ಸುಳ್ಯ: ಅತಿವೃಷ್ಠಿ, ಪ್ರಕೃತಿ ವಿಕೋಪ ಉಂಟಾದಲ್ಲಿ ಅದನ್ನು ಎದುರಿಸಲು ತಾಲೂಕು ಆಡಳಿತ ಎಲ್ಲಾ ರೀತಿಯಲ್ಲೂ ಸನ್ನದ್ಧವಾಗಿದೆ.
ಅಂತಹಾ ಸಂದರ್ಭದಲ್ಲಿ ಯುವಕರು, ವಿವಿಧ ಸಂಘಟನೆಗಳ ಸದಸ್ಯರು, ಸಾರ್ವಜನಿಕರು ಕೈ ಜೋಡಿಸಬೇಕು ಎಂದು ತಹಶೀಲ್ದಾರ್ ಎನ್.ಎ.ಕುಂಞಿ ಅಹಮ್ಮದ್ ಹೇಳಿದ್ದಾರೆ.
ಪ್ರಕೃತಿ ವಿಕೋಪ ರಕ್ಷಣೆ ಕುರಿತು ಚರ್ಚಿಸಲು ಸುಳ್ಯ ತಾಲೂಕು ಕಚೇರಿಯಲ್ಲಿ ನಡೆದ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ರಕ್ಷಣಾ ಕಾರ್ಯದಲ್ಲಿ ಪರಿಣತಿ ಹೊಂದಿರುವ ಯುವಕರು ರಕ್ಷಣಾ ತಂಡದೊಂದಿಗೆ ಸೇರಿ ಕಾರ್ಯನಿರ್ವಹಿಸಬೇಕು. ಪ್ರತಿ ಗ್ರಾಮ ಮಟ್ಟದಲ್ಲಿ ರಕ್ಷಣಾ ತಂಡಗಳನ್ನು ರಚಿಸಲಾಗಿದ್ದು ನೋಡೆಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಎಲ್ಲೆಡೆ ತೀವ್ರ ಕಟ್ಟೆಚ್ಚರ ವಹಿಲಾಗುತ್ತಿದ್ದು ಸಾರ್ವಜನಿಕರು ಸಹಕಾರ ನೀಡಬೇಕು ಎಂದರು. ಮುಂಜಾಗ್ರತಾ ಕ್ರಮವಾಗಿ ಕಲ್ಲುಗುಂಡಿ ಮತ್ತು ಕೊಲ್ಲಮೊಗ್ರ ದಲ್ಲಿ ನಿರಾಶ್ರಿತರ ಪರಿಹಾರ ಕೇಂದ್ರ ತೆರೆಯಲಾಗಿದೆ. ಯಾವುದಾದರು ಕುಟುಂಬಗಳಿಗೆ ತೊಂದರೆ ಉಂಟಾದರೆ ಅವರನ್ನು ಅಲ್ಲಿಗೆ ಸ್ಥಳಾಂತರಿಸಲಾಗುವುದು. ವಿಪತ್ತು ನಿರ್ವಹಣೆಗೆ ಅಗತ್ಯ ಸಲಕರಣೆಗಳನ್ನು ಒದಗಿಸಲಾಗಿದೆ ಎಂದು ಮಾಹಿತಿ ನೀಡಿದರು.
ಯಾವುದೇ ರೀತಿಯ ಸಮಸ್ಯೆಗಳು ಉಂಟಾದರೆ ಕೂಡಲೇ ಮಾಹಿತಿ ನೀಡಬೇಕು ಮತ್ತು ಮಳೆಗಾಲ ಕಳೆಯುವ ತನಕ ಜಾಗೃತರಾಗಿರುವಂತೆ ಎಂದು ಎಸ್ ಐ ಎಂ.ಆರ್.ಹರೀಶ್ ಸೂಚಿಸಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ,
ವಲಯ ಅರಣ್ಯಾಧಿಕಾರಿ ಎನ್.ಮಂಜುನಾಥ್, ಮೆಸ್ಕಾಂ ಇಂಜಿನಿಯರ್ ಸುಪ್ರೀತ್, ಗೃಹರಕ್ಷಕ ದಳದ ಕಮಾಂಡೆಂಟ್ ಜಯಂತ್ ಶೆಟ್ಟಿ, ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ, ನೆಹರೂ ಮೆಮೋರಿಯಲ್ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ಕಾರ್ಯಕ್ರಮಾಧಿಕಾರಿ ಡಾ.ಅನುರಾಧಾ ಕುರುಂಜಿ, ನಗರ ಪಂಚಾಯತ್ ಸದಸ್ಯ ಬಾಲಕೃಷ್ಣ ಭಟ್, ವಕೀಲ ಕೆ
ಎಲ್.ಪ್ರದೀಪ್ ಕುಮಾರ್ ಮತ್ತಿತರರು ಮಾತನಾಡಿದರು.
ನಗರ ಪಂಚಾಯತ್ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.