ಪೆರ್ಲ: ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಹಾಗೂ ಇದರ ಅಂಗಸಂಸ್ಥೆಯಾದ ನಾಲಂದ ಮಹಾವಿದ್ಯಾಲಯ ಪೆರ್ಲ ಇದರ ಆಶ್ರಯದಲ್ಲಿ ಫೆ.8 ರಂದು ಬೃಹತ್ ಕೃಷಿ ಮೇಳವನ್ನು ಕ್ಯಾಂಪ್ಕೋ ನಿಯಮಿತ ಮಂಗಳೂರು ಹಾಗೂ ಪೆರ್ಲ ಸೇವಾ ಸಹಕಾರಿ ಬ್ಯಾಂಕ್ ಇವರ ಸಹಯೊಗದೊಂದಿಗೆ ಪೆರ್ಲ ನಾಲಂದ ಮಹಾವಿದ್ಯಾಲಯದ ಆವರಣದಲ್ಲಿ ನಡೆಯಲಿದೆ.
ಕರಾವಳಿ ಭಾಗದ ಕಾಸರಗೋಡು ಹಾಗೂ ಮಂಜೇಶ್ವರ ತಾಲೂಕಿನ ಕೃಷಿಕರು ಹಾಗೂ ಕೃಷಿ ಕಾರ್ಮಿಕರು ಅನುಭವಿಸುವ ಜ್ವಲಂತ ಸಮಸ್ಯೆಗಳನ್ನು ಚರ್ಚಿಸಿ ಕೃಷಿ ಕ್ಷೇತ್ರವು ಎದುರಿಸುತ್ತಿರುವ ಸವಾಲುಗಳಿಗೆ ಪ್ರಾಯೋಗಿಕವಾಗಿ ಪರಿಹಾರವನ್ನು ಕಂಡುಕೊಳ್ಳುವ ಸಲುವಾಗಿ, ಇಂದಿನ ಯುವಜನತೆಯಲ್ಲಿ ಕೃಷಿ ಕ್ಷೇತ್ರದ ಬಗ್ಗೆ ಆಸಕ್ತಿಯನ್ನು ಮೂಡಿಸಿ ಬೆಳೆಸುವ ಉದ್ದೇಶದಿಂದ, ವಿದ್ಯಾರ್ಥಿಗಳು ಹಾಗು ಕೃಷಿಕರು ಸೃಜನಾತ್ಮಕವಾಗಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕೆಂಬ ಮೂಲ ಉದ್ದೇಶದೊಂದಿಗೆ ಈ ಬೃಹತ್ ಕೃಷಿ ಮೇಳವನ್ನು ಆಯೋಜಿಸಲಾಗಿದೆ.
ಕೃಷಿ ಮೇಳದಲ್ಲಿ ವಿಶೇಷವಾಗಿ ಕೃಷಿ ಯಂತ್ರೋಪಕರಣಗಳು, ವಿವಿಧ ತಳಿಯ ಬೀಜಗಳು, ನರ್ಸರಿ ಗಿಡಗಳು, ವಿವಿಧ ಕೃಷಿ ಉತ್ಪನ್ನಗಳು, ವಿಶೇಷ ಖಾದ್ಯಗಳ ಪ್ರದರ್ಶನ ಹಾಗೂ ಮಾರಾಟ ವ್ಯವಸ್ಥೆ ಇರುತ್ತದೆ. ಕೃಷಿಕರ ಸೃಜನಾತ್ಮಕ ಆಲೋಚನೆಗಳನ್ನು ಸಮಾಜಕ್ಕೆ ತಲುಪಿಸುವ ಗುರಿಯನ್ನು ಹೊಂದಿರುವ ಈ ಕೃಷಿ ಮೇಳದಲ್ಲಿ ಸಂವಾದದ ಮುಖಾಂತರ ಕೃಷಿಕರು ತಮ್ಮ ಸಮಸ್ಯೆಗಳನ್ನು ಪ್ರಸ್ತುತಪಡಿಸಿ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಕೃಷಿ ವಿಚಾರ ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದೆ.
ಸ್ಥಳೀಯ ಬೆಳೆಗಳ ಸಂಬಂಧಿತ ಕೃಷಿ ಉತ್ಪನ್ನಗಳ ವಿಶೇಷ ಪ್ರದರ್ಶನಕ್ಕೆ ಆಕರ್ಷಕ ಬಹುಮಾನ ನೀಡಿ ಪ್ರೇರೇಪಿಸುವ ನವೀನ ಯೋಚನೆಯನ್ನು ಹೊಂದಿದ್ದು ಹೆಚ್ಚಿನ ಸಂಖ್ಯೆಯಲ್ಲಿ ರೈತರ ಭಾಗವಹಿಸುವಿಕೆಯನ್ನು ನಿರೀಕ್ಷಿಸಲಾಗಿದೆ.
ಮೇಳದಲ್ಲಿ ಹಲವಾರು ಸೃಜನಾತ್ಮಕ ಕೃಷಿ ಸಂಬಂಧಿತ ಪ್ರದರ್ಶನಗಳು ಹಾಗೂ ಕೃಷಿಯಲ್ಲಿ ವಿಶೇಷ ಸಾಧನೆಗೈದ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.