ನಿಲ್ಲಿ ಮೋಡಗಳೆ ಎಲ್ಲಿ ಓಡುವಿರಿ
ನಾಲ್ಕು ಹನಿಯ ಸುರಿಸಿ ಎಂದು ರೇಡಿಯೋ ದಲ್ಲಿ ಬರುತ್ತಿದ್ದರೆ ಅಂಗಳಕ್ಕೆ ಹೋಗಿ ಆಕಾಶದಲ್ಲಿ ಓಡೋ ಮೋಡಗಳನ್ನು ನೋಡುತ್ತಿದ್ದುದು ನಿನ್ನೆ ಮೊನ್ನೆ ನಡೆದಂತಿದೆ.
ಮೋಡಗಳ ಓಟವೋ ಹುಚ್ಚು ಹಿಡಿಸುವಂತಿರುತ್ತದೆ. ಒಮ್ಮೆ ಪರ್ವತ, ನೋಡುತ್ತಿದ್ದಂತೆ ನದಿ, ಜಲಪಾತ, ಮಗದೊಮ್ಮೆ ಆನೆ, ಹುಲಿ ಕುರಿ, ಹಾವು. ನಿಧಾನ ಗತಿಯಲ್ಲಿ ಬದಲಾಗುವ ಮೋಡಗಳ ಬಣ್ಣಗಳು ಕಲ್ಪನೆಯ ಆಕಾರಕ್ಕೆ ರೂಪ ಕೊಡುತ್ತದವೆ. ಚಲಿಸುತ್ತಿರುವ ಮೋಡಗಳನ್ನು ಸುಮ್ಮನೆ ಕುಳಿತು ನೋಡುವುದೇ ಕಣ್ಣಿಗೆ ಹಬ್ಬ.
ನೀಲಿಯ ಆಕಾಶದಲ್ಲಿ ದೂರ ದೂರಕೆ ಒಂದೊಂದು ಮೋಡಗಳು ಕಾಣಿಸಲಾರಂಭಿಸಿದವೆಂರೆ ಮನಸು ಮುದಗೊಳ್ಳುತ್ತದೆ. ಪುಟ್ಟ ಪುಟ್ಟ ಮೋಡಗಳು ಒಂದಕ್ಕೊಂದು ಜೊತೆಯಾಗುತ್ತಿದ್ದಂತೆ ಒಂದನೇ ತರಗತಿಯ ಮಕ್ಕಳು ಕೈ ಕೈ ಹಿಡಿದು ತರಗತಿಯೊಳಗೆ ಹೋಗುವುದೇ ನೆನಪಾಗುತ್ತದೆ.
ಹೊತ್ತು ಮುಳುಗುತ್ತಿದ್ದಂತೆ ಬೇರೆ ಬೇರೆ ಬಣ್ಣಗಳಲ್ಲಿ ವಿವಿಧ ಆಕಾರಗಳಲ್ಲಿ ಗೋಚರವಾಗುವ ಮೋಡಗಳು ನಮ್ಮ ನಮ್ಮ ಕಲ್ಪನೆಗೆ ತಕ್ಕಂತೆ ರೂಪ ತಳೆಯುತ್ತದೆ. ಅಲ್ಲಿ ಅಜ್ಜ ಕಾಣ್ತಾರೆ, ಅಜ್ಜಿ ಬರುತ್ತಾಳೆ, ದೂರಾದ ಗೆಳೆಯ , ಗೆಳತಿಯರು ನೆನಪಾಗುತ್ತಾರೆ, ತರಗತಿಯಲ್ಲಿ ಪಕ್ಕದಲ್ಲೇ ಕುಳಿತಿರುತ್ತಿದ್ದ ಗತಿಸಿ ಹೋದ ಗೆಳತಿಯ ನೆನೆದು ಕಣ್ಣೀರು ನನಗರಿಯದೆ ಬಂದುಬಿಡುತ್ತದೆ.
ಕವಿಯ ಕಲ್ಪನೆಗೆ ಸ್ಪೂರ್ತಿ ಯಾಗುವ ಮೋಡಗಳು ಹೊಸ ಹೊಸ ಕವನಗಳ ಸಾಧ್ಯತೆ ಯನ್ನು ತೆರೆದಿಡುತ್ತದೆ. ಕಲಾವಿದನ ನಾಟ್ಯಾಭಿ ನಯಕ್ಕೆ ಮಾರ್ಗದರ್ಶಿಯಾಗುತ್ತದೆ. ವರ್ಣಗಾರನ ಚಿತ್ರಿಕೆಗೆ ರೂಪದರ್ಶಿಯಾಗಿ ಮೋಡಗಳು ಮೆರೆಯುತ್ತವೆ. ತನ್ನ ಓಟದ ವೇಗದಲ್ಲೇ ಬದಲಾಗುವ ಕಾಲಮಾನವನ್ನು ಸೂಚ್ಯವಾಗಿ ಮೋಡಗಳು ತೋರಿಸುತ್ತವೆ.
ಬದುಕಿನ ನಶ್ವರತೆಯನ್ನು ಮೋಡಗಳು ಸೂಚಿಸುತ್ತವೆ. ನಾವು ಅಂದು ಕೊಂಡಂತೆ ಯಾವುದೂ ನಡೆಯುವುದಿಲ್ಲ, ಭಗವಂತನ ಇಚ್ಛೆಯಂತೆ , ನಮ್ಮನ್ನೂ ಸೇರಿದಂತೆ ಜಗತ್ತು ನಡೆಯುತ್ತದೆ ಎಂದು ಮೋಡಗಳು ಸಾರಿ ಸಾರಿ ಹೇಳುತ್ತಿವೆಯೇನೋ ಅನ್ನಿಸುತ್ತಿದೆ.
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel