ಸವಣೂರು: ಪುತ್ತೂರು ತಾಲೂಕು ಕೇಂದ್ರದಿಂದ 13ಕಿ.ಮೀ. ದೂರದಲ್ಲಿರುವ ನರಿಮೊಗರು ರೈಲ್ವೇ ನಿಲ್ದಾಣವು ಸಿಗ್ನಲ್ ವ್ಯವಸ್ಥೆ ಸಹಿತ ಪೂರ್ಣಕಾಲಿಕ ಸ್ಟೇಷನ್ ಮಾಸ್ಟರ್ ಇರುವ ರೈಲ್ವೇ ನಿಲ್ದಾಣವಾದರೂ ಈ ರೈಲ್ವೇ ನಿಲ್ದಾಣವು ಪ್ರಯಾಣಿಕರ ಸ್ಪಂದನೆ ಇಲ್ಲದ ರೈಲ್ವೇ ನಿಲ್ದಾಣವಾಗಿದೆ. ಈ ರೈಲು ನಿಲ್ದಾಣದಲ್ಲಿ ಮಂಗಳೂರು-ಸುಬ್ರಹ್ಮಣ್ಯ ರಸ್ತೆ ಲೋಕಲ್ ರೈಲ್‍ಗೆ ಮಾತ್ರ ನಿಲುಗಡೆ ಇದೆ. ದೂರ ಪ್ರಯಾಣದ ಪ್ರಯಾಣಿಕ ರೈಲು ಬಂಡಿಗಳು ಇಲ್ಲಿ ನಿಲುಗಡೆಗೊಳ್ಳುತ್ತಿಲ್ಲ.
ಮಂಗಳೂರು-ಹಾಸನ ರೈಲು ಮಾರ್ಗ ನಿರ್ಮಾಣ ಸಂದರ್ಭ ಮೀಟರ್‍ಗೇಜ್ ಹಳಿ ಇತ್ತು. 1974ರ ದಶಕದಲ್ಲಿ ಮಂಗಳೂರು-ಸುಬ್ರಹ್ಮಣ್ಯ ರಸ್ತೆ ಲೋಕಲ್ ರೈಲು ಬಂಡಿಯ ಓಡಾಟ ಆರಂಭವಾಯಿತು. ಆ ಕಾಲದಲ್ಲಿ ಕಲ್ಲಿದ್ದಲು ಬಳಸಿ ಚಾಲನೆ ಮಾಡುವ ರೈಲ್ವೇ ಇಂಜಿನ್ ಬಳಕೆಯಲ್ಲಿತ್ತು. ಈ ರೈಲ್ವೇ ಇಂಜಿನ್‍ಗಳಿಗೆ ಅಲ್ಲಲ್ಲಿ ನೀರು ತುಂಬಿಸುವ ವ್ಯವಸ್ಥೆ ಬೇಕಾಗಿತ್ತು. ಈ ಕಾರಣದಿಂದ ಪುತ್ತೂರು-ಸುಬ್ರಹ್ಮಣ್ಯ ರಸ್ತೆ ರೈಲ್ವೇ ನಿಲ್ದಾಣ ನಡುವಣ ಇಂಜಿನ್‍ಗಳಿಗೆ ನೀರು ತುಂಬಿಸುವ ಅಗತ್ಯಕ್ಕಾಗಿ ನರಿಮೊಗರಿನಲ್ಲಿ ರೈಲ್ವೇ ನಿಲ್ದಾಣ ಮತ್ತು ನೀರು ತುಂಬಿಸುವ ವ್ಯವಸ್ಥೆಯನ್ನು ಆರಂಭಿಸಲಾಗಿತ್ತು. ರೈಲು ಇಂಜಿನ್‍ಗಳು ನೀರು ತುಂಬಿಸಿಕೊಳ್ಳಲು ಇಲ್ಲಿ ನಿಲುಗಡೆಯಾಗುವ ಕಾರಣ ನರಿಮೊಗರು ರೈಲು ನಿಲ್ದಾಣವನ್ನು ಪೂರ್ಣ ಪ್ರಮಾಣದ ರೈಲು ನಿಲ್ದಾಣವನ್ನಾಗಿ ನಿರ್ಮಾಣ ಮಾಡಲಾಗಿದೆ.
ಎಲ್ಲಾ ರೈಲುಗಳಿಗೆ ನಿಲುಗಡೆ:
ಮೀಟರ್‍ಗೇಜ್ ಹಳಿಗಳಲ್ಲಿ ರೈಲು ಬಂಡಿ ಓಡುತ್ತಿದ್ದ ಸಂದರ್ಭ ನರಿಮೊಗರು ರೈಲು ನಿಲ್ದಾಣದಲ್ಲಿ ಲೋಕಲ್ ರೈಲು ಬಂಡಿಗಳ ಸಹಿತ ಎಲ್ಲಾ ರೈಲು ಬಂಡಿಗಳಿಗೆ ನಿಲುಗಡೆ ನೀಡಲಾಗುತ್ತಿತ್ತು. ಮೀಟರ್‍ಗೇಜ್ ಹಳಿಗಳಲ್ಲಿ 1984ರ ಬಳಿಕ ಡೀಸೆಲ್ ಇಂಜಿನ್‍ಗಳ ಓಡಾಟ ಆರಂಭವಾದ ಬಳಿಕವೂ ನರಿಮೊಗರು ರೈಲ್ವೇ ನಿಲ್ದಾಣದಲ್ಲಿ ಎಲ್ಲಾ ರೈಲು ಬಂಡಿಗಳಿಗೆ ನಿಲುಗಡೆ ನೀಡಲಾಗುತ್ತಿತ್ತು. ಮೀಟರ್‍ಗೇಜ್ ಹಳಿಗಳನ್ನು ಬ್ರಾಡ್‍ಗೇಜ್ ಹಳಿಗಳಾಗಿ ಪರಿವರ್ತನೆ ಮಾಡುವ ಸಂದರ್ಭ ನರಿಮೊಗರು ರೈಲ್ವೇ ನಿಲ್ದಾಣವನ್ನು ಆಧುನೀಕರಣಗೊಳಿಸಲಾಗಿತ್ತು. ಬ್ರಾಡ್‍ಗೇಜ್ ಹಳಿಗಳ ಮೇಲೆ ರೈಲು ಬಂಡಿಗಳ ಓಡಾಟ ಆರಂಭವಾದ ಬಳಿಕ ದೂರ ಪ್ರಯಾಣದ ರೈಲು ಬಂಡಿಗಳಿಗೆ ನರಿಮೊಗರು ನಿಲ್ದಾಣದಲ್ಲಿ ನಿಲುಗಡೆ ರದ್ದುಪಡಿಸಲಾಯಿತು.
ಕಾರಣ ಏನು?
ನರಿಮೊಗರು ರೈಲ್ವೇ ನಿಲ್ದಾಣದಿಂದ ದೂರ ಪ್ರಯಾಣದ ರೈಲುಗಳಿಗೆ ಹತ್ತುವ ಮತ್ತು ಇಳಿಯುವ ಪ್ರಯಾಣಿಕರ ಸಂಖ್ಯೆಯ ಕೊರತೆ, ರೈಲ್ವೇ ನಿಲ್ದಾಣದ ಆದಾಯದ ಕೊರತೆಯ ಕಾರಣ ನೀಡಿ ದೂರ ಪ್ರಯಾಣದ ರೈಲು ಬಂಡಿಗಳ ನಿಲುಗಡೆ ಸ್ಥಗಿತವಾಯಿತು. ಈಗ ಮಂಗಳೂರು-ಸುಬ್ರಹ್ಮಣ್ಯ ರಸ್ತೆ ಲೋಕಲ್ ರೈಲು ಬಂಡಿಗೆ ನರಿಮೊಗರು ರೈಲ್ವೇ ನಿಲ್ದಾಣಬದಲ್ಲಿ ನಿಲುಗಡೆ ಇದ್ದರೂ ಪ್ರತಿನಿತ್ಯ ಇಲ್ಲಿಂದ ರೈಲು ಬಂಡಿಯನ್ನು ಏರುವ ಪ್ರಯಾಣಿಕರ ಸಂಖ್ಯೆ 10ನ್ನು ಮೀರುವುದಿಲ್ಲ. ಆದರೆ ಲೋಕಲ್ ರೈಲು ಬಂಡಿಯಾದ ಕಾರಣ ರೈಲ್ವೇ ಇಲಾಖೆ ರೈಲು ಬಂಡಿಯ ನಿಲುಗಡೆಯನ್ನು ಸ್ಥಗಿತಗೊಳಿಸಿಲ್ಲ. ಅಲ್ಲದೇ, ಇಲಾಖಾ ಸಮೀಕ್ಷೆಯಂತೆ ಈ ರೈಲು ನಿಲ್ದಾಣಕ್ಕೆ ಪ್ರಯಾಣಿಕರ ಸ್ಪಂದನೆ ಇಲ್ಲ ಎಂಬ ವರದಿ ಇಲಾಖೆಯ ಕೈ ಸೇರಿದೆ.
ಕ್ರಾಸಿಂಗ್ ನಿಲ್ದಾಣ
ಸ್ಟೇಷನ್ ಮಾಸ್ಟರ್ ಇರುವ ಪೂರ್ಣಪ್ರಮಾಣದ ರೈಲು ನಿಲ್ದಾಣವಾದ ಕಾರಣ ನರಿಮೊಗರು ರೈಲು ನಿಲ್ದಾಣವನ್ನು ಗೂಡ್ಸ್ ರೈಲುಗಳ ಕ್ರಾಸಿಂಗ್ ನಿಲ್ದಾಣವನ್ನಾಗಿ ಬಳಸಲಾಗುತ್ತಿದೆ. ಯಾವುದೇ ಕಾರಣಕ್ಕೂ ಈ ರೈಲು ನಿಲ್ದಾಣದಲ್ಲಿ ದೂರಪ್ರಯಾಣದ ರೈಲು ಬಂಡಿಗಳಿಗೆ ನಿಲುಗಡೆ ನೀಡಲು ಸಾಧ್ಯವಿಲ್ಲ ಎಂಬ ಅಭಿಪ್ರಾಯಕ್ಕೆ ರೈಲ್ವೇ ಇಲಾಖೆ ಬಂದಿದೆ. ಆಧುನೀಕರಣಗೊಂಡಿರುವ ಈ ರೈಲ್ವೇ ನಿಲ್ದಾಣವನ್ನು ಮುಚ್ಚುವ ಬದಲು ಕ್ರಾಸಿಂಗ್ ರೈಲ್ವೇ ನಿಲ್ದಾನವನ್ನಾಗಿ ಇಲಾಖೆ ಬಳಸುತ್ತಿದೆ. ಮಂಗಳೂರು-ಹಾಸನ ರೈಲು ಮಾರ್ಗದಲ್ಲಿ ಗೂಡ್ಸ್ ಬಂಡಿಗಳ ಓಡಾಟ ಹೆಚ್ಚಾಗಿರುವುದರಿಂದ ಇಲಾಖೆಗೆ ಕ್ರಾಸಿಂಗ್ ನಿಲ್ದಾಣಗಳ ಅಗತ್ಯವು ಹೆಚ್ಚಿದೆ.