ಸುಳ್ಯವು ದಕ್ಷಿಣ ಭಾರತದ ಬಿಜೆಪಿ ಹೆಬ್ಬಾಗಿಲು.. ಹೀಗೆಂದು ಬಿಜೆಪಿ ನಾಯಕ ಎಲ್ ಕೆ ಅಡ್ವಾಣಿ ಅವರಿಂದ ಕರೆಯಲ್ಪಟ್ಟಿದೆ. ರಾಜ್ಯದ, ರಾಷ್ಟ್ರದ ಸಂಘ ಪರಿವಾರದ ಎಲ್ಲಾ ನಾಯಕರು ಸುಳ್ಯವನ್ನು ಸಂಘಟನೆಯ ತವರು ಎಂದು ಬಣ್ಣಿಸುತ್ತಿದ್ದರು. ಆದರೆ ಈಚೆಗೆ ಕೆಲವು ಸಮಯಗಳಿಂದ ಸುಳ್ಯದ ಸಂಘ ಪರಿವಾರದ ವಲಯದಲ್ಲಿ ತಳಮಳಗಳು ಕಾಣುತ್ತಿದೆ. ಡಿಸಿಸಿ ಬ್ಯಾಂಕ್ ಚುನಾವಣೆ ಬಳಿಕ ಹೆಚ್ಚಾದ ಗೊಂದಲಗಳ ಬಗ್ಗೆ ಗ್ರಾಮಮಟ್ಟದಲ್ಲಿ , ತಳಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ.
ಸಂಘಟನೆಗೂ , ಜನ ಸೇರಿಸುವುದಕ್ಕೂ ವ್ಯತ್ಯಾಸ ಇದೆ ಎಂದು ಸಾಮಾಜಿಕ ಮುಖಂಡರೊಬ್ಬರು ಪದೇ ಪದೇ ಹೇಳುತ್ತಿದ್ದರು. ಇಂದು ಸಂಘಪರಿವಾರದಲ್ಲಿ ಜನಸೇರಿಸುವುದು ನಡೆಯುತ್ತಿದೆ. ಸಂಘಟನೆಯಾಗುವುದು ನಿಂತಿದೆ ಎಂಬುದು ಅದೇ ಹಿರಿಯರ ಅಂಬೋಣ. ಸುಳ್ಯದಲ್ಲಿ ಪರ್ಯಾಯ ರಾಜಕೀಯ ಶಕ್ತಿ ಗಟ್ಟಿಯಾಗದೇ ಇರುವುದು ಬಿಜೆಪಿ ಸತತವಾಗಿ ಗೆಲ್ಲುವುದಕ್ಕೆ ಕಾರಣವಾಗುತ್ತಿದೆ. ಈಗ ಇದೇ ಸಂಘಟನೆ ಎಂದು ಅರಿತುಕೊಂಡು ಬಿಜೆಪಿಯಲ್ಲಿ ಯಾವುದೇ ಬದಲಾವಣೆಗಳು ಕಾಣುತ್ತಿಲ್ಲ. ಯಾವುದೇ ಪ್ರಮುಖ, ಜನರ ಆದ್ಯತೆಯ ಬೇಡಿಕೆಯ ಅಭಿವೃದ್ಧಿ ಕಾರ್ಯವಾಗದೇ ಇದ್ದರೂ ಮತಗಳು ಬೀಳುತ್ತವೆ, ಅತ್ಯಧಿಕ ಲೀಡ್ ನಿಂದ ಗೆಲುವಾಗುತ್ತದೆ, ಲೋಕಸಭೆ, ವಿಧಾನಸಭೆಗೂ ಮತಗಳೂ ಬೀಳುತ್ತವೆ ಎಂಬ ಸನ್ನಿವೇಶ ಉಂಟಾಗಿದೆ. ತಾಲೂಕಿನ ಬಹುತೇಕ ರಸ್ತೆಗಳು, 110 ಕೆವಿ ಸಬ್ ಸ್ಟೇಶನ್ ಸೇರಿದಂತೆ ಅನೇಕ ಸಮಸ್ಯೆಗಳಿಗೆ ಇಂದಿಗೂ ಮುಕ್ತಿ ದೊರೆತಿಲ್ಲ. ಈ ಬಗ್ಗೆ ಮಾತನಾಡಿದ ತಕ್ಷಣವೇ ಪ್ರತ್ಯುತ್ತರ ಬರುತ್ತದೆ, ಅನುದಾನ ಇದ್ದರೂ ಪ್ರತಿಭಟನೆ ನಡೆಯುತ್ತದೆ ಎಂದು ಹೋರಾಟದ ದ್ವನಿ ತಗ್ಗಿಸಲಾಗುತ್ತದೆ. ಆದರೆ ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳಿಗೆ ಈ ಎಲ್ಲಾ ಸಂಗತಿಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗುತ್ತಿಲ್ಲ, ಕಾರಣ ಒಳಗೊಳಗೇ ಭಿನ್ನಮತ. ಚುನಾವಣೆಯ ಹೊತ್ತಿಗೆ ಇಮೋಶನಲ್ ಟಚ್ ತರಲಾಗುತ್ತದೆ. ಅಭಿವೃದ್ಧಿಯಾಗದೇ ಇದ್ದರೂ ಮತಗಳು ಬೀಳುವಂತೆ ಮಾಡಲಾಗುತ್ತದೆ. ಬಳ್ಪದಂತಹ ಆದರ್ಶ ಗ್ರಾಮದಲ್ಲಿರುವ ಮೂಲಭೂತ ಸಮಸ್ಯೆಗಳೂ ಗೌಣವಾಗಿ ಇಮೋಶನಲ್ ಮತಗಳು ಸಿಗುತ್ತವೆ. ಇದುವೇ ಇಂದು ಸುಳ್ಯದ ಬಹುತೇಕ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಅಷ್ಟೇ ಅಲ್ಲ ಅಭಿವೃದ್ಧಿ ಬಗ್ಗೆ ಮಾತನಾಡುವವರು ಬದಿಗೆ ಸರಿಯುತ್ತಾರೆ. ಯಾವುದೇ ಟೀಕೆಗಳು, ಸಲಹೆಗಳನ್ನು ರಚನಾತ್ಮಕವಾಗಿ ಕಾಣಲಾಗುತ್ತಿಲ್ಲ, ಬದಲಾಗಿ ವಿರೋಧಿಗಳಾಗಿ ಪರಿಗಣನೆಯಾಗುತ್ತದೆ ಎಂಬುದು ರಾಜಕೀಯ ವಿಶ್ಲೇಷಣೆ.
ಸುಳ್ಯದ ಸಂಘಪರಿವಾರದ ಒಳಗೂ ತಳಮಳ ಕಾಣುತ್ತಿದೆ ಈಚೆಗೆ. ಡಿಸಿಸಿ ಬ್ಯಾಂಕ್ ಚುನಾವಣೆ ಬಳಿಕ ಸುಳ್ಯದಲ್ಲಿ ಸಂಘಪರಿವಾರದಲ್ಲಿ ಸಂಘಟನೆ ಬದಲಾಗಿ ಜನ ಸೇರಿಸುವ ಪ್ರಕ್ರಿಯೆ, ಗುಟ್ಟು ಗುಟ್ಟಾದ ಕಾರ್ಯಗಳು, ಬಂಡಾಯ-ಥಂಡಾಯ , ಆರೋಪ-ಪ್ರತ್ಯಾರೋಪ ನಡೆಯುವುದು ಕಂಡರೆ, ಕೆಲವು ನಿರ್ಧಾರಗಳಲ್ಲೂ ಭಿನ್ನಮತ, ಅಸಹನೆ ಕಾಣುತ್ತಿದೆ. ಡಿಸಿಸಿ ಬ್ಯಾಂಕ್ ಚುನಾವಣೆ ಬಳಿಕವಂತೂ ಸುಳ್ಯದಲ್ಲಿ ಸಂಘಟನೆಯೊಳಗೆ ಇಲ್ಲವೆಂದರೂ ಅಸಮಾಧಾನಗಳು ಹೆಚ್ಚಾಗಿರುವುದು ಕಂಡುಬಂದಿದೆ. ಅದಕ್ಕೆ ಸಾಕ್ಷಿಯಾಗಿ ನೆಲ್ಲೂರು ಕೆಮ್ರಾಜೆ ಸಹಕಾರಿ ಸಂಘದ ಚುನಾವಣೆ ಹಾಗೂ ಇತರ ಸಹಕಾರಿ ಸಂಘಗಳಲ್ಲಿ ನಡೆದ ಬೆಳವಣಿಗೆಗಳು. ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಅಡ್ಡಮತದಾನದ ನಂತರ ಶಿಸ್ತು ಕ್ರಮ ಎಂದು ಸಂಘಪರಿವಾರ ಹೇಳಿತ್ತು. ಈ ಬೆಳವಣಿಗೆಗೆ ಸ್ವಾಗತ ವ್ಯಕ್ತವಾಯಿತು.
ಆದರೆ ಅನುಷ್ಠಾನದ ಹೊತ್ತಲ್ಲಿ ಸಂಘ ಪರಿವಾರದ ಈ ಹಿಂದಿನ ಯಾವುದೇ ಕ್ರಮಗಳಂತೆ ಆಗಿಲ್ಲ ಎಂಬ ಆರೋಪ ವ್ಯಕ್ತವಾಯಿತು. ಇಂದಿಗೂ ಈ ಅಸಮಾಧಾನಗಳು ಕಡಿಮೆಯಾಗಿಲ್ಲ. ಸಂಘಪರಿವಾರದ ವಿಭಾಗದಲ್ಲಿ ಸಹಕಾರ ಕ್ಷೇತ್ರಕ್ಕೆ ಸಹಕಾರ ಭಾರತಿ ಎಂಬ ಪ್ರತ್ಯೇಕ ವಿಭಾಗ ಇದ್ದರೂ ಸಂಘ ಪರಿವಾರದ ರಾಜಕೀಯ ಕ್ಷೇತ್ರದ ವಿಭಾಗವಾದ ಬಿಜೆಪಿ ಕೈಯಾಡಿಸಿತು. ಇಲ್ಲಿಂದಲೇ ಸುಳ್ಯದಲ್ಲಿ ಸಹಕಾರಿ ಕ್ಷೇತ್ರದೊಳಗೂ ರಾಜಕೀಯ ಪ್ರವೇಶ ಮಾಡಿತು. ಕಳೆದ ಅನೇಕ ವರ್ಷಗಳಿಂದ ರಾಜಕೀಯ ಕ್ಷೇತ್ರ ಸಹಕಾರಿ ಕ್ಷೇತ್ರದಲ್ಲಿದ್ದರೂ ಇಷ್ಟೊಂದು ಪ್ರಮಾಣದಲ್ಲಿ ಕಾಣಲಿಲ್ಲ. ಈ ಬಾರಿಯ ಡಿಸಿಸಿ ಚುನಾವಣೆ ನಂತರ ಸುಳ್ಯದಲ್ಲಿ ಸಹಕಾರಿ ಕ್ಷೇತ್ರ ಚರ್ಚೆಗೆ ಕಾರಣವಾಯಿತು. ಇಂದಿಗೂ ಅಡ್ಡಮತದಾನದ ಬಗ್ಗೆ ಶಾಸಕರು, ಬಿಜೆಪಿ ಮಂಡಲ ಅದ್ಯಕ್ಷರು ಹೇಳಿಕೆ ನೀಡುತ್ತಲೇ ಇದ್ದಾರೆ. ಆದರೆ ಯಾವುದೇ ಕ್ರಮಗಳೂ ನಡೆಯಲಿಲ್ಲ, ಅಸಮಾಧಾನಗಳು ಕಡಿಮೆಯಾಗಲಿಲ್ಲ.ಸಂಘ ಪರಿವಾರದ ಹಿರಿಯರೂ ಗಮನಿಸಲಿಲ್ಲ.
ಈಚೆಗೆ ಗಮನಿಸಿದರೆ, ಶಾಸಕ ಅಂಗಾರ ಅವರಿಗೆ ಸಚಿವ ಸ್ಥಾನ ಕೈತಪ್ಪಿದಾಗ, ಡಿಸಿಸಿ ಬ್ಯಾಂಕ್ ಚುನಾವಣೆಯ ಅಡ್ಡಮತದಾನದ ನಂತರ ಸೂಕ್ತ ಕ್ರಮದ ನಿರ್ಧಾರಗಳು, ಅಕಾಡೆಮಿಗಳಿಗೆ ಆಯ್ಕೆ ಸಂದರ್ಭ ಸುಳ್ಯದ ಸಂಘಪರಿವಾರದ ಎಲ್ಲಾ ನಿರ್ಧಾರಗಳಲ್ಲೂ ಗೊಂದಲ ಕಂಡುಬಂದಿತ್ತು. ಜಿಲ್ಲೆಯಲ್ಲೂ ಲೋಕಸಭೆ, ವಿಧಾನಸಭಾ ಚುನಾವಣೆಯ ಸಮಯದಲ್ಲಿ ಇಂತಹದ್ದೇ ಗೊಂದಲಗಳು ಕಂಡುಬಂದಿತ್ತು. ಹಿಂದೆಂದೂ ಕಾಣದ ಗೊಂದಲಗಳು ಸಂಘಪರಿವಾರದಲ್ಲಿ ಈಗ ಕಾಣುತ್ತಿದೆ.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…
ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…