ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋದ ಎಲ್ಲಾ ಸೇತುವೆಗಳನ್ನು ಪದ್ಮಶ್ರೀ ಪ್ರಶಸ್ತಿ ವಿಜೇತ ಸುಳ್ಯದ ಇಂಜಿನಿಯರ್ ಗಿರೀಶ್ ಭಾರದ್ವಾಜ್ ವೀಕ್ಷಿಸುತ್ತಾರಂತೆ. ಕರ್ನಾಟಕ- ಕೇರಳದಲ್ಲಿ ಒಟ್ಟು 137 ತೂಗುಸೇತುವೆ ನಿರ್ಮಾಣ ಮಾಡಿದ್ದಾರೆ. ಇದರಲ್ಲಿ 8 ಸೇತುವೆಗಳು ಈ ಬಾರಿಯ ಪ್ರವಾಹಕ್ಕೆ ಕೊಚ್ಚಿ ಹೋಗಿದೆ. ಹೀಗಾಗಿ ಗಿರೀಶರು ಅಪಾರ ನೋವು ಅನುಭವಿಸಿದರು. ಇದೀಗ ಪ್ರವಾಹ ತಗ್ಗಿದ ಬಳಿಕ ಇದೆಲ್ಲವನ್ನೂ ವೀಕ್ಷಣೆ ಮಾಡಲು ತೆರಳುತ್ತಿದ್ದಾರೆ. ಮುಂದೆ ಏನು ಮಾಡಬಹುದು ಎಂಬ ಯೋಚನೆ ಮಾಡುತ್ತಿದ್ದಾರೆ.
ಸುಳ್ಯ: ರಾಜ್ಯ ಕಂಡು ಕೇಳರಿಯದಷ್ಟು ಭೀಕರ ಪ್ರವಾಹಕ್ಕೆ ಸಿಲುಕಿ ನಾಶವಾದ ತೂಗು ಸೇತುವೆಗಳನ್ನು ತೂಗು ಸೇತುವೆಗಳ ಸರದಾರ, ಪದ್ಮಶ್ರೀ ಪ್ರಶಸ್ತಿ ವಿಜೇತ ಸುಳ್ಯದ ಇಂಜಿನಿಯರ್ ಗಿರೀಶ್ ಭಾರದ್ವಾಜ್ ವೀಕ್ಷಿಸಿದ್ದಾರೆ.
ಗಿರೀಶರು ನಿರ್ಮಿಸಿದ ಮುಗಿಲೆತ್ತರದ ಎಂಟು ತೂಗು ಸೇತುವೆಗಳನ್ನು ಪ್ರಳಯ ಜಲ ಕೊಚ್ಚಿ ಕೊಂಡು ಹೋಗಿದೆ. ಇದೀಗ ಮಳೆ ಕಡಿಮೆಯಾಗಿ ಪ್ರವಾಹ ಇಳಿದ ಮೇಲೆ ತನ್ನ ತೂಗು ಸೇತುವೆಗಳನ್ನು ಅವರು ವೀಕ್ಷಿಸುತ್ತಿದ್ದಾರೆ. ಪ್ರವಾಹಕ್ಕೆ ಸಿಲುಕಿ ನಾಶವಾದ ಉಪ್ಪಿನಂಗಡಿ ಸಮೀಪ ನೇತ್ರಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿದ ಮುಗೇರಡ್ಕ ತೂಗು ಸೇತುವೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಗಂಗಾವಳಿ ಹೊಳೆಗೆ ರಾಮನಗುಳಿ-ಕಲ್ಲೇಶ್ವರ ಸಂಪರ್ಕ ಕಲ್ಪಿಸುವ ತೂಗು ಸೇತುವೆಗಳನ್ನು ಅವರು ವೀಕ್ಷಿಸಿದರು. ರಾಜ್ಯದಲ್ಲಿ ಒಟ್ಟು 8 ತೂಗು ಸೇತುವೆಗಳು ಪ್ರವಾಹಕ್ಕೆ ಸಿಲುಕಿ ಹಾಳಾಗಿದೆ ಎಂದು ಇವರಿಗೆ ಮಾಹಿತಿ ಬಂದಿದೆ. ಉತ್ತರ ಕನ್ನಡ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ತಲಾ 3 ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ತಲಾ 1 ತೂಗು ಸೇತುವೆಗೆ ಹಾನಿ ಸಂಭವಿಸಿದೆ. ಮುಗೇರಡ್ಕ ಸೇತುವೆ ಸಂಪೂರ್ಣ ಕೊಚ್ಚಿ ಹೋಗಿದೆ. ಕೆಲವು ಸೇತುವೆಗಳಿಗೆ ಹಾನಿ ಸಂಭವಿಸಿದೆ. ತೂಗು ಸೇತುವೆಯ ಎತ್ತರಕ್ಕೆ ಪ್ರವಾಹ ಹರಿದು ಮರಗಳು ಹರಿದು ಬಂದು ಬಡಿದು ತೂಗು ಸೇತುವೆಗಳಿಗೆ ಹಾನಿ ಸಂಭವಿಸಿದೆ. ಕೆಲವು ಕಡೆಗಳಿಂದ ತೂಗು ಸೇತುವೆ ಮರು ನಿರ್ಮಾಣ ಮಾಡುವಂತೆಯೂ ಗಿರೀಶ್ ಭಾರದ್ವಾಜ್‍ಗೆ ಕರೆ ಬಂದಿದೆ. ಮಳೆಹಾನಿಗೆ ಸಿಲುಕಿ ಹಾನಿ ಸಂಭವಿಸಿದ ಚಿಕ್ಕಮಗಳೂರಿನ ಕಾಂಡ್ಯಾ ತೂಗು ಸೇತುವೆ ದುರಸ್ಥಿ ಪಡಿಸಲು ಕ್ರಿಯಾ ಯೋಜನೆ ತಯಾರಿಸಿ ಕೊಡುವಂತೆ ಅಲ್ಲಿನ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕರೆ ಮಾಡಿದ್ದಾರೆ ಎಂದು ಗಿರೀಶ್ ಭಾರದ್ವಾಜ್ ತಿಳಿಸಿದ್ದಾರೆ.ಕರ್ನಾಟಕ, ಕೇರಳ ಸೇರಿ ಒಟ್ಟು 137 ತೂಗುಸೇತುವೆಗಳನ್ನು ಅವರು ನಿರ್ಮಿಸಿದ್ದಾರೆ.
ಮಳೆಗಾಲದಲ್ಲಿ ದ್ವೀಪವಾಗುವ ನೂರಾರು ಹಳ್ಳಿಗಳಿಗೆ ತೂಗು ಸೇತುವೆಗಳ ಮೂಲಕ ಸೇತು ಬಂಧ ಕಲ್ಪಿಸಿ ಜನರನ್ನು ಹೊರ ಜಗತ್ತಿಗೆ ಸಂಪರ್ಕ ಕಲ್ಪಿಸಿದವರು ಸುಳ್ಯದ ಗಿರೀಶ್ ಭಾರದ್ವಾಜ್. ತೂಗುಸೇತುವೆಗಳ ಸರದಾರನೆಂದು ಹೆಸರು ಮಾಡಿದ ಗಿರೀಶರ ಅಪೂರ್ವ ಸಾಧನೆಗೆ ದೇಶ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ತನ್ನ ಕೃತಿಗಳು ಕಣ್ಣೆದುರಿನಲ್ಲೇ ನಾಶವಾಗಿ ಹೋಗಿರುವುದು ನೋಡಿ ತುಂಬಾ ನೋವು ಉಂಟಾಗಿದೆ. ಜೊತೆಗೆ ತೂಗು ಸೇತುವೆ ಹಾನಿಯಾದ ಕಾರಣ ಆ ಹಳ್ಳಿಯ ಜನರ ಬದುಕು ಮತ್ತೆ ಸಂಕಷ್ಟಕ್ಕೆ ಸಿಲುಕಿರುವುದು ಮತ್ತು ಜನರ ಭಾವನೆ ನೋಡಿ ಮತ್ತಷ್ಟು ಬೇಸರವಾಯಿತು ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ಹಾನಿಗೊಳಗಾದ ಎಲ್ಲಾ ಸೇತುವೆಗಳನ್ನು ವೀಕ್ಷಿಸಲಾಗುವುದು ಎಂದರು.