ಫಿಟ್ನೆಸ್- ಯಾಕಾಗಿ ಮತ್ತು ಹೇಗೆ?

September 11, 2019
2:00 PM

” ಸರ್, ನನಗೆ ಆಯಾಸ ಆಗದೇ ಇರುವ ಯಾವುದಾದರೂ ವ್ಯಾಯಾಮ ಇದ್ದರೆ ಹೇಳಿ”! ಇಂತಹದ್ದೊಂದು ಹೇಳಿಕೆಯನ್ನು ಕೇಳಿದರೆ ಎಲ್ಲರಿಗೂ ಆಶ್ಚರ್ಯವಾಗಬಹುದು.ಏಕೆಂದರೆ ವ್ಯಾಯಾಮ ಮಾಡುವುದರಿಂದ ಆಯಾಸ ಆಗದಿದ್ದರೆ ಅದು ವ್ಯಾಯಾಮ ಹೇಗಾಗುತ್ತದೆ?

Advertisement
Advertisement

” ಶರೀರಾಯಾಸ ಜನಕಮ್ ಕರ್ಮ ವ್ಯಾಯಾಮ ” ಎಂದು ಆಯುರ್ವೇದ ಗ್ರಂಥಗಳಲ್ಲಿ ಉಲ್ಲೇಖಿಸಿದ್ದಕ್ಕೆ ಏನು ಅರ್ಥ ಬಂತು?
ಹಾಗಾದರೆ ಇಂದಿನ ನಮ್ಮ ನಾಗರಿಕ ಸಮಾಜದ ಮನಸ್ಥಿತಿ ಹೇಗಿದೆ ಎಂದರೆ ದಾರಿಗಳನ್ನು ಸರಳವಾಗಿಸುತ್ತಾ , ಮೂಲ ಸಂಗತಿಗಳನ್ನು ಮರೆಗೆ ಸರಿಸಿ ಪಲಾಯನ ವಾದದ ಜಾಡನ್ನು ಹಿಡಿಯುತ್ತಿದೆ ಏನೋ ಅನಿಸುತ್ತಿದೆ. ಆಯಾಸ ಮತ್ತು ಬೆವರುವಿಕೆ ವ್ಯಾಯಾಮದ ಲಕ್ಷಣಗಳು. ಹವಾನಿಯಂತ್ರಿತ ಕೊಠಡಿಯಲ್ಲಿ ವ್ಯಾಯಾಮ ಮಾಡುವುದರಿಂದ ಈ ಉದ್ದೇಶಗಳು ಈಡೇರುತ್ತವೆಯೇ ಎಂಬ ಒಂದು ಸಂದೇಹ ನಮ್ಮನ್ನು ಕಾಡಿಯೇ ಕಾಡುತ್ತದೆ. ಅದು ಸ್ವಲ್ಪ ಮಟ್ಟಿಗೆ ಸತ್ಯ ಕೂಡ. ತೆರೆದ ಹಾಗೂ ಸಹಜ ವಾತಾವರಣದಲ್ಲಿ ಶರೀರವನ್ನು ದಣಿಸಿ ಮಾಡುವ ವ್ಯಾಯಾಮ ತನ್ನದೇ ಆದ ಮೌಲ್ಯವನ್ನು ನಮ್ಮ ಆರೋಗ್ಯಕ್ಕೆ ದೇಣಿಗೆಯಾಗಿ ನೀಡುತ್ತದೆ.

Advertisement

ಇಂದು ಫಿಟ್ನೆಸ್ ಬಗ್ಗೆ ಎಲ್ಲರೂ ಕಾಳಜಿವಹಿಸುವ ಯುಗ. ಅದರ ಅಗತ್ಯವೂ ಹಿಂದೆಂದಿಗಿಂತಲೂ ಇಂದು ಹೆಚ್ಚು ಇದೆ. ಆದಕಾರಣವೇ ಕ್ವಿಟ್ ಇಂಡಿಯಾ ಮೂವ್ಮೆಂಟ್ ಎಂಬುದು ಒಂದು ಅಭಿಯಾನ ವಾಗಿ ಮೂಡಿಬಂದಿದೆ. ಸ್ವಚ್ಛ ಭಾರತ ಮತ್ತು ಪ್ಲಾಸ್ಟಿಕ್ ಮುಕ್ತ ಭಾರತ ದಂತಹ ಜಾಗೃತಿ ಅಭಿಯಾನವನ್ನು ಮೊದಲು ಮಾಡಿದ ಪ್ರಧಾನಿ ಮಾನ್ಯ ನರೇಂದ್ರ ಮೋದಿಯವರ ಇನ್ನೊಂದು ಆಶಯ ಈ “ಫಿಟ್ ಇಂಡಿಯಾ”.

ಎರಡು ಸಾಲುಗಳು ನನ್ನ ಮನಸ್ಸಿಗೆ ಬರುತ್ತಿವೆ.

Advertisement

” ಓ ತಂದೆ ಗಾಂಧಿ,
ನೀನಂದು ಅಂದೆ ” ಕ್ವಿಟ್ ಇಂಡಿಯಾ”
ದೇಶಬಂಧು ಮೋದಿ
ನೀನಿಂದು ತಂದೆ ” ಫಿಟ್ ಇಂಡಿಯಾ”

ಆರೋಗ್ಯವನ್ನು ದಯಪಾಲಿಸುವ ಸಮಾಜ ಮುಖಿ ಅಭಿಯಾನ ಹಾಗೂ ನಾಗರಿಕರಿಗೆ ಆರ್ಥಿಕ ಅನುಕೂಲಗಳನ್ನು ಕಲ್ಪಿಸುವ ಉದ್ದೇಶ ಅಡಗಿದ ಯೋಜನೆಗಳು ದೇಶದ ಅಭಿವೃದ್ಧಿ ದೃಷ್ಟಿಯಿಂದ ಗುಪ್ತಗಾಮಿನಿಯಾಗಿ ತನ್ನದೇ ಆದ ರೀತಿಯಲ್ಲಿ ಕೊಡುಗೆಯನ್ನು ನೀಡಿಯೇ ನೀಡುತ್ತದೆ. ಮೋದಿಯವರು ಹೇಳಿದಂತೆ ಫಿಟ್ನೆಸ್ ಎನ್ನುವುದು ನಮ್ಮ ಸಂಸ್ಕೃತಿಯ ಒಂದು ಅಂಗವೇ ಆಗಿದೆ. ಹಾಗಾದರೆ ಇಂದು ಇದಕ್ಕೆ ಇರುವ ಪಂಥಾಹ್ವಾನ ಗಳು ಮತ್ತು ಅಡ್ಡಿಗಳು ಯಾವುದು?

Advertisement

ತಾಂತ್ರಿಕ ಸೌಕರ್ಯಗಳು ಬದುಕನ್ನು ಸುಲಭಗೊಳಿಸಿವೆ. ಎಷ್ಟರಮಟ್ಟಿಗೆ ಅಂದರೆ ನಡೆಯುವುದಕ್ಕೆ ಮತ್ತು ಕೈಗಳಿಗೂ ಕೂಡ ಕೊಂಚವೂ ಕೆಲಸ ಕೊಡುವ ಅಗತ್ಯವಿಲ್ಲದಷ್ಟು.! ಶಾರೀರಿಕ ದಾರ್ಢ್ಯತೆ ಮತ್ತು ಅರ್ಹತೆಗಳು ಸೊರಗಿ ಹೋಗುವಷ್ಟು ಆರೋಗ್ಯದ ಮಾನದಂಡಗಳು ಕಮರಿ ಹೋಗಿವೆ.

ಜೀವನಶೈಲಿಯ ನ್ಯೂನತೆಯಿಂದ ಬರುವಂತಹ ಕಾಯಿಲೆಗಳಾದ ಡಯಾಬಿಟಿಸ್ ಮತ್ತು ರಕ್ತದೊತ್ತಡ ಏರು ಸ್ಥಿತಿಯಲ್ಲಿದೆ. ಸಾಂಕ್ರಾಮಿಕವಲ್ಲದ ವರ್ಗದ ಮಹಾ ಕಾಯಿಲೆಗಳು ನಾಗರಿಕರಿಗೆ ಹೊರೆಯಾಗುತ್ತಿದೆ. ಶಾರೀರಿಕ ಶ್ರಮದ ಕೊರತೆಯಿಂದ ಹಾಗೂ ಕುಳಿತುಕೊಂಡಿರುವ ದಿನಚರಿಯ ಶೈಲಿಯಿಂದ ಉಂಟಾಗುವ ಕಾಯಿಲೆಗಳಿಂದ ಅರವತ್ತು ಶೇಕಡಾದಷ್ಟು ಸಾವುಗಳು ಭಾರತದಲ್ಲಿ ಇಂದು ಸಂಭವಿಸುತ್ತಿವೆ. ಭಾರತದ ಹಿಂದಿನ ದಿನಗಳನ್ನು ಅವಲೋಕಿಸಿದರೆ ನಮ್ಮ ಹಿರಿಯರು ವೃದ್ಧಾಪ್ಯದಲ್ಲಿ ಮಾತ್ರ ಇಂತಹ ಕಾಯಿಲೆಗಳಿಂದ ಬಳಲುತ್ತಿದ್ದರು. ಈಗ ಪರಿಸ್ಥಿತಿ ಬದಲಾಗಿ ಮಕ್ಕಳು ಮತ್ತು ಯುವಕರು ಕೂಡ ಸಕ್ಕರೆ ಕಾಯಿಲೆ ಮತ್ತು ರಕ್ತದೋತ್ತಡಕ್ಕೆ ಬಲಿಯಾಗುತ್ತಿದ್ದಾರೆ. ದಾರಿಯಲ್ಲಿ ಹೋಗುವ ಯಾರಾದರೂ ಒಬ್ಬನನ್ನು ವಿಚಾರಿಸಿದರೆ ಇವೆರಡೂ ರೋಗಗಳಲ್ಲಿ ಒಂದು ಕಾಯಿಲೆ ಇದೆ ಎಂಬ ಉತ್ತರ ಬರದೇ ಇದ್ದರೆ ಅದು ಆಶ್ಚರ್ಯ. ಭಾರತದಲ್ಲಿ ಇಂದು ಸಾಂಕ್ರಾಮಿಕವಲ್ಲದ ಇಂತಹಾ ರೋಗಗಳು ಬದುಕಿನ 45ನೇ ವಯಸ್ಸಿಗೆ ಮುನ್ನವೇ ದಾಳಿ ಇಡುತ್ತಿವೆ. ಈ ಅಪಾಯವು ಜೀವನಶೈಲಿಯ ತಪ್ಪುಗಳಿಂದ ಮಾತ್ರವಲ್ಲ ತಂಬಾಕಿನಂಥ ವ್ಯಸನಗಳಿಂದ ಕೂಡ ಉಂಟಾಗುತ್ತಿದೆ. ಪರಿಸರಕ್ಕೆ ಉಂಟಾದ ಹಾನಿಯ ಪ್ರಭಾವವು ಇದರ ಜೊತೆಗೆ ಸೇರಿಕೊಳ್ಳುತ್ತಿದೆ. ದೀರ್ಘಕಾಲೀನ ವ್ಯಾಧಿಗಳನ್ನು ತಡೆಗಟ್ಟುವುದಕ್ಕೆ ಶಾರೀರಿಕ ಚಟುವಟಿಕೆಗಳನ್ನು ಮಾಡುವುದಕ್ಕಿಂತ ಉತ್ತಮವಾದ ದಾರಿ ಇನ್ನೊಂದಿಲ್ಲ.
ವ್ಯಾಯಾಮವು ದೇಹದ ರೋಗನಿರೋಧಕ ಶಕ್ತಿಯನ್ನು ಉತ್ತಮ ಸ್ಥಿತಿಯಲ್ಲಿಡುತ್ತದೆ ಎಂಬುದು ಅನುಭವಗಮ್ಯ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ 30 ಶೇಕಡಾದಷ್ಟು ಕ್ಯಾನ್ಸರ್ ರೋಗಗಳನ್ನು ಕೇವಲ ಜೀವನಶೈಲಿಯ ಬದಲಾವಣೆಯಿಂದ ತಡೆಗಟ್ಟಬಹುದು.

Advertisement

ಶಾರೀರಿಕ ಸಾಧ್ಯತೆಯ ಅನುಕೂಲಗಳು ಗೊತ್ತಿದ್ದರೂ, ಇದೆಲ್ಲದಕ್ಕೂ ವ್ಯತಿರಿಕ್ತ ಎಂಬಂತೆ ಇಂತಹ ಜೀವನಶೈಲಿಯ ಕಾಯಿಲೆಗಳು ಉತ್ತುಂಗಕ್ಕೆ ತಲುಪುತ್ತಿರುವುದು, ಈಗಾಗಲೇ ಇರುವ ಬಡತನ- ಅನಕ್ಷರತೆ- ಆರೋಗ್ಯದ ಕುರಿತಾದ ಅಜ್ಞಾನ ಇತ್ಯಾದಿಗಳೊಂದಿಗೆ ಬೆರೆತು ಸಮಸ್ಯೆಯನ್ನು ಮತ್ತೂ
ಜಟಿಲಗೊಳಿಸುತ್ತವೆ. ಹಾಗಾದರೆ ಇಲ್ಲಿ ಮತ್ತೂ ಗಮನಿಸಬೇಕಾದ ಅಂಶ ಒಂದು ಇದೆ. ಭಾರತದ ಬಹುಜನರಿಗೆ ಫಿಟ್ನೆಸ್ ಗಿಂತಲೂ ತಮ್ಮ ಅಳಿವು-ಉಳಿವಿನ ಸಂಗತಿ ಮೊದಲ ಯಾದಿಯಲ್ಲಿ ನಿಲ್ಲುತ್ತದೆ. ಮೂಲಭೂತ ಅವಶ್ಯಕತೆಗಳಾದ ಆಹಾರ ನೀರು ಮತ್ತು ಸ್ವಚ್ಛವಾದ ಗಾಳಿ ಮತ್ತು ಸುಲಭವಾಗಿ ಕೈಗೆಟಕುವ ಚಿಕಿತ್ಸಾ ವಿಧಾನ -ಇವುಗಳ ಭರವಸೆ ದೊರೆಯುವ ತನಕ ಫಿಟ್ನೆಸ್ ವಿಚಾರದ ಸಂದೇಶವು ಆ ವರ್ಗದ ಜನಕ್ಕೆ ಅಪ್ರಸ್ತುತವೆಂದು ಅನ್ನಿಸಿದರೆ ಆಶ್ಚರ್ಯವಿಲ್ಲ. ಒಂದು ಕಡೆ ದಿನಕ್ಕೆ ಐದಾರು ಬಾರಿ ತಿಂದು ತೇಗುವ ವರ್ಗ, ಇನ್ನೊಂದು ಕಡೆ ಹಸಿದ ಹೊಟ್ಟೆಯಲ್ಲಿ ಆಹಾರಕ್ಕಾಗಿ ಪರಿತಪಿಸುವ ಮತ್ತೊಂದು ವರ್ಗ. ಮದುವೆ ಸಮಾರಂಭ ಔತಣಕೂಟಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ಹಾಕಿಸಿಕೊಂಡು ಆಹಾರವನ್ನು ಕಸದಬುಟ್ಟಿಗೆ ಎಸೆಯುವ ಪ್ರಜ್ಞಾಹೀನ ವಾದ ಮತ್ತೊಂದು ವರ್ಗ! ಮೂರನೆಯದಾಗಿ ಈ ಹಸಿದ ಹೊಟ್ಟೆ ಹೊಂದಿರುವ ವ್ಯಕ್ತಿಗಳಿಗೆ ಧರ್ಮೋಪದೇಶ ಗೈಯುವ ಬೋಧಕವರ್ಗ! ! ಇದಕ್ಕಿಂತಲೂ ದೊಡ್ಡ ವಿರೋಧಾಭಾಸ ಊಹಿಸುವುದು ಕಷ್ಟ! ವಿವೇಕಾನಂದರು ಹೇಳಿದ್ದರು-” ಹಸಿದ ಹೊಟ್ಟೆಯ ವ್ಯಕ್ತಿಗೆ ಧರ್ಮೋಪದೇಶ ಮಾಡಬೇಡಿ” ಎಂದು. ಆದರೆ ಆ ಮಾತು ಭಾರತದ ಮಣ್ಣಿನಲ್ಲಿ, ಹಳ್ಳಿಯ ಕೇರಿಗಳಲ್ಲಿ ಮೌನವಾಗಿ ನರಳುತ್ತಿದೆ. ಭಾರತಾಂಬೆ ಇದನ್ನು ಹೇಗೆ ಸಹಿಸಿಕೊಳ್ಳುತ್ತಿರುವಳೋ! ಆ ದೇವರೇ ಬಲ್ಲ.

ಫಿಟ್ನೆಸ್ ಅಭಿಯಾನವನ್ನು ಬಡತನ ನೀಗುವ ಕಾರ್ಯಕ್ರಮಗಳೊಂದಿಗೆ ಹಾಗೂ ಇತರ ಸಮಾಜಸುಧಾರಕ ಕಾರ್ಯಕ್ರಮಗಳೊಂದಿಗೆ ಸಂಯೋಜಿಸಿದರೆ ಹೆಚ್ಚು ಅರ್ಥಪೂರ್ಣ ಮತ್ತು ಪರಿಣಾಮಕಾರಿ ಆದೀತು. ನಮ್ಮ ಹಳ್ಳಿಗಳಲ್ಲಿ ಕುಡಿಯುವುದಕ್ಕೆ ಹಾಲು ಇಲ್ಲದ ಮನೆಗಳಿವೆ. ದುರ್ಬಲವಾದ ಮಾಂಸಖಂಡಗಳ ಈ ಜನರಿಗೆ ಫಿಟ್ನೆಸ್ ಬೋಧನೆ ಹೇಗಾದೀತು ಎಂಬುದನ್ನು ಊಹಿಸಿ ನೋಡಿ.

Advertisement

ಆಯುರ್ವೇದ ಶಾಸ್ತ್ರದಲ್ಲಿ ಒಂದು ಮಾತು ಸಂಸ್ಕೃತದಲ್ಲಿ ಇದೆ.
” ಸ್ನಿಗ್ಧ ವ್ಯಾಯಾಮ ಬಲಿನೋ ವಿರುದ್ಧಂ ವಿತಥಂ ಭವೇತ್ ”
ಅಂದರೆ,

1. ಮನಸ್ಸು ಸ್ನಿಗ್ಧ ಅಂದರೆ ಸಾತ್ವಿಕ, ಸೌಮ್ಯ ವಾಗಿರ ಬೇಕು. ಉದ್ರೇಕ ರಹಿತವಾಗಿರಬೇಕು.
2. ದೇಹ ವ್ಯಾಯಾಮ ಅಂದರೆ ಚಟುವಟಿಕೆಯಿಂದ ಕೂಡಿ ಕ್ರಿಯಾಶೀಲವಾಗಿ ಇರಬೇಕು.

Advertisement

ಪಟ್ಟಣದಲ್ಲಿ ಏನಾದರೂ ಕೊಳ್ಳಬೇಕೆಂದರೆ ನೋ ಪಾರ್ಕಿಂಗ್ ಇರುವ ಜಾಗದಲ್ಲಿ ವಾಹನ ಪಾರ್ಕ್ ಮಾಡಿ ಹೋಗುತ್ತೇವೆ. ಬದಲಿಗೆ ದೂರದಲ್ಲಿ ಎಲ್ಲಾದರೂ ಪಾರ್ಕಿಂಗ್ ವ್ಯವಸ್ಥೆ ಇರುವ ಜಾಗದಲ್ಲಿ ವಾಹನ ನಿಲ್ಲಿಸಿ, ಸ್ವಲ್ಪ ದೂರ ನಡೆದುಕೊಂಡು ಹೋಗಿ ನಮ್ಮ ಕೆಲಸವನ್ನು ಮಾಡಿಕೊಂಡರೆ ದೇಹಕ್ಕೆ ಅಷ್ಟಾದರೂ ವ್ಯಾಯಾಮ ದೊರಕಿದಂತಾಗುತ್ತದೆ ಎಂಬ ಧನಾತ್ಮಕ ಚಿಂತನೆಯನ್ನು ಮಾಡಬಹುದಲ್ಲವೇ?

ಸಂಜೆಯ ಹೊತ್ತು ದೂರದರ್ಶನ ಧಾರಾವಾಹಿಗಳನ್ನು ನೋಡಿ, ಅಲ್ಲಿ ಬರುವ ಭಾವೋದ್ರೇಕ ಸನ್ನಿವೇಶಗಳಿಂದ ನಮ್ಮ ರಕ್ತದೊತ್ತಡ ಹೆಚ್ಚಿಸಿಕೊಳ್ಳುವುದರ ಬದಲು , ದೇವರ ಕೋಣೆಯಲ್ಲಿ ದೀಪ ಹಚ್ಚಿ, ಸ್ವಲ್ಪ ಹೊತ್ತು ಭಜನೆ , ಪ್ರಾರ್ಥನೆ, ಧ್ಯಾನಗಳನ್ನು ಮಾಡುವುದು ಆರೋಗ್ಯ ದೃಷ್ಟಿಯಿಂದ ಒಳಿತಲ್ಲವೇ? ಟಿವಿ ನೋಡುವುದು ಬೇಡ ಎಂದು ಮಕ್ಕಳಿಗೆ ಗದರಿಸುವ ಬದಲು, ನೀವು ಕೂಡ ಟಿವಿಯನ್ನು ಸ್ವಿಚ್ ಆಫ್ ಮಾಡಿ ಯಾವುದಾದರೂ ಕೆಲಸದಲ್ಲಿ ತೊಡಗಿಸಿಕೊಂಡು , ಅನುಷ್ಠಾನದ ಮೂಲಕ ಮಕ್ಕಳಿಗೆ ಸಂದೇಶ ನೀಡಬಹುದಲ್ಲವೇ?

Advertisement

ಈ ಎರಡು ಇದ್ದಲ್ಲಿ ವ್ಯಕ್ತಿಯ ದೇಹಕ್ಕೆ ಪ್ರತಿಕೂಲ ಸಂಗತಿಗಳು ಎದುರಾದರೂ ಕೂಡ ಅವುಗಳು ಹಾನಿಯನ್ನು ಉಂಟು ಮಾಡದೆ ನಿಷ್ಫಲವಾಗುತ್ತದೆ.
ಆದುದರಿಂದ,

1. ಸ್ವಚ್ಛ ಮನಸ್ಸು, ವಿಶಾಲ ಮನಸ್ಸು, ಸ್ವಚ್ಛ ವಿಚಾರ
2. ಸ್ವಚ್ಛ ಆಹಾರ, ಸಾತ್ವಿಕ ಆಹಾರ
3. ಸ್ವಚ್ಛ ಮತ್ತು ಯುಕ್ತವಾದ ಜೀವನಶೈಲಿ

Advertisement

ಇವಿಷ್ಟು ಸೇರಿದರೆ ನಮ್ಮ ಫಿಟ್ನೆಸ್ ಕಲ್ಪನೆ ಪರಿಪೂರ್ಣ ವಾಗಬಹುದು. ವಿರುದ್ಧವಾದ ವಿಷಕಾರಕ ಸಂಗತಿಗಳು ಈ ದಾರ್ಢ್ಯತೆಯ ಎದುರು
ನಿಸ್ತೇಜಗೊಳ್ಳಬಹುದು .

ಹಾಗಾದರೆ ನಾವೇನು ಮಾಡಬೇಕು? ಯೋಚಿಸಿ. ಯೋಚನೆ ಅನುಷ್ಠಾನದ ರೂಪವನ್ನುಪಡೆಯಲಿ.

Advertisement

ವಿಶ್ವಗುರು ವಾಗಲಿರುವ ಭಾರತ ಮಾತೆ ಬಲಾಢ್ಯರಾದ ವ್ಯಸನಮುಕ್ತ ಮಕ್ಕಳನ್ನು ಹೊಂದಲಿ.

ಬರಹ:

Advertisement

ಡಾ ರಾಘವೇಂದ್ರ ಪ್ರಸಾದ್ ಬಂಗಾರಡ್ಕ.
ಆಯುರ್ವೇದ ತಜ್ಞ ವೈದ್ಯರು
ಪ್ರಸಾದ್ ಆಯುರ್ವೇದ ಹೆಲ್ತ್ ಕೇರ್ ಸೆಂಟರ್
ಪುರುಷರಕಟ್ಟೆ ಪುತ್ತೂರು.
ಮೊಬೈಲ್:9740545979

Advertisement
Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಹೊಸ ಬೆಳೆ | ರೈತರು ಚಿಂತನೆ ಮಾಡಬೇಕಾದ್ದೇನು…? ಕರಾವಳಿ, ಮಲೆನಾಡಿನಲ್ಲಿ ಉತ್ಪತ್ತಿ ನೀಡುವ “ಪರ್ಯಾಯ ಬೆಳೆಯ ಅಗತ್ಯವಿದೆ” |
April 24, 2024
2:57 PM
by: ಪ್ರಬಂಧ ಅಂಬುತೀರ್ಥ
ಚುನಾವಣೆ ಹಾಗೂ “ನೀತಿ” ಸಂಹಿತೆ ಮತ್ತು ಜಗಳ…! |
April 18, 2024
3:00 PM
by: ಮಹೇಶ್ ಪುಚ್ಚಪ್ಪಾಡಿ
ದೇವರು ಧರ್ಮ ಭಕ್ತಿ ಒಂದು ಒಣ ಆಡಂಬರವಲ್ಲ, ಅದು ನಮ್ಮ ಆತ್ಮಸಾಕ್ಷಿಯ ನಡವಳಿಕೆ | ರಾಮನವಮಿ ಪ್ರಯುಕ್ತ ಬರೆಯುತ್ತಾರೆ ವಿವೇಕಾನಂದ. ಎಚ್. ಕೆ.
April 17, 2024
4:37 PM
by: ವಿವೇಕಾನಂದ ಎಚ್‌ ಕೆ
ಅಡಿಕೆ ತೋಟಕ್ಕೆ ಉದಿ ಏಕೆ ಹಾಕಬೇಕು…?
April 15, 2024
7:55 PM
by: ಪ್ರಬಂಧ ಅಂಬುತೀರ್ಥ

You cannot copy content of this page - Copyright -The Rural Mirror