ಸವಣೂರು : ಎಪಿಎಂಸಿ ರೈಲ್ವೇ ಅಂಡರ್‌ಪಾಸ್ ಕಾಮಗಾರಿಗೆ ಮೂಲ ಸೌಕರ್ಯ ನಿಽಯಿಂದ ಅನುದಾನಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಚಾರ್ವಾಕದ ಅವರ ಮನೆಯಲ್ಲಿ ಪುತ್ತೂರು ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ಮನವಿ ಸಲ್ಲಿಸಿದರು.
ಪುತ್ತೂರು ಎಪಿಎಂಸಿ ರಸ್ತೆಯಲ್ಲಿ ರೈಲ್ವೇ ಅಂಡರ್‌ಪಾಸ್ ನಿರ್ಮಾಣಕ್ಕೆ ಈಗಾಗಲೇ 12.70 ಕೋಟಿಯ ಕ್ರಿಯಾಯೋಜನೆ ತಯಾರಿಸಲಾಗಿದ್ದು, ರೈಲ್ವೇ ಇಲಾಖೆ ಹಾಗೂ ಎಪಿಎಂಸಿ 50:50 ಯಂತೆ ಅನುದಾನ ಭರಿಸುವ ಕುರಿತು ಈಗಾಗಲೇ ಅಂದಾಜು ಪಟ್ಟಿ ಮಾಡಲಾಗಿದೆ. ಇದರಿಂದಾಗಿ ರೈಲ್ವೇ ಇಲಾಖೆ 6.35 ಕೋಟಿ ವೆಚ್ಚ ನೀಡಲಿದ್ದು,ಉಳಿದ 6.35 ಕೋಟಿ ರೂಗಳನ್ನು ಎಪಿಎಂಸಿ ಭರಿಸಬೇಕಾಗಿದೆ. ಈ ಕುರಿತು ಈಗಾಗಲೇ ಎಪಿಎಂಸಿ ವತಿಯಿಂದ ಪುತ್ತೂರು ನಗರ ಸಭೆ ,ಶಾಸಕರಿಗೆ,ಸಂಸದರಿಗೆ ಮನವಿ ಮಾಡಲಾಗಿದೆ.ಇದಕ್ಕಾಗಿ ಸರಕಾರದ ಮೂಲ ಸೌಕರ್ಯ ನಿಧಿಯಿಂದ ರೂ 5 ಕೋಟಿ ಅನುದಾನ ನೀಡುವಂತೆ ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ಅವರು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಮನವಿ ಸಲ್ಲಿಸಿದರು.
ಅಲ್ಲದೆ ಕಾಮಗಾರಿ ತ್ವರಿತವಾಗಿ ಆರಂಭಿಸಲು ರೈಲ್ವೇ ಇಲಾಖೆಯ ಡಿ.ಆರ್.ಎಂ ಅಪರ್ಣಾ ಗಾರ್ಗ್ ಅವರಿಗೆ ಶೋಭಾ ಕರಂದ್ಲಾಜೆ ಅವರು ದೂರವಾಣಿ ಮೂಲಕ ತಿಳಿಸಿದರು.
ಮರಳು ಸಮಸ್ಯೆ ಪರಿಹಾರಕ್ಕೆ ಸಭೆ: ಅಲ್ಲದೆ ಸರಕಾರದ ಮರಳು ನೀತಿಯಿಂದ ಜನತೆಗೆ ಸಮಸ್ಯೆಯಾಗಿದೆ.ಮನೆ ಹಾಗೂ ಯಾವುದೇ ಕಾಮಗಾರಿ ನಡೆಸಲು ಸಾಧ್ಯವಾಗದ ಸ್ಥಿತಿ ಇದೆ. ನಾನ್ ಸಿಆರ್‌ಝೆಡ್ ನವರಿಗೂ ಮರಳು ತೆಗೆಯಲು ಅವಕಾಶ ನೀಡುವ ಕುರಿತು ಸಚಿವರೊಂದಿಗೆ ಸಭೆ ನಡೆಸುವಂತೆಯೂ ಸಂಸದರಿಗೆ ದಿನೇಶ್ ಮೆದು ಮನವಿಮಾಡಿದರು.
ಪ್ರತಿಕ್ರಿಯೆ ನೀಡಿದ ಸಂಸದೆ ಶೋಭಾ ಕರಂದ್ಲಾಜೆ ಅವರು ದ.ಕ.ಸಂಸದ ನಳಿನ್ ಕುಮಾರ್ ಅವರ ನೇತೃತ್ವದಲ್ಲಿ ಜಿಲ್ಲೆಯ ಎಲ್ಲಾ ಶಾಸಕರ ಜತೆಗೂಡಿ ಮುಖ್ಯಮಂತ್ರಿ ಹಾಗೂ ಗಣಿ,ಭೂ ವಿಜ್ಞಾನ ಇಲಾಖೆಯ ಸಚಿವರ ಜತೆ ಸಭೆ ನಡೆಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು .ಮರಳು ಸಮಸ್ಯೆ ಸರಪಡಿಸಲು ಶ್ರಮಿಸಲಾಗುವುದು ಎಂದರು.
ಈ ಸಂದರ್ಭ ಸವಣೂರು ಗ್ರಾ.ಪಂ.ಸದಸ್ಯ ಪ್ರಕಾಶ್ ಕುದ್ಮನಮಜಲು, ಸ್ಥಳೀಯರಾದ ತೀರ್ಥರಾಮ ಕೆಡೆಂಜಿ,ಬೆಳಿಯಪ್ಪ ಗೌಡ ಚೌಕಿಮಠ ಹಾಜರಿದ್ದರು.