ಸುಳ್ಯ: ಲೋಕಸಭಾ ಚುನಾವಣೆಯ ಒಂದು ವಿಶೇಷ ಆಕರ್ಷಣೆ ಪಾರಂಪರಿಕ ಮತಗಟ್ಟೆ. ಸುಳ್ಯ ವಿಧಾನಸಭಾ ಕ್ಷೇತ್ರದ 209 ನೇ ಮತಗಟ್ಟೆಯನ್ನು ಈ ಬಾರಿ ಪಾರಂಪರಿಕ ಮತಗಟ್ಟೆ ಎಂದು ಗುರುತಿಸಲಾಗಿತ್ತು. ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಬಡ್ಡಡ್ಕ ಶ್ರೀ ರಾಮಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಪಾರಂಪರಿಕ ಮೆರುಗು ಪಡೆದು ಶೃಂಗಶರಗೊಂಡು ಮಧುವಣಗಿತ್ತಿಯಂತೆ ಆಕರ್ಷಣೆ ಪಡೆದಿತ್ತು. ಮತಗಟ್ಟೆಯ ಮುಂಭಾಗದಲ್ಲಿ ತೆಂಗಿನ ಮಡಲು, ಚಾಪೆ ಮತ್ತಿತರ ಪಾರಂಪರಿಕ ವಸ್ತುಗಳನ್ನು ಬಳಸಿ ಅಲಂಕರಿಸಲಾಗಿತ್ತು. ಅಲ್ಲದೆ ಶಾಲೆಯ ಎದುರು ಭಾಗದಲ್ಲಿ ವಿಶೇಷ ಅಲಂಕಾರವನ್ನು ಮಾಡಲಾಗಿತ್ತು. ಮತದಾರರನ್ನು ಸೆಳೆದು ಮತದಾನ ಪ್ರಮಾಣವನ್ನು ಹೆಚ್ಚಿಸುವ ದೃಷ್ಠಿಯಿಂದ ಮತಗಟ್ಟೆಗಳಲ್ಲಿ ವಿಶೇಷ ಆಕರ್ಷಣೆಯನ್ನು ಮಾಡಲಾಗಿತ್ತು. ಪ್ರಕೃತಿ ಸಿರಿಯ ಮಧ್ಯೆ ಇರುವ ಗಡಿ ಪ್ರದೇಶದ ಶಾಲೆಯಲ್ಲಿನ ಪಾರಂಪರಿಕ ಮತಗಟ್ಟೆಯಲ್ಲಿ ಬೆಳಗ್ಗಿನಿಂದಲೇ ಉತ್ಸಾಹ ಕಳೆ ಕಟ್ಟಿತ್ತು. ಬೆಳಗ್ಗಿನಿಂದಲೇ ಮತದಾರರು ಉತ್ಸಾಹದಿಂದ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ಅಲ್ಲದೆ ಮತಗಟ್ಟೆಯಲ್ಲಿ ಬರುವ ಮತದಾರರಿಗೆ ಕುಡಿಯುವ ನೀರು ಮತ್ತಿತರ ವ್ಯವಸ್ಥೆಗಳನ್ನೂ ಮಾಡಲಾಗಿತ್ತು.