ಪುತ್ತೂರು: ಹಲಸಿನ ತಳಿ ಅಭಿವೃದ್ಧಿಗೆ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಶ್ರಮಿಸುತ್ತಿದೆ. ಅದರ ಜೊತೆಗೆ ಹಲಸಿನ ಮೌಲ್ಯವರ್ಧನೆ ಕಡೆಗೂ ಆಸಕ್ತವಾಗಿದ್ದು ಈಗಾಗಲೇ ತರಬೇತಿ ನೀಡಿ ಸಹಾಯ ಮಾಡುವ ಕೆಲಸ ಮಾಡುತ್ತಿದೆ ಎಂದು ಎಂದು ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ದಿನೇಶ್ ಹೇಳಿದರು.
ಅವರು ಶನಿವಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ನಟರಾಜ ವೇದಿಕೆಯಲ್ಲಿ ಪುತ್ತೂರು ಹಲಸು ಸ್ನೇಹ ಸಂಗಮ, ಬೆಂಗಳೂರಿನ ಐಎಚ್‍ಆರ್ ಮತ್ತು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯ, ಪುತ್ತೂರು ಜೆಸಿಐ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ ವತಿಯಿಂದ 2 ದಿನಗಳ ಕಾಲ ನಡೆಯಲಿರುವ ಹಲಸು ಸಾರ ಮೇಳವನ್ನು ಉದ್ಘಾಟಿಸಿ ಮಾತನಾಡಿದರು. ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯು ಈಗಾಗಲೇ ಯುವಕರಿಗೆ ತರಬೇತಿ ನೀಡುವ ಕಾರ್ಯ ಮಾಡಿದೆ. ಇದರ ಫಲವಾಗಿ ಯುವಕರು ವಾರ್ಷಿಕವಾಗಿ 7 ರಿಂದ 8 ಲಕ್ಷ ಆದಾಯ ಪಡೆಯುತ್ತಿದ್ದಾರೆ ಎಂದ ಅವರು ಹಲಸು ತಳಿ ವೈವಿಧ್ಯತೆ ಆದ್ಯತೆ ನೀಡಲಾಗುತ್ತಿದೆ. ರೈತರೂ ಮುಂದೆ ಬಂದರೆ ಇನ್ನಷ್ಟು ಅಭಿವೃದ್ಧಿ ಮಾಡಲು ಸಾಧ್ಯವಿದೆ. ಕೃಷಿ ಉದ್ಯಮವಾಗಲು, ಕೃಷಿಕನೇ ಆಸಕ್ತಿ ವಹಿಸಬೇಕು. ಕೃಷಿ ಉದ್ಯಮವಾಗಲು ತರಬೇತಿಯೂ ಅಗತ್ಯ ಎಂದು ಹೇಳಿದರು.
ದಿಕ್ಸೂಚಿ ಭಾಷಣ ಮಾಡಿದ ಆಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಮಂಚಿ ಶ್ರೀನಿವಾಸ್ ಆಚಾರ್, ಕೃಷಿ ಅಭಿವೃದ್ಧಿಗೆ ಜನರೇ ಇಲ್ಲದ ಸ್ಥಿತಿ ಇದೆ. ಹೀಗಿರುವಾಗ ಆದಾಯ ದ್ವಿಗುಣವಾಗಬೇಕಾದ ಅನಿವಾರ್ಯತೆ ಇಂದಿದೆ. ಅಡಿಕೆಗೆ ಇಲ್ಲಿ ಪ್ರಾಮುಖ್ಯತೆ ಇದ್ದರೂ ಮುಂದಿನ ದಿನಗಳಲ್ಲಿ ಜನರ ಹಸಿವು ನೀಗಿಸುವ ಕೃಷಿ ಉಪನ್ನಗಳನ್ನು ಬೆಳೆಸುವ ಕೃಷಿ ಪದ್ದತಿಯನ್ನು ನಾವು ಅನುಷ್ಠಾನಗೊಳಿಸಬೇಕಾಗಿದೆ. ಹಲಸಿನ ಕೃಷಿಗೆ ಮನಸ್ಸು ಮಾಡಬೇಕಾಗಿದೆ ಎಂದರು.
ಅಡಿಕೆ ಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕ ಶ್ರೀಪಡ್ರೆ ಮಾತನಾಡಿ ಹಲಸಿನ ಹಣ್ಣಿನ ಕುರಿತು ಕರ್ನಾಟಕದ ಜನರಲ್ಲಿರುವ ಕೀಳರಿಮೆ ದೂರವಾಗಬೇಕು. ಕಾರ್ಮಿಕರ ಕೊರತೆಯನ್ನು ಎದುರಿಸುತ್ತಿರುವ ಜಿಲ್ಲೆಯಲ್ಲಿ ಕೃಷಿಕರು ಹಲಸಿನ ಬೆಳೆಯತ್ತ ಗಮನಹರಿಸಿದರೆ ಹಲಸು ಖಂಡಿತವಾಗಿಯೂ ರೈತನ ಕೈ ಹಿಡಿಯುತ್ತದೆ ಎಂದರು.
ಮುಳಿಯ ಜ್ಯುವೆಲ್ಸ್‍ನ ಕೃಷ್ಣನಾರಾಯನ ಮುಳಿಯ ಮಾತನಾಡಿ, ಹಲಸು ಬೆಳೆಯುವುದರ ಜೊತೆಗೆ ಮಾರುಕಟ್ಟೆ ಹಾಗೂ ಬಳಕೆ ಕಡೆಗೂ ಆಸಕ್ತಿವಹಿಸಬೇಕು ಎಂದರು. ಹಲಸು ರಫ್ತು ಕಡೆಗೆ ಗುಂಪಾಗಿ ಯೋಚನೆ ಮಾಡಬಹುದು ಎಂದರು.
ಹಲಸು ಸ್ನೇಹ ಸಂಗಮದ ಅಧ್ಯಕ್ಷ ಸೇಡಿಯಾಪು ಜನಾರ್ಧನ ಭಟ್ ಸಭಾಧ್ಯಕ್ಷತೆ ವಹಿಸಿದ್ದರು.
ಪುತ್ತೂರಿನ ನವಚೇತನ ಸ್ನೇಹ ಸಂಗಮದ ಅಧ್ಯಕ್ಷ ಅನಂತ ಪ್ರಸಾದ್ ನೈತಡ್ಕ ಪ್ರಸ್ತಾವನೆಗೈದರು. ಪುತ್ತೂರು ಜೇಸಿಐ ಅಧ್ಯಕ್ಷ ಗೌತಮ ರೈ ಸ್ವಾಗತಿಸಿ, ಹಲಸು ಸ್ನೇಹ ಸಂಗಮದ ಕಾರ್ಯದರ್ಶಿ ಸುಹಾಸ್ ಎ.ಪಿ. ಮರಿಕೆ ವಂದಿಸಿದರು. ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ ಕಾರ್ಯಕ್ರಮ ನಿರೂಪಿಸಿದರು.