ಬೆಳ್ತಂಗಡಿ: ಪ್ರವಾಹಕ್ಕೆ ಸಿಕ್ಕಿ ಕಡಿದು ಹೋಗಿದ್ದ ಸಂಪರ್ಕ ಸೇತು ಕೆಲವೇ ದಿನದಲ್ಲಿ ತಾತ್ಕಾಲಿಕವಾಗಿ ಮರು ನಿರ್ಮಾಣಗೊಳ್ಳುವ ಮೂಲಕ ಬಾಂಜಾರು ಮಲೆ ನಿವಾಸಿಗಳಿಗೆ ಹೊರಪ್ರಪಂಚ ಕಾಣುವಂತಾಗಿದೆ.
ಬೆಳ್ತಂಗಡಿ ತಾಲೂಕಿನಲ್ಲಿ ಮಳೆ ಹಾಗೂ ಭೂ ಕುಸಿತದಿಂದಾಗಿ ಅಪಾರ ಹಾನಿ ಸಂಭವಿಸಿ ತತ್ತರಿಸಿ ಹೋಗಿದ್ದ ಬೆಳ್ತಂಗಡಿಯ ಗ್ರಾಮಗಳು ಅತ್ಯಂತ ವೇಗವಾಗಿ ಚೇತರಿಸಿಕೊಳ್ಳುತ್ತಿದೆ. ಅದಕ್ಕೆ ಉದಾಹರಣೆ ಕುಕ್ಕಾವು ಸೇತುವೆ, ಹೊಸಮಠ ಸೇತುವೆ ಹಾಗೂ ಬಾಂಜಾರುಮಲೆಯ ಸ್ಟೀಲ್ ಬ್ರಿಡ್ಜ್. ತಿಂಗಳ ಕಾಲ ಸಂಪರ್ಕವಿಲ್ಲದೆ ಕೊರೆಯಬೇಕಾಗಿ ಬರಲಿದೆ ಎಂದು ಭಾವಿಸಿದ್ದ ಜನರಿಗೆ ಒಂದೇ ವಾರದಲ್ಲಿ ತಾತ್ಕಾಲಿಕ ಸೇತುವೆಗಳನ್ನು ನಿರ್ಮಿಸಿ ಬೆಳ್ತಂಗಡಿ ಮಾದರಿಯಾಗಿದೆ.
ಕಡಿದು ಹೋಗಿದ್ದ ದಿಡುಪೆಯ ಸೇತುವೆಯನ್ನು ಹಾಗೂ ಹೊಸಮಠ ಸೇತುವೆಗಳನ್ನು ತಾತ್ಕಾಲಿಕವಾಗಿ ನಿರ್ಮಿಸಿ ವಾಹನ ಸಂಚಾರಕ್ಕೆ ಬಿಡಲಾಗಿದ್ದರೆ ಇಂದು ಬಾಂಜಾರು ಮಲೆಯಲ್ಲಿ ಕೊಚ್ಚಿ ಹೋಗಿದ್ದ ಸೇತುವೆಯ ಬದಲಾಗಿ ಸ್ಟೀಲ್ ಬ್ರಿಡ್ಜ್ ನಿರ್ಮಿಸಿ ಕಾನನದ ನಡುವೆ ಅತಂತ್ರರಾಗಿದ್ದ ಬಾಂಜಾರು ನಿವಾಸಿಗಳಿಗೆ ಹೊಸ ಭರವಸೆಯ ಬೆಳಕನ್ನು ನೀಡಲಾಗಿದೆ.
ಬಾಂಜಾರು ಮಲೆ ಮಲೆಕುಡಿಯರ ಕಾಲೊನಿಗೆ ಸಂಪರ್ಕ ಕಲ್ಪಿಸುವ ಸೇತುವೆ ಭಾರೀ ಮಳೆಗೆ ಕೊಚ್ಚಿ ಹೋಗಿತ್ತು ಇಲ್ಲಿನ ಸುಮಾರು 40 ಕ್ಕೂ ಹೆಚ್ಚು ಆದಿವಾಸಿ ಕುಟುಂಬಗಳು ಹೊರ ಪ್ರಪಂಚದೊಂದಿಗೆ ಸಂಪರ್ಕವನ್ನೇ ಕಳೆದುಕೊಂಡಿದ್ದರು ಕಳೆದ ಒಂದು ವಾರದಿಂದ ಈ ಜನರು ಆಹಾರಕ್ಕೂ ಪರದಾಡುವಂತಾಗಿತ್ತು. ತಾಲೂಕು ಆಡಳಿತವೇ ಇವರಿಗೆ ಆಹಾರವನ್ನು ಪೂರೈಸಿತ್ತು. ಇದೀಗ ಒಂದೇ ವಾರದಲ್ಲಿ ಬಾಂಜಾರು ಮಲೆಗೆ ವಾಕಿಂಗ್ ಸ್ಟೀಲ್ ಬ್ರಿಡ್ಜ್ ನಿರ್ಮಿಸಿ ಅವರಿಗೆ ಹೊರಪ್ರಪಂಚದೊಂದಿಗೆ ಸಂಪರ್ಕ ಸಾಧಿಸುವಂತಾಗಿದೆ.
ನಿರ್ಮಾಣಗೊಂಡಿರುವ ವಾಕಿಂಗ್ ಸ್ಟೀಲ್ ಬ್ರಿಡ್ಜ್ 42 ಅಡಿ ಉದ್ದವಿದ್ದು 4 ಅಡಿ ಅಗಲವಿದೆ. ನದಿಯಿಂದ 15 ಮೀಟರ್ ಎತ್ತರದಲ್ಲಿ ಸೇತುವೆಯಿದೆ. ಪುತ್ತೂರಿನ ಮಾಸ್ಟರ್ ಪ್ಲಾನರಿ ಸಂಸ್ಥೆಯವರು ಇದನ್ನು 5 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಿದ್ದಾರೆ. ಲೋಕೋಪಯೋಗಿ ಇಲಾಖೆಯ ಮಂಗಳೂರಿನ ಕಾರ್ಯಪಾಲಕ ಇಂಜಿನಿಯರ್ ಯಶವಂತ್ ಹಾಗೂ ಬೆಳ್ತಂಗಡಿಯ ಕಾರ್ಯಪಾಲಕ ಇಂಜಿನಿಯರ್ ಶಿವಪ್ರಸಾದ್ ಅಜಿಲ ಅವರು ಉಸ್ತುವಾರಿ ವಹಿಸಿಕೊಂಡಿದ್ದರು.
Advertisement