ಪುತ್ತೂರು: ಪೂರ್ವ ಪರಂಪರೆಯಿಂದ ಬಂದಿರುವ ಭರತನಾಟ್ಯ ಕಲೆಗೆ ಹೆಚ್ಚಿನ ಅಡವುಗಳಿವೆ. ಪ್ರಸ್ತುತ ದಿನಗಳಲ್ಲಿ ಭರತನಾಟ್ಯ ಕಲಿಯುವವರಿಗಿಂತಲೂ ಕಲಿಸಿಕೊಡುವವರು ಜಾಸ್ತಿ ಇದ್ದರೂ ಕೆಟ್ಟ ಪ್ರದರ್ಶನ ನೀಡುವುದು ಸರಿಯಲ್ಲ. ಭರತನಾಟ್ಯದಲ್ಲಿ ಶುದ್ಧತೆಯನ್ನು ಕಾಪಾಡಿಕೊಳ್ಳುವುದು ಅಗತ್ಯ. ಇಲ್ಲವಾದರೆ ಕಲೆ ನಶಿಸುವ ಸಾಧ್ಯತೆ ಇದೆ ಎಂದು ಮಂಗಳೂರಿನ ಕೊಲ್ಯ ನಾಟ್ಯನಿಕೇತನದ, ಶಾಂತಲಾ ಪ್ರಶಸ್ತಿ ಪುರಸ್ಕೃತ ನೃತ್ಯಗುರು ವಿದ್ವಾನ್ ಉಳ್ಳಾಲ ಮೋಹನ್ ಕುಮಾರ್ ಹೇಳಿದರು.
ಅವರು ಭಾನುವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಪುತ್ತೂರಿನ ನೃತ್ಯೋಪಾಸನಾ ಕಲಾಕೇಂದ್ರ(ರಿ.)ಇದರ `ವರ್ಷಸಂಭ್ರಮ-15′ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪುತ್ತೂರಿನ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ, ನಮ್ಮ ದೇಶದಲ್ಲಿ ಶಿಕ್ಷಣ ಪಡೆದ ಅನೇಕರು ಅಮೇರಿಕ ಸೇರಿದಂತೆ ಹೊರ ದೇಶಗಳ ಹೊಟ್ಟೆ ತುಂಬಿಸುವ ಕೆಲಸ ಮಾಡುತ್ತಿದ್ದಾರೆಯೇ ಹೊರತು ಭಾರತವನ್ನು ಉಳಿಸುವ ಕೆಲಸ ಮಾಡುತ್ತಿಲ್ಲ. ಆದರೆ ಭರತನಾಟ್ಯ ಭಾರತವನ್ನು ಉಳಿಸುವ, ಭಾರತದ ಸಂಸ್ಕೃತಿ ಉಳಿಸುವ ಶಿಕ್ಷಣ ನೀಡುತ್ತದೆ.ಇಂತಹ ಸಂಸ್ಕೃತಿಯನ್ನು ವಿದೇಶದಲ್ಲಿ ಪ್ರಸಾರ ಮಾಡಿ ದೇಶದ ಘನತೆಯನ್ನು ಹೆಚ್ಚಿಸುವ ಜವಾಬ್ದಾರಿ ಕೆಲಸ ನಮ್ಮ ಮಕ್ಕಳ ಮೇಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ.ಕೃಷ್ಣ ಭಟ್ ಮಾತನಾಡಿ, ಒಂದೇ ಸಮಯದಲ್ಲಿ ತುಂಬ ಕೆಲಸ ಮಾಡುವ ಮೂಲಕ ವೈಯಕ್ತಿಕ ಚರಿಷ್ಮಾ ಭರತನಾಟ್ಯದ ಮೂಲಕ ಆಗುತ್ತದೆ. ನೃತ್ಯದ ಜೊತೆಗೆ ಕಲಿಕೆಗೂ ಆದ್ಯತೆ ನೀಡಬೇಕು. ಇದನ್ನು ಪೋಷಕರು ಅರ್ಥಮಾಡಿಕೊಳ್ಳಬೇಕು ಎಂದರು.
ನೃತ್ಯೋಪಾಸನಾ ಗೌರವ: ಪುತ್ತೂರಿನ ಛಾಯಾಚಿತ್ರ ಗ್ರಾಹಕ, ಶ್ರೀ ಗಣೇಶ ವಿಗ್ರಹದ ಶಿಲ್ಪಿಗಳೂ ಆಗಿರುವ ಪ್ರಭು ಸ್ಟುಡಿಯೋ ಮಾಲೀಕ ಶ್ರೀನಿವಾಸ ಪ್ರಭು ಅವರಿಗೆ ನೃತ್ಯೋಪಾಸನಾ
ಕಲಾ ಕೇಂದ್ರದಿಂದ ನೃತ್ಯೋಪಾಸನಾ ಗೌರವ ಪ್ರದಾನ ಮಾಡಲಾಯಿತು. ಇದೇ ಸಂದರ್ಭ ಕರ್ನಾಟಕ ಪ್ರೌಢಶಿಕ್ಷಣ ಮಂಡಳಿ ನಡೆಸಿದ ಭರತನಾಟ್ಯ ಜೂನಿಯರ್, ಸೀನಿಯರ್ ಹಾಗೂ ವಿದ್ವತ್ ಪರೀಕ್ಷೆಯಲ್ಲಿ ನೃತ್ಯೋಪಾಸನಾ ಕಲಾಕೇಂದ್ರ ವಿದ್ಯಾರ್ಥಿಗಳು ಶೇ.100 ಫಲಿತಾಂಶ ಪಡೆದಿದ್ದು, ಅವರೆಲ್ಲರಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಲಾಯಿತು.
ನೃತ್ಯಪೋಷಣೆ ಯೋಜನೆಯಡಿ ಬಡ ವಿದ್ಯಾರ್ಥಿನಿ ರಾಮಕುಂಜದ ಯಶಸ್ವಿ ಅವರ ದತ್ತು ಸ್ವೀಕಾರ ಕಾರ್ಯಕ್ರಮ ನಡೆಯಿತು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರು ನೃತ್ಯಗುರು ವಿದುಷಿ ಶಾಲಿನಿ ಆತ್ಮಭೂಷಣ್ ಅವರ ಪಾದಕ್ಕೆ ಪುಷ್ಪಾರ್ಪಣೆ ಮಾಡಿ, ಫಲಪುಷ್ಪ, ಶಾಲು ಹೊದೆಸಿ ಗುರುನಮನ ಸಲ್ಲಿಸಿದರು.
ನೃತ್ಯಗುರು ವಿದುಷಿ ಶಾಲಿನಿ ಆತ್ಮಭೂಷಣ್ ಸ್ವಾಗತಿಸಿದರು. ಚೇತನ್ ಆನೆಗುಂಡಿ ವಂದಿಸಿದರು. ವಿವೇಕಾನಂದ ಕಾಲೇಜಿನ ಉಪನ್ಯಾಸಕಿ ಡಾ.ವಿದ್ಯಾಸರಸ್ವತಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಪುತ್ತೂರು ಹಾಗೂ ಉಪ್ಪಿನಂಗಡಿ ಕಲಾ ತಂಡಗಳಿಂದ ನೃತ್ಯ ಕಾರ್ಯಕ್ರಮ ನಡೆಯಿತು. ನಟುವಾಂಗದಲ್ಲಿ ವಿದುಷಿ ಶಾಲಿನಿ ಆತ್ಮಭೂಷಣ್, ಹಾಡುಗಾರಿಕೆಯಲ್ಲಿ
ವಸಂತ ಕುಮಾರ್ ಗೋಸಾಡ, ಮೃದಂಗದಲ್ಲಿ ರಾಜೀವ್ ಗೋಪಾಲ್ ಕಾಞಂಗಾಡ್, ವಯಲಿನ್‍ನಲ್ಲಿ ವಿದ್ವಾನ್ ಬಾಲರಾಜ್ ಕಾಸರಗೋಡು ಸಹಕರಿಸಿದರು.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…