರಾದ ರೂ. 1 ಲಕ್ಷ ಅನುದಾನದಿಂದ ಶಾಲೆಯ ನೆಲಕ್ಕೆ ಹಾಸಲಾದ ನೆಲಹಾಸನ್ನು ಉದ್ಘಾಟಿಸಿ ಮಾತನಾಡಿದ ತಾಲೂಕು ಪಂಚಾಯತ್ ಉಪಾಧ್ಯಕ್ಷೆ ಲಲಿತಾ ಈಶ್ವರ್ ಶಾಲೆಯ ಬೆಳವಣಿಗೆಗೆ ಊರವರ ಅಹರ್ನಿಶಿ ಶ್ರಮವೇ ಕಾರಣ. ಅಂತಹ ಪರಿಶ್ರಮವನ್ನು ಶಾಲೆಗೆ ಬಳಸಿಕೊಳ್ಳುವಲ್ಲಿ ಪುಣ್ಚಪ್ಪಾಡಿ ಶಾಲೆ ಯಶಸ್ವಿಯಾಗಿದೆ ಎಂದರು.
ಸವಣೂರು ಗ್ರಾಮ ಪಂಚಾಯತ್ ವತಿಯಿಂದ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ರೂ. 3.81 ಲಕ್ಷ ಅನುದಾನದಲ್ಲಿ ರಚನೆಗೊಂಡ ಶಾಲಾ ಆವರಣ ಗೋಡೆಯನ್ನು ಶಾಲಾರ್ಪಣೆ ಮಾಡಿ ಮಾತನಾಡಿದ ತಾ.ಪಂ.ಸದಸ್ಯೆ ರಾಜೇಶ್ವರಿ ಕನ್ಯಾಮಂಗಲ ಅವರು, ಸರಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳುವುದು ಎಲ್ಲರ ಹಕ್ಕು. ಪುಣ್ಚಪ್ಪಾಡಿ ಪುಟ್ಟ ಶಾಲೆ ಸರಕಾರಿ ಸೌಲಭ್ಯಗಳನ್ನು ಯಶಸ್ವಿಯಾಗಿ ಪಡೆದುಕೊಂಡಿರುವುದು ಅಭಿನಂದನೀಯ ಸಂಗತಿ ಎಂದರು. ಸವಣೂರು ಗ್ರಾಮ ಪಂಚಾಯತ್ ವತಿಯಿಂದ ನಿರ್ಮಿಸಿದ ನವೀಕೃತ ಕಲಿಕಾ ಕುಟೀರವನ್ನು ಶಾಲಾರ್ಪಣೆ ಮಾಡಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸವಣೂರು ಗ್ರಾ.ಪಂ.ಅಧ್ಯಕ್ಷೆ ಬಿ.ಕೆ.ಇಂದಿರಾ ಮಾತನಾಡಿ ಪುಣ್ಚಪ್ಪಾಡಿ ಶಾಲೆಯ ಕಾರ್ಯಕ್ರಮವೆಂದರೆ ಅದು ವಿಶಿಷ್ಟವಾಗಿ ಮೂಡಿ ಬರುತ್ತದೆ. ಅದೊಂದು ಹೊಸ ಶೈಕ್ಷಣಿಕ ಅಂಶಗಳನ್ನು ಬಿಂಬಿಸುತ್ತದೆ ಎಂದರು.
ಸವಣೂರು ಗ್ರಾಮ ಪಂಚಾಯತ್ ವತಿಯಿಂದ ನಿರ್ಮಿಸಿದ ನವೀಕೃತ ರಂಗಮಂದಿರವನ್ನು ಉದ್ಘಾಟಿಸಿದ ಗ್ರಾ.ಪಂ. ಉಪಾಧ್ಯಕ್ಷ ರವಿಕುಮಾರ್ ಬಿ.ಕೆ. ಮಾತನಾಡಿ ಮಕ್ಕಳ ರಂಗ ಚಟುವಟಿಕೆಗಳಿಗೆ ಬಹಳ ಅವಶ್ಯಕ. ನೂರಾರು ಮಕ್ಕಳ ಪ್ರತಿಭೆ ಅರಳಲು ಸಹಕಾರಿ ಎಂದರು. ಶಾಲಾ ವಾರ್ಷಿಕ ವರದಿ ಪುಣ್ಚಾಕ್ಷರಿಯನ್ನು ಬಿಡುಗಡೆ ಮಾಡಿದ ಗ್ರಾ.ಪಂ.ಸದಸ್ಯ ಗಿರಿಶಂಕರ ಸುಲಾಯ ಮಾತನಾಡಿ ಶಾಲೆಯಲ್ಲಿ ನಡೆಸುವ ಎಲ್ಲಾ ಚಟುವಟಿಕೆಗಳೂ ಮಕ್ಕಳಿಗೆ ಹೊಸ ಅನುಭವವನ್ನು ನೀಡುತ್ತದೆ. ಈ ದಿಶೆಯಲ್ಲಿ ಪುಣ್ಚಪ್ಪಾಡಿ ಶಾಲೆ ಮಾದರಿಯಾಗಿ ನಿಂತಿದೆ ಎಂದರು. ಶಾಲಾ ವಾರ್ಷಿಕ ಚಟುವಟಿಕೆಗಳ ದಾಖಲೀಕರಣ ಪುಣ್ಚದನಿಯನ್ನು ಬಿಡುಗಡೆಗೊಳಿಸಿದ ತಾ.ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡ ಮಾತನಾಡಿ, ಪುಣ್ಚಪ್ಪಾಡಿ ಶಾಲೆಯಲ್ಲಿ ನಡೆಯುತ್ತಿರುವ ವಿಶಿಷ್ಟ ಚಟುವಟಿಕೆಗಳು ಇಡೀ ಶಿಕ್ಷಣ ಇಲಾಖೆ ಹೆಮ್ಮೆ ಪಡುವಂತಾಗಿದೆ. ಮಕ್ಕಳನ್ನು ಕ್ರಿಯಾತ್ಮಕಗೊಳಿಸುವಲ್ಲಿ ಪೋಷಕರು, ಶಿಕ್ಷಕರು, ಊರವರು ನಡೆಸುವ ಸೃಜನಾತ್ಮಕ ಚಟುವಟಿಕೆಗೂ ಹಾಗೇ ಮುಂದುವರೆಯಲಿ ಎಂದರು. ಶಾಲಾ ಮಕ್ಕಳ ವಾರ್ಷಿಕ ಹಸ್ತಪ್ರತಿ ಪುಣ್ಚಪದವನ್ನು ಬಿಡುಗಡೆ ಮಾಡಿದ ಸಿಆರ್‍ಪಿ ವೆಂಕಟೇಶ್ ಅನಂತಾಡಿ ಮಾತನಾಡಿ, ಮಕ್ಕಳಿಗೆ ಅವಕಾಶ ಸಿಕ್ಕಾಗ ಮಾತ್ರ ಅವರ ಸೃಜನಾತ್ಮಕತೆ ಬೆಳೆಯಲು ಸಾಧ್ಯ. ಈ ಹಸ್ತಪ್ರತಿ ಪುಣ್ಚಪದ ಮಕ್ಕಳ ಸೃಜನಾತ್ಮಕತೆಯ ಅನಾವರಣಕ್ಕೆ ಒಂದು ನಿದರ್ಶನ ಎಂದರು. ತಾಲೂಕು ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಅಧ್ಯಕ್ಷರಾದ ಸುರೇಶ್ ಕುಮಾರ್ ಪಿ.ಎಂ, ಜನಜಾಗೃತಿ ವೇದಿಕೆಯ ಸವಣೂರು ವಲಯದ ಅಧ್ಯಕ್ಷ ನ್ಯಾಯವಾದಿ ಮಹೇಶ್ ಕೆ. ಸವಣೂರು, ಶಾಲಾ ಧ್ವಜಾರೋಹಣ ಮಾಡಿದ ಊರ ಹಿರಿಯರಾದ ಪಿ.ಡಿ.ಗಂಗಾಧರ ರೈ ಶುಭಹಾರೈಸಿದರು.
ಸಮ್ಮಾನ ಕಾರ್ಯಕ್ರಮ:
ರಾಷ್ಟ್ರೀಯ ಯುವ ಸಮ್ಮಾನ್ ಪ್ರಶಸ್ತಿ ಪುರಸ್ಕತ ಶಾಲೆಯ ಹಿರಿಯ ವಿದ್ಯಾರ್ಥಿ ಸುರೇಶ್ ರೈ ಸೂಡಿಮಳ್ಳು ಅವರನ್ನು ಶಾಲು ಹೊದಿಸಿ ಫಲಪುಷ್ಪ, ಸ್ಮರಣಿಕೆ ನೀಡಿ ಶಾಲಾ ವತಿಯಿಂದ ಅಭಿನಂದಿಸಲಾಯಿತು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಸುರೇಶ್ ರೈ ಸೂಡಿಮುಳ್ಳು ಪುಣ್ಚಪ್ಪಾಡಿ ಶಾಲೆಯು ಊರಿನ ಚಟುವಟಿಕೆಗಳ ಕೇಂದ್ರವಾಗುತ್ತಿರುವುದು ಅಭಿನಂದನೀಯ ಸಂಗತಿ ಎಂದರು.
ಸವಣೂರು ಗ್ರಾಮ ಪಂಚಾಯತ್ ಸದಸ್ಯ ನಾಗೇಶ್ ಓಡಂತರ್ಯ, ನಿವೃತ್ತ ಮುಖ್ಯಗುರುಗಳಾದ ಮೋನಪ್ಪ ನಾಯ್ಕ, ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಉಮಾಶಂಕರ ಗೌಡ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅನಿತ್ ಕುಮಾರ್ ಉಪಸ್ಥಿತರಿದ್ದರು.
ಶಾಲಾ ಮುಖ್ಯಗುರು ಕು.ರಶ್ಮಿತಾ ನರಿಮೊಗರು ಪ್ರಸ್ತಾವನೆಯೊಂದಿಗೆ ಸ್ವಾಗತಿಸಿ, ಶಾಲಾ ವಾರ್ಷಿಕ ವರದಿ ವಾಚಿಸಿದರು. ಶಿಕ್ಷಕರಾದ ಶೋಭಾ ಕೆ., ಯಮುನಾ ಬಿ. ಬಹುಮಾನ ಪಟ್ಟಿ ವಾಚಿಸಿದರು. ಫ್ಲಾವಿಯ ಸಿಲ್ವಿನ್ ಮೊಂತೆರೋ, ಯತೀಶ್ ಕುಮಾರ್ ಕೆ.ಎಂ. ಕಾರ್ಯಕ್ರಮ ನಿರ್ವಹಿಸಿದರು. ಎಸ್.ಡಿ.ಎಮ್.ಸಿ. ಸದಸ್ಯರು ಅತಿಥಿಗಳನ್ನು ಗೌರವಿಸಿದರು. ಊರವರು, ವಿದ್ಯಾಭಿಮಾನಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.