ಸುಳ್ಯ: ಪೌರತ್ವ ತಿದ್ದು ಪಡಿ ಕಾಯ್ದೆಯ ಬಗ್ಗೆ ಇಲ್ಲ ಸಲ್ಲದ ಅಪ ಪ್ರಚಾರ, ಆರೋಪ ಎಲ್ಲೆಡೆ ನಡೆಸಲಾಗುತಿದೆ. ದೇಶದ ಹಿತದೃಷ್ಠಿಯಿಂದ ಪೌರತ್ವ ತಿದ್ದುಪಡಿ ಕಾಯ್ದೆಯ ಸದುದ್ದೇಶವನ್ನು ಕಟ್ಟ ಕಡೆಯ ವ್ಯಕ್ತಿಗೂ ತಲುಪಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಸುಳ್ಯದ ಅಂಬೆಟಡ್ಕದ ಶ್ರೀ ವೆಂಕಟ್ರಮಣ ದೇವ ಮಂದಿರದ ಸಭಾಭವನದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಎಲ್ಲಾ ದೇಶದಲ್ಲಿಯೂ ಅದರದ್ದೇ ಆದ ಪೌರತ್ವ ಕಾಯಿದೆ ಇದೆ. ಆದರೆ ನಮ್ಮ ದೇಶದಲ್ಲಿ ಮಾತ್ರ ಪೌರತ್ವದ ಬಗ್ಗೆ ರಾಷ್ಟ್ರೀಯತೆಯ ಬಗ್ಗೆ ನಿರ್ಲಕ್ಷ್ಯ ವಹಿಸಲಾಗಿತ್ತು. ಪೌರತ್ವ ತಿದ್ದುಪಡಿ ಕಾಯ್ದೆ ತಂದ ಕಾರಣ ಎಲ್ಲರಲ್ಲಿಯೂ ರಾಷ್ಟ್ರ ಜಾಗೃತಿ ಮೂಡಿಸಲು, ರಾಷ್ಟ್ರೀಯತೆಯೆಡೆಗೆ ಎಲ್ಲರನ್ನು ಕರೆ ತರಲು ಸಾಧ್ಯವಾಗಿದೆ. ಇದು ಮೊದಲ ಯಶಸ್ಸು ಎಂದು ಅವರು ಹೇಳಿದರು. 370ನೇ ವಿಧಿಯ ರದ್ದು, ಪೌರತ್ವ ತಿದ್ದುಪಡಿ ಕಾಯಿದೆ ನಮ್ಮ ಹಿರಿಯರ ಕನಸಾಗಿತ್ತು. ಪ್ರಧಾನಿ ಮತ್ತು ಗೃಹ ಸಚಿವರು ಇಂದು ಹಿರಿಯರ ಕನಸನ್ನು ನನಸು ಮಾಡಿದ್ದಾರೆ ಎಂದವರು ಹೇಳಿದರು. ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅಂಗೀಕಾರ ಆದ ಕಾನೂನಿನ ಬಗ್ಗೆ ವ್ಯವಸ್ಥಿತವಾದ ಅಪಪ್ರಚಾರ ನಡೆಸಲಾಗುತಿದೆ. ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಪ್ರಯತ್ನ ನಡೆಸಲಾಗುತಿದೆ ಎಂದ ಅವರು ಧರ್ಮ ನಡೆ ಮತ್ತು ರಾಷ್ಟ್ರ ನಡೆ ಒಂದೇ ಆಗಿರಬೇಕು ಎಂದು ಅಭಿಪ್ರಾಯಪಟ್ಟರು. ದ.ಕ.ಜಿಲ್ಲಾ ಬಿಜೆಪಿ ವತಿಯಿಂದ ಪೌರತ್ವ ತಿದ್ದುಪಡಿ ಕಾಯಿದೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಹಾ ಜನಜಾಗೃತಿ ಸಮಾವೇಶವನ್ನು ಜ.27 ರಂದು ಮಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ. ಕೇಂದ್ರ ರಕ್ಷಣಾ ಸಚಿವ ರಾಜ್‍ನಾಥ್ ಸಿಂಗ್ ಭಾಗವಹಿಸುವ ಸಮಾವೇಶಕ್ಕೆ ಅತೀ ಹೆಚ್ಚು ಮಂದಿ ಭಾಗವಹಿಸಬೇಕು ಎಂದರು. ಪೌರತ್ವ ತಿದ್ದುಪಡಿ ಕಾಯಿದೆಯ ಸತ್ಯಾಸತ್ಯತೆಯ ಬಗ್ಗೆ ಜನರಿಗೆ ತಿಳಿಸಲು ಗ್ರಾಮ ಸಭೆಯ ಮೂಲಕ ಜನರಿಗೆ ಮಾಹಿತಿ ನೀಡುವ ಸಾಧ್ಯತೆಗಳ ಬಗ್ಗೆ ಸರ್ಕಾರ ಚಿಂತೆ ನಡೆಸುತಿದೆ ಎಂದು ಅವರು ಹೇಳಿದರು.
ಶಾಸಕ ಎಸ್.ಅಂಗಾರ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಪ್ರಧಾನ ಕಾರ್ಯದರ್ಶಿ ಸುಬೋದ್ ಶೆಟ್ಟಿ ಮೇನಾಲ, ಬಿಜೆಪಿ ಮುಖಂಡ ಎ.ವಿ.ತೀರ್ಥರಾಮ ಮಾತನಾಡಿದರು.