ನವದೆಹಲಿ: ವಿವಾದಿತ ಪೌರತ್ವ ತಿದ್ದುಪಡಿ ಮಸೂದೆ ರಾಜ್ಯಸಭೆಯಲ್ಲೂ ಅಂಗೀಕಾರವಾಗಿದೆ. 209 ಸದಸ್ಯರ ಬಲವಿದ್ದ ರಾಜ್ಯಸಭೆಯಲ್ಲಿ ಮಸೂದೆ ಪರವಾಗಿ 117 ಸಂಸದರು, ವಿರೋಧವಾಗಿ 92 ಸಂಸದರು ಮತ ಚಲಾಯಿಸಿದರು.
ರಾಜ್ಯಸಭೆಯಲ್ಲಿ ಸತತ ಏಳುಗಂಟೆ ಚರ್ಚೆ ನಡೆದ ಬಳಿಕ ಬಿಲ್ ಪಾಸ್ ಆಗಿದೆ. ಮುಂದಿನ ಹಂತದಲ್ಲಿ ರಾಷ್ಟ್ರಪತಿಯಿಂದ ಮಸೂದೆಗೆ ಅಂಕಿತ ದೊರೆತ ಕೂಡಲೇ ಕಾಯ್ದೆಯಾಗಿ ಪರಿವರ್ತನೆಯಾಗಲಿದೆ. ಪೌರತ್ವ ತಿದ್ದುಪಡಿ ಮಸೂದೆಯ ಪರಿಶೀಲನೆಗೆ ಆಯ್ಕೆ ಸಮಿತಿಗೆ ಕಳಿಸಲು ವಿರೋಧಿಸಿ 124 ಎಂಪಿಗಳು ಹಾಗೂ ಕಳಿಸಬೇಕು ಎಂದು ಪರವಾಗಿ 99 ಎಂಪಿಗಳು ಮತ ಚಲಾಯಿಸಿದರು. ಹಾಗಾಗಿ ಮಸೂದೆ ಆಯ್ಕೆ ಸಮಿತಿಗೆ ಕಳಿಸುವುದನ್ನು ರಾಜ್ಯಸಭೆಯಲ್ಲಿ ತಿರಸ್ಕರಿಸಲಾಯಿತು.
ಇಂದು ರಾಜ್ಯಸಭೆಯಲ್ಲಿ ಗೃಹಸಚಿವ ಅಮಿತ್ ಷಾ ಅವರು ಮಸೂದೆ ಮಂಡನೆ ಮಾಡಿದರು. ಮಂಡನೆಯಾಗುತ್ತಿದ್ದಂತೆ ಪ್ರತಿಪಕ್ಷಗಳು ವಿರೋಧಿಸಿದವು. ಬಿಲ್ ಮಂಡನೆಗೂ ಮೊದಲಿನಿಂದಲೇ ಈಶಾನ್ಯ ಭಾರತದಲ್ಲಿ ಭಾರೀ ಪ್ರತಿಭಟನೆಗಳು ನಡೆಯುತ್ತಿವೆ. ಸೋಮವಾರ ಲೋಕಸಭೆಯಲ್ಲಿ ಬಿಲ್ ಮಂಡನೆಯಾದ ಬಳಿಕ 12 ತಾಸು ಚರ್ಚೆ ನಡೆದಿತ್ತು. ಕೊನೆಗೂ ಬಿಲ್ ಪರವಾಗಿ 311 ಸಂಸದರು, ವಿರೋಧವಾಗಿ 80 ಮಂದಿ ಮತ ಹಾಕುವ ಮೂಲಕ ಮಸೂದೆ ಅಂಗೀಕಾರವಾಗಿತ್ತು.