ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಅಡಿಕೆ ಬೆಳೆಗಾರರ ಹಕ್ಕೊತ್ತಾಯ ಸಮಾವೇಶ ವಿಜಯಕರ್ನಾಟಕ ಪತ್ರಿಕೆಯ ಆಶ್ರಯದಲ್ಲಿ ಪುತ್ತೂರಿನಲ್ಲಿ ನಡೆಯಿತು.
ವಿಜಯಕರ್ನಾಟಕ ವತಿಯಿಂದ ಆಯೋಜನೆಗೊಂಡ ಸಮಾವೇಶವನ್ನು ಒಡಿಯೂರು ಶ್ರೀಶ್ರೀ ಗುರುದೇವಾನಂದ ಸ್ವಾಮೀಜಿ ಉದ್ಘಾಟಿಸಿ, ಕೃಷಿಕರು ಸಂಘಟಿತರಾಗಬೇಕಾದ ಅನಿವಾರ್ಯತೆ ಇದೆ. ಅಡಿಕೆ ಎನ್ನುವುದು ಕೇವಲ ಕೃಷಿಯಲ್ಲ ಅದೊಂದು ಸಂಸ್ಕೃತಿ. ಅಡಿಕೆ ಉಳಿದರೆ ಮಾತ್ರವೇ ಎಲ್ಲವೂ. ಹೀಗಾಗಿ ಎಲ್ಲರೂ ಒಂದಾಗಿ ಅಡಿಕೆ ಪರವಾಗಿ ಹೋರಾಟ ಮಾಡಬೇಕಿದೆ ಎಂದರು.
ಕ್ಯಾಂಪ್ಕೋ ಅದ್ಯಕ್ಷ ಎಸ್ ಆರ್ ಸತೀಶ್ಚಂದ್ರ ಮಾತನಾಡಿ, ಅಡಿಕೆ ಪರವಾಗಿ ಕ್ಯಾಂಪ್ಕೋ ಕೆಲಸ ಮಾಡಿದೆ. ಮುಂದೆಯೂ ಮಾಡುತ್ತಿದೆ. ಇದೀಗ ಆರ್ ಸಿ ಇ ಪಿ ಗೆ ಸಹಿ ಹಾಕುವ ಮುನ್ನ ಚರ್ಚೆಯಾಗಬೇಕು ಎಂದು ಒತ್ತಾಯಿಸಿದ್ದು ಅಡಿಕೆ ಬೆಳೆಗಾರರಿಗೆ ಯಾವುದೇ ಆತಂಕ ಬೇಡ ಎಂದು ಹೇಳಿದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ ಎನ್ ರಾಜೇಂದ್ರ ಕುಮಾರ್ ಮಾತನಾಡಿ ಅಡಿಕೆ ಧಾರಣೆ ಇದ್ದರೆ ಮಾತ್ರವೇ ಕರಾವಳಿ ಜಿಲ್ಲೆಯಲ್ಲಿ ವ್ಯಾಪಾರ ವಹಿವಾಟು ಸರಿಯಾಗಿ ನಡೆಯಲು ಸಾದ್ಯ. ಇದೀಗ ಮುಕ್ತ ವ್ಯಾಪಾರ ಒಪ್ಪಂದದ ಭೀತಿ ಕೃಷಿಕರಿಗೆ ಕಾಡುತ್ತಿದೆ. ಇದರ ವಿರುದ್ಧ ಎಲ್ಲರೂ ಒಂದಾಗಬೇಕು ಎಂದರು.
ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಅಡಿಕೆ ಮಾರುಕಟ್ಟೆ ತಜ್ಞ ಡಾ.ವಿಘ್ನೇಶ್ವರ ಭಟ್ ವರ್ಮುಡಿ, ಬದನಾಜೆ ಶಂಕರ ಭಟ್ , ಪುತ್ತೂರು ಶಾಸಕ ಸಂಜೀವ ಮಟಂದೂರು ಮಾತನಾಡಿದರು. ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು, ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಮಂಚಿ ಶ್ರೀನಿವಾಸ ಆಚಾರ್ ಉಪಸ್ಥಿತರಿದ್ದರು.
ವಿಜಯಕರ್ನಾಟಕ ಮುಖ್ಯವರದಿಗಾರ ಸುಧಾಕರ ಸುವರ್ಣ ಸ್ವಾಗತಿಸಿ ನಿರೂಪಿಸಿದರು. ಸ್ಥಾನೀಯ ಸಂಪಾದಕ ಕುಮಾರನಾಥ್ ಪ್ರಸ್ತಾವನೆಗೈದರು.

ಅಡಿಕೆ ಬೆಳೆಗಾರರ ಹಕ್ಕೊತ್ತಾಯ ಸಮಾವೇಶದ ನಿರ್ಣಯಗಳು
* ಅಡಿಕೆ ಆರೋಗ್ಯಕ್ಕೆ ಹಾನಿಕಾರಕ ಎಂಬ ಅವೈಜ್ಞಾನಿಕ ವರದಿಯನ್ನು ಕೈಬಿಡಬೇಕು. ಅಡಿಕೆ ಆರೋಗ್ಯಕ್ಕೆ ಹಾನಿಕಾರಕವೆಂದು ಯಾವ ಸಂಶೋಧನೆಯಿಂದಲೂ ಇದುವರೆಗೂ ದೃಢಪಟ್ಟಿಲ್ಲ. ಕೇಂದ್ರ ಸರಕಾರವು ಸುಪ್ರೀಂ ಕೋರ್ಟ್ಗೆ ಸಲ್ಲಿಸಿರುವ ಅಡಕೆ ಆರೋಗ್ಯಕ್ಕೆ ಹಾನಿಕಾರಕವೆಂಬ ಪ್ರಮಾಣ ಪತ್ರವನ್ನು ಕೂಡಲೇ ಹಿಂತೆಗೆದುಕೊಳ್ಳಬೇಕು.
* ಅಡಿಕೆ ಉದ್ಯಮದ ಸ್ಥಾನಮಾನ, ಅಡಿಕೆ ರಫ್ತು ಮೂಲಕ ವಿದೇಶಿ ವಿನಿಯಮ ಹೆಚ್ಚಳ, ಮಾರುಕಟ್ಟೆಬಲವರ್ಧನೆ ಮೂಲಕ ಬೆಲೆ ಸ್ಥಿರೀಕರಣ, ಅಡಕೆಗೆ ಸಂಬಂಧಿಸಿದ ಕಾನೂನಾತ್ಮಕ ಸಮಸ್ಯೆಗಳು, ಅಡಿಕೆ ಬೆಳೆ ಅವಲಂಬಿತ ಸಣ್ಣ ಮತ್ತು ಅತಿ ಸಣ್ಣ ರೈತರ ಶ್ರೇಯೋಭಿವೃದ್ಧಿ ಹಿನ್ನೆಲೆಯಲ್ಲಿ ಮಂಡಳಿ ಸ್ಥಾಪನೆ ಮಾಡಬೇಕೆಂಬುದು ಹಲವು ವರ್ಷಗಳ ಬೇಡಿಕೆಯಾಗಿದೆ. ಅಡಿಕೆ ಹಾಗೂ ಅಡಿಕೆ ಬೆಳೆಗಾರರ ಹಿತರಕ್ಷಣೆಗಾಗಿ ಕೇಂದ್ರ ಸರಕಾರ ತಕ್ಷಣವೇ ಅಡಿಕೆ ಮಂಡಳಿ ಸ್ಥಾಪನೆ ಮಾಡಬೇಕು.
* ಕೊಳೆ ರೋಗ, ಹಳದಿ ಎಲೆ ರೋಗಕ್ಕೆ ಇದೂವರೆಗೆ ವೈಜ್ಞಾನಿಕ ಕ್ರಮದ ಔಷಧವನ್ನು ಕಂಡು ಹಿಡಿಯಲಾಗಿಲ್ಲ, ಈ ರೋಗಗಳಿಗೆ ಈಗಲೂ ಹಳೇ ಮಾದರಿಯ ಚಿಕಿತ್ಸಾ ಕ್ರಮವನ್ನೇ ಅನುಸರಿಸಲಾಗುತ್ತಿದೆ. ಬೆಳೆಯಲ್ಲಿ ರೋಗ ಮತ್ತು ಕೀಟಗಳ ನಿರ್ವಹಣೆಗೆ ಪೂರಕವಾದ ವೈಜ್ಞಾನಿಕ ಸಂಶೋಧನೆ ಜತೆಗೆ ಅಡಕೆಯ ಮೌಲ್ಯವರ್ಧನೆ, ಪರ್ಯಾಯ ಬಳಕೆಗೆ ಸಂಬಂಸಿದ ಸಂಶೋಧನೆಗಳನ್ನು ನಡೆಸಲು ಅತ್ಯಾಧುನಿಕ ಮತ್ತು ಸುಸಜ್ಜಿತ ಸಂಶೋಧನಾ ಕೇಂದ್ರವನ್ನು ರಾಜ್ಯದಲ್ಲಿ ತೆರೆಯಬೇಕು.
* ಅಡಿಕೆ ಧಾರಣೆ ಏರಿಳಿತಕ್ಕೆ ವಿದೇಶಗಳಿಂದ ಭಾರಿ ಪ್ರಮಾಣದಲ್ಲಿ ವಿಶೇಷವಾಗಿ ಕಳ್ಳಮಾರ್ಗದಲ್ಲಿ ಕಳಪೆ ಗುಣಮಟ್ಟದ ಅಡಕೆ ಆಮದಾಗುತ್ತಿದೆ. ಶ್ರೀಲಂಕಾದೊಂದಿಗೆ ಇರುವ ಮುಕ್ತ ವಾಣಿಜ್ಯ ವ್ಯಾಪಾರ ಒಪ್ಪಂದದ ಅನ್ವಯ ಇಂಡೋನೇಷ್ಯಾ, ಮಲೇಷ್ಯಾದ ಕಾಡು ಉತ್ಪನ್ನವಾದ ಕಳಪೆ ಅಡಿಕೆಯು ಭಾರಿ ಪ್ರಮಾಣದಲ್ಲಿ ಬರುತ್ತಿದೆ. ಅದನ್ನು ಇಲ್ಲಿನ ಗುಣಮಟ್ಟದ ಅಡಿಕೆಯೊಂದಿಗೆ ಕಲಬೆರಕೆ ಮಾಡಲಾಗುತ್ತಿದ್ದು, ದೇಸಿ ಅಡಿಕೆ ಬೆಲೆ ಕಳೆದುಕೊಳ್ಳುತ್ತಿದೆ. ಹೀಗಾಗಿ ವಿದೇಶದಿಂದ ಅಡಿಕೆ ಆಮದನ್ನು ನಿಷೇಸಬೇಕು.
* ವಿಯೆಟ್ನಾಂನಿಂದ ಭಾರಿ ಪ್ರಮಾಣದಲ್ಲಿ ಕಾಳುಮೆಣಸು ಆಮದಾಗುತ್ತಿರುವುದರಿಂದ ದೇಸಿ ಕಾಳು ಮೆಣಸು ಬೆಲೆ ಕಳೆದುಕೊಂಡಿದೆ. ಅಡಿಕೆ ಬೆಳೆಗಾರರು ಕರಿಮೆಣಸಿನ ಆದಾಯವನ್ನು ಅಡಿಕೆ ತೋಟದ ನಿರ್ವಹಣೆ ವೆಚ್ಚವನ್ನಾಗಿ ಪರಿಗಣಿಸುತ್ತಾರೆ. ಆದರೆ ಇತ್ತೀಚೆಗೆ ತೋಟದ ವೆಚ್ಚಇರಲಿ, ಬೆಳೆ ವೆಚ್ಚಸಹ ಬರುತ್ತಿಲ್ಲ. ಹೀಗಾಗಿ ಕಾಳುಮೆಣಸು ಆಮದನ್ನು ನಿಷೇಸಬೇಕು. ವಿದೇಶದಿಂದ ಕಳ್ಳಸಾಗಣೆ ತಡೆಯಬೇಕು. ವಿದೇಶಿ ಆಮದು ಶುಲ್ಕವನ್ನು ಹೆಚ್ಚಳ ಮಾಡಬೇಕು. ಬೆಂಬಲ ಬೆಲೆ ಘೋಷಿಸಬೇಕು. ಕಾಳು ಮೆಣಸು ಪಾರ್ಕ್ ಸ್ಥಾಪನೆ ಮಾಡಬೇಕು.