ಪ್ರಕೃತಿಯಲ್ಲಿಯೇ ದೇವರನ್ನು ಕಾಣುವ ಸುಳ್ಯದ ಧರ್ಮಾರಣ್ಯ

June 5, 2019
4:00 PM

ಸುಳ್ಯ: ಪ್ರಕೃತಿಯಲ್ಲಿಯೇ ದೇವರನ್ನು ಕಾಣುವ ಎಲ್ಲಾ ದೇವರ ಆರಾಧನೆಯನ್ನೂ ಮರ ಗಿಡಗಳಿಗೆ ಅರ್ಪಿಸುವ ಧರ್ಮಾರಣ್ಯವು ಸುಳ್ಯ ನಗರ ಸಮೀಪದಲ್ಲಿಯೇ ಇರುವ ಅಪೂರ್ವ ಔಷಧೀಯ ಸಸ್ಯಗಳನ್ನು ಪೋಷಿಸುವ ಹಸಿರು ತೋಟ. 

Advertisement

ಪ್ರಕೃತಿಯ ಅಂತರಾಳಕ್ಕೆ ಕೊಡಲಿಯಿಟ್ಟು ಮರ ಗಿಡಗಳ ಆಫೋಷನ ತೆಗೆದುಕೊಳ್ಳುತ್ತಿರುವ ಇಂದಿನ ದಿನದಲ್ಲಿ ಬಿಸಿಲ ಬೇಗೆಯಲ್ಲಿ ಬೆಂದು ಬೆವರುವ ಮಂದಿ ಒಂದು ಅಂಗುಲ ನೆರಳಿಗಾಗಿ, ತಂಪಾದ ತಂಗಾಳಿಗಾಗಿ ಹಪ ಹಪಿಸುತ್ತಿರುವ ಸಂದರ್ಭದಲ್ಲಿ ಸುಳ್ಯ ಅರಂಬೂರಿನ ಧರ್ಮಾರಣ್ಯವು ತಂಪು ಸೂಸಿ ಹಸಿರ ಲೋಕದ ಮಾಯಾ ಪ್ರಪಂಚವನ್ನು ಸೃಷ್ಠಿಸುತ್ತಿದೆ. ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಅಧೀನಕ್ಕೊಳಪಟ್ಟ ಒಂದು ಎಕ್ರೆ ಸ್ಥಳದಲ್ಲಿ ಹಸಿರ ವೈಭವವನ್ನು ಸೃಷ್ಠಿಸಲಾಗಿದೆ. ಸುಮಾರು ಇನ್ನೂರ ಎಂಭತ್ತಕ್ಕೂ ಹೆಚ್ಚು ವೈವಿಧ್ಯಮಯ ಔಷಧೀಯ ಸಸ್ಯಗಳು ಸೇರಿ ಐನೂರಕ್ಕೂ ಮಿಕ್ಕಿ ಮರ ಗಿಡಗಳನ್ನು ಬೆಳೆಸಿರುವ ಧರ್ಮಾರಣ್ಯವು ಹಸಿರು ಲೋಕವನ್ನು ಸೃಷ್ಠಿಸಿದೆ.

 

 

ಪ್ರಕೃತಿಯನ್ನೂ, ಮರಗಿಡಗಳನ್ನು ದೇವರನ್ನಾಗಿ ಪೂಜಿಸುವ ಮೂಲಕ ನಮ್ಮ ಪ್ರಕೃತಿಯನ್ನೂ ಭೂಮಿಯನ್ನೂ ಉಳಿಸಬಹುದು ಎಂಬ ಪೂರ್ವಿಕರ ಕಲ್ಪನೆಯನ್ನು ಸಾಕ್ಷಾತ್ಕರಿಸುವ ಪ್ರಯತ್ನವನ್ನು ಇಲ್ಲಿ ನಡೆಸಲಾಗಿದೆ. ಎಲ್ಲೆಡೆ ಸ್ವಾರ್ಥಕ್ಕಾಗಿ ಕಡಿದುರುಳಿಸುವ, ತುಳಿದು, ಬೆಂಕಿಯಿಟ್ಟು ನಾಶ ಪಡಿಸುವ ಮರಗಳನ್ನೂ, ಗಿಡಗಳನ್ನೂ ಇಲ್ಲಿ ದೇವರಾಗಿ ಪೂಜಿಸಲಾಗುತ್ತದೆ. ವೇದ, ಉಪನಿಷತ್ತು, ಪುರಾಣ ಶಾಸ್ತ್ರಗಳ ಪ್ರಕಾರ ಇಲ್ಲಿ ನವಗ್ರಹ ವನ, ರಾಶಿವನ, ನಕ್ಷತ್ರವನ, ಪಂಚಾಯತನ ವನ, ಪಂಚವಟಿ, ಸಪ್ತಋಷಿ ವನಗಳನ್ನು ಸೃಷ್ಠಿಸುವ ಮೂಲಕ ದೇವಾಲಯದ ಕಲ್ಪನೆಯನ್ನು ಸಾಕಾರಗೊಳಿಸಲಾಗಿದೆ.

 

ನವಗ್ರಹ ವನ:
ಸೂರ್ಯನಿಗೆ ಬಿಳಿ ಎಕ್ಕೆ ಗಿಡ, ಮಂಗಳನಿಗೆ ಕದಿರ, ಶನಿಗೆ ಬನ್ನಿ, ಗುರುವಿಗೆ ಅರಳಿ, ಬುಧನಿಗೆ ಉತ್ತರಣೆ, ಶುಕ್ರನಿಗೆ ಅತ್ತಿ, ಚಂದ್ರನಿಗೆ ಪಾಲಾಶ, ರಾಹುವಿಗೆ ಗರಿಕೆ, ಕುಜನಿಗೆ ಬಿದಿರು, ಕೇತುವಿಗೆ ದರ್ಬೆ ಹೀಗೆ ಒಂಭತ್ತು ಗ್ರಹಗಳಿಗೆ ಸಮಾನಾದ ಗಿಡಗಳನ್ನು ನೆಟ್ಟು ಬೆಳೆಸಿ ನವಗ್ರಹವನ್ನು ಸೃಷ್ಠಿಸಲಾಗಿದೆ. ಆಯಾ ಗಿಡಗಳಿಗೆ ಕಟ್ಟೆ ಕಟ್ಟಿ ನೀರೆರೆದು ಪೋಷಿಸಲಾಗಿದೆ. ಅಲ್ಲದೆ 27 ನಕ್ಷತ್ರಗಳಿಗೆ ಸಮಾನಾಗಿ ಒಂದೊಂದು ಗಿಡಗಳನ್ನು ಬೆಳೆಸಿ ನಕ್ಷತ್ರ ವನವನ್ನು ಸೃಷ್ಠಿಸಲಾಗಿದೆ. ಪ್ರತಿಯೊಬ್ಬರಿಗೂ ಒಂದೊಂದು ನಕ್ಷತ್ರ ಇರುತ್ತದೆ. ಆಯಾ ನಕ್ಷತ್ರದಲ್ಲಿ ಹುಟ್ಟಿದ ಜನತೆ ಆ ನಕ್ಷತ್ರಕ್ಕೆ ಸಮಾನಾದ ಗಿಡಗಳನ್ನು ನಾಸಪಡಿಸಬಾರದು ಮತ್ತು ಅದನ್ನು ಪೋಷಿಸಬೇಕು ಎಂಬುದು ಕಲ್ಪನೆ. 12 ರಾಶಿಗೆ ಸರಿಯಾಗಿ 12 ಗಿಡಗಳನ್ನು ಕ್ರಮವಾಗಿ ನೆಟ್ಟು ಬೆಳೆಸಿ ರಾಶಿವನ ರೂಪಿಸಲಾಗಿದೆ. ಅಲ್ಲದೆ ಗಣಪತಿ ಪಂಚಾಯತನ ವನದಲ್ಲಿ ಗಣಪತಿಯೊಂದಿಗೆ ಶಿವ, ವಿಷ್ಣು, ದುರ್ಗೆ, ಸೂರ್ಯನ ಸನ್ನಿಧಿಯಿದ್ದು ಅವರಿಗೆ ಸರಿಯಾಗಿ ಖದಿರು, ಕರವೀರ, ತುಳಸಿ, ತುಂಬೆ, ಬಿಲ್ವ ಗಿಡಗಳು ಶೋಭಿಸುತ್ತಿದೆ. ರಾಮಾಯಣದಲ್ಲಿ ಬರುವ ಪಂಚವಟಿಯ ಕಲ್ಪನೆಗೆ ಸರಿಯಾಗಿ ಅಶೋಕ, ಅಶ್ವತ್ಥ, ಆಲ, ಅರಳಿ, ನೆಲ್ಲಿ ಗಳನ್ನು ಬೆಳೆದು ಪಂಚವಟಿಯನ್ನು ಸೃಷ್ಠಿಸಲಾಗಿದೆ. ಏಳು ಋಷಿಗಳಿಗೆ ಸಮಾನಾಗಿ ರಕ್ಷಚಂದನ, ಬಕುಲ ಮುಂತಾದ ಅಪೂರ್ವ ಸಸ್ಯಗಳನ್ನು ನೆಟ್ಟು ಸಪ್ತ ಋಷಿ ವನವನ್ನು ಮಾಡಲಾಗಿದೆ. ಅಲ್ಲದೆ ಧರ್ಮಾರಣ್ಯಕ್ಕೆ ಸುತ್ತಲೂ ಹಲಸು, ಮಾವು, ಪೇರಳೆ, ನೇರಳೆ ಮೊದಲಾದ ಫಲವಸ್ತುಗಳನ್ನು ಬೆಳೆಯಲಾಗಿದೆ. ಬಾಳೆಗಿಡಗಳ ರಂಭಾವನ, ವೈವಿಧ್ಯಮಯ ಔಷಧೀಯ ಸಸ್ಯಗಳ ಧನ್ವಂತರಿ ವನಗಳೂ ಮನ ಸೆಳೆಯುತಿದೆ. ಸಾಗುವಾನಿ, ಮಹಾಗಣಿಯಂತಹ ಮರಗಳೂ ಹಸಿರು ಸೂಸಿ ಫಲವತ್ತಾಗಿ ಬೆಳೆದಿದೆ.

 

 

ದಾನವಾಗಿ ದೊರೆತ ಭೂಮಿಯಲ್ಲಿ ಮೈದಳೆದಿದೆ ಧರ್ಮಾರಣ್ಯ:
ಇಲ್ಲಿನ ವೃಕ್ಷ ವನಗಳಿಗೆ ಭಕ್ತಿಪೂರ್ವಕ ಪ್ರದಕ್ಷಿಣೆ ಮಾಡಿದರೆ ನಮ್ಮ ಹಲವು ದೋಷ ಪರಿಹಾರ ಆಗುತ್ತದೆ ಎಂಬುದು ನಂಬಿಕೆ. ಆದುದರಿಂದ ಇಲ್ಲಿ ಹಲವರು ಬಂದು ಹೋಮ ಹವನಗಳನ್ನು ನಡೆಸುತ್ತಾರೆ. ನವಗ್ರಹ ಹೋಮ, ಶನಿಪೂಜೆ, ಗುರುಪೂಜೆಗಳನ್ನು ಭಕ್ತಿ ಪೂರ್ವಕವಾಗಿ ಅರ್ಪಿಸಲಾಗುತ್ತದೆ. ಅರಂಬೂರಿನ ಸುಬ್ಬಮ್ಮ ಎಂಬವರು ಒಂದೂ ಕಾಲು ಎಕರೆ ಸ್ಥಳವನ್ನು ಶ್ರೀ ರಾಮಚಂದ್ರಾಪುರ ಮಠಕ್ಕೆ ದಾನವಾಗಿ ನೀಡಿದರು. ಪೊದೆಗಳ ಕಾಡಾಗಿದ್ದ ಈ ಪ್ರದೇಶವನ್ನು ಶ್ರೀ ರಾಘವೇಶ್ವರ ಭಾರತಿ ಸ್ವಾಮಿಗಳ ಆಶಯದಂತೆ ವಿಶಿಷ್ಟ ಪ್ರಭೇದಗಳ ಸಸ್ಯಕಾಶಿಯಾದ ಧರ್ಮಾರಣ್ಯವನ್ನಾಗಿ ರೂಪಿಸಲಾಯಿತು. ಧರ್ಮಾರಣ್ಯದ ಸಂಚಾಲಕ ಗೋಪಾಲಕೃಷ್ಣ ಭಟ್ ಪೈಚಾರು ಅವರ ನೇತೃತ್ವದ ತಂಡ ರಾಜ್ಯದಾದ್ಯಂತ ಸಂಚರಿಸಿ ಅತಿ ವಿಶಿಷ್ಠವಾದ ಗಿಡಗಳನ್ನು ಶೇಖರಿಸಿ ತಂದು ನೆಟ್ಟು ನೀರೆರೆದು ಸಾವಯವ ಗೊಬ್ಬರ ಹಾಕಿ ಪೋಷಿಸಿ ಸುಂದರ ವನರಾಶಿಯನ್ನು ಸೃಜಿಸಿದ್ದಾರೆ. ಶ್ರೀ ರಾಘವೇಶ್ವರ ಭಾರತಿ ಸ್ವಾಮಿಗಳು ಪ್ರತಿ ವರ್ಷವೂ ಇಲ್ಲಿಗೆ ಭೇಟಿ ನೀಡುತ್ತಾರೆ.

ಗಿಡ ನೆಡಲು ಸಹಾಯ ನೀಡುವುದು ಹರಕೆ:
ಧರ್ಮಾರಣ್ಯದಲ್ಲಿ ಗಿಡ ನೆಡಲು ಸಹಾಯ ನೀಡುವುದು ಇಚ್ಛಾಪೂರ್ತಿಗೆ ಇರುವ ಬಲು ದೊಡ್ಡ ಹರಕೆ. ಅಲ್ಲದೆ ಇಲ್ಲಿನ ನಿಸರ್ಗದ ಮಡಿಲಲ್ಲಿ ಹಲವು ಹೋಮಹವನಗಳು, ವೇದ ಮಂತ್ರಗಳ ಪಾರಾಯಣ, ಭಜನಾ ಸತ್ಸಂಗ, ಕುಂಕುಮಾರ್ಚನೆಗಳು, ವೇದ ಶಿಬಿರಗಳು ಇಲ್ಲಿ ನಡೆಯುತ್ತಾ ಇರುತ್ತದೆ. ನಿಸರ್ಗ ವೃದ್ಧಿಯ ಜೊತೆಗೆ ಧರ್ಮ ಜಾಗೃತಿಗಾಗಿಯೂ ಇಲ್ಲಿ ಹಲವು ಯೋಜನೆಗಳನ್ನು ರೂಪಿಸಲಾಗಿದೆ. ಒಟ್ಟನಲ್ಲಿ ಧಾರ್ಮಿಕ ಮತ್ತು ನಿಸರ್ಗ ಫೋಷಕ ಕ್ಷೇತ್ರವಾಗಿ ಧರ್ಮಾರಣ್ಯವನ್ನು ಪರಿವರ್ತಿಸುವುದು ಗುರಿ. ಅದಕ್ಕಾಗಿ ಇನ್ನಷ್ಟು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎನ್ನುತ್ತಾರೆ ಧರ್ಮಾರಣ್ಯದ ಸಂಚಾಲಕ ಗೋಪಾಲಕೃಷ್ಣ ಭಟ್. ಹಿರಿಯರ ಕಲ್ಪನೆಗನುಸಾರವಾಗಿ ಪ್ರಕೃತಿಯನ್ನು ದೇವರಂತೆ ಪೂಜಿಸಿ ನಮ್ಮ ಅಪೂರ್ವ ನಿಸರ್ಗವನ್ನು ಉಳಿಸುವ ಪ್ರಯತ್ನ ಧರ್ಮಾರಣ್ಯದ ಮೂಲಕ ನಡೆಸಲಾಗುತಿದೆ ಎನ್ನುತ್ತಾರವರು.

 

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಶಿವಮೊಗ್ಗದ ನವಲೆ ಕೃಷಿ ವಿಜ್ಞಾನ ಕೇಂದ್ರದ ರಜತ ಮಹೋತ್ಸವ |
April 28, 2025
10:21 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 28-04-2025 | ಇಂದು ಅಲ್ಲಲ್ಲಿ ಗುಡುಗು ಸಹಿತ ಮಳೆ | ಮೇ 1ರಿಂದ ಮಳೆ ಹೆಚ್ಚಾಗುವ ಲಕ್ಷಣ
April 28, 2025
2:22 PM
by: ಸಾಯಿಶೇಖರ್ ಕರಿಕಳ
ಬಾಗಲಕೋಟೆ ಮುಧೋಳ ಸೇಬು ಬೆಳೆಗಾರನ ಬಗ್ಗೆ ಮನ್ ಕೀ ಬಾತ್ ನಲ್ಲಿ ಪ್ರಧಾನಿ ಮೋದಿ ಮೆಚ್ಚುಗೆ
April 28, 2025
7:02 AM
by: The Rural Mirror ಸುದ್ದಿಜಾಲ
“ದ ಹಿಂದೂ ಮ್ಯಾನಿಫ್ಯಾಸ್ಟೋ” ಕೃತಿ ಬಿಡುಗಡೆ | ಅಹಿಂಸೆಯೇ ಭಾರತದ ನೈಜ ಧರ್ಮ-ಮೋಹನ್ ಭಾಗವತ್
April 28, 2025
6:53 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group