ಪುತ್ತೂರು: ಪುತ್ತೂರು ತಾಲೂಕಿನ ಕುರಿಯ ಎಂಬಲ್ಲಿ ಮಂಗಳವಾರ ಬೆಳಕಿಗೆ ಬಂದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಆರೋಪಿಯನ್ನು 24 ಗಂಟೆಯಲ್ಲಿ ಬಂಧಿಸುವಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಯಶಸ್ವಿಯಾಗಿರುತ್ತಾರೆ. ಆರೋಪಿಯು ಕುರಿಯ ಗ್ರಾಮದ ಕಟ್ಟತ್ತಾರು ನಿವಾಸಿ ಕರೀಂ ಖಾನ್ ( 29 ವರ್ಷ).

ಆರೋಪಿ ಕರೀಂ ಖಾನ್ ಸೋಮವಾರ ರಾತ್ರಿ ಸುಮಾರು 11 ಗಂಟೆಯ ವೇಳೆಗೆ ಶೇಕ್ ಕೊಗ್ಗು ಸಾಹೇಬ್ ಅವರ ಮನೆಗೆ ಕಳ್ಳತನದ ಉದ್ದೇಶದಿಂದ ಮನೆಯ ಗೋಡೆ ಮತ್ತು ಹಂಚಿನ ನಡುವೆ ನುಸುಳಿ ಒಳ ಪ್ರವೇಶಿಸಿದ್ದು ಕಳ್ಳತನ ನಡೆಸುವ ವೇಳೆ ಮನೆಯ ಸದಸ್ಯರು ಎಚ್ಚರಗೊಂಡಿರುತ್ತಾರೆ ಹೀಗಾಗಿ ಮನೆಯ ಸದಸ್ಯರಿಗೆ ಪರಿಚಿತನಾಗಿದ್ದು ತಾನು ಸಿಕ್ಕಿಹಾಕಿಕೊಳ್ಳುತ್ತೇನೆ ಎಂಬ ಭಯದಿಂದ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿರುವುದಾಗಿ ಪೊಲೀಸರಲ್ಲಿ ಒಪ್ಪಿಕೊಂಡಿದ್ದಾನೆ.ಆರೋಪಿ ಕರೀಂ ಖಾನ್ ಶೇಕ್ ಕೊಗ್ಗು ಸಾಹೇಬ್ ರವರೊಂದಿಗೆ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿ ಮನಸ್ತಾಪವನ್ನೂ ಹೊಂದಿದ್ದ ಎಂದೂ ಪೊಲೀಸರಲ್ಲಿ ಬಾಯಿಬಿಟ್ಟಿದ್ದಾನೆ.
ಕಳ್ಳತನದ ವೇಳೆ ಮನೆಯವರಿಗೆ ಎಚ್ಚರವಾದ್ದು ತಿಳಿದು ಅಡುಗೆ ಕೋಣೆಯಲ್ಲಿದ್ದ ಕೊಕ್ಕೆ ಕತ್ತಿಯಿಂದ ಮನೆಯಲ್ಲಿದ್ದ ಶೇಕ್ ಕೊಗ್ಗು ಸಾಹೇಬ್ ( 70 ವರ್ಷ), ಶಾಮಿಯಾ ಭಾನು (16 ವರ್ಷ) ಎಂಬವರುಗಳು ಹತ್ಯೆ ನಡೆಸಿದ್ದು, ಖತೀಜಾಬಿ (65 ವರ್ಷ) ಎಂಬವರಿಗೆ ಗಂಭೀರ ಹಲ್ಲೆ ನಡೆಸಿದ್ದ. ಬಳಿಕ ಮನೆಯಲ್ಲಿದ್ದ ಸುಮಾರು 30 ಗ್ರಾಂ ತೂಕದ ಚಿನ್ನಾಭರಣ ಹಾಗೂ 6,000 ರೂಪಾಯಿ ನಗದನ್ನು ಕಳ್ಳತನ ನಡೆಸಿ ಮನೆಯ ಹಿಂಬಾಗಿಲಿನ ಮೂಲಕ ತೆರಳಿದ್ದ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪುತ್ತೂರು ಗ್ರಾಮಾಂತರ ಪೊಲೀಸರು ಠಾಣಾ ವ್ಯಾಪ್ತಿಯ ಕುರಿಯ ಗ್ರಾಮದ ಬೀಟ್ ಸಿಬ್ಬಂದಿ ಭೀಮ್ ಶೇನ್ ರವರು ನೀಡಿದ ಸುಳಿವಿನ ಆಧಾರದಲ್ಲಿ ಆರೋಪಿಯನ್ನು ದಬಂಧಿಸಿದ್ದು ತನಿಖೆ ಪ್ರಗತಿಯಲ್ಲಿದೆ.ಆರೋಪಿಯ ಕೈಗೆ ಕೃತ್ಯ ನಡೆಸುವ ವೇಳೆ ಉಂಟಾದ ಘರ್ಷಣೆಯಲ್ಲಿ ಗಾಯವಾಗಿದ್ದು, ಈ ಬಗ್ಗೆ ಚಿಕಿತ್ಸೆ ನೀಡಲಾಗಿರುತ್ತದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.
ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಪ್ರಕರಣದ ಆರೋಪಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಬಗ್ಗೆ ಇನ್ನಷ್ಟು ತನಿಖೆ ನಡೆಯುತ್ತಿದೆ.