ಮಡಿಕೇರಿ: ವೀರಾಜಪೇಟೆ ನಗರ ವ್ಯಾಪ್ತಿಯಲ್ಲಿ ಭಾರೀ ಮಳೆಯಿಂದಾಗಿ ಬಿರುಕು ಕಾಣಿಸಿಕೊಂಡಿರುವ ಮಲೆತಿರಿಕೆ ಬೆಟ್ಟ ಹಾಗೂ ನೆಹರು ನಗರದ ಬೆಟ್ಟ ಪ್ರದೇಶಗಳಿಗೆ ಭಾರತೀಯ ಸರ್ವೇಕ್ಷಣಾ ಇಲಾಖೆಯ ತಂತ್ರಜ್ಞಾನ ವಿಭಾಗದ ವಿಜ್ಞಾನಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಈ ಪ್ರದೇಶ ಸದ್ಯಕ್ಕೆ ವಾಸಕ್ಕೆ ಯೋಗ್ಯವಲ್ಲದ ಕಾರಣ ಸ್ಥಳಾಂತರಿಸಲ್ಪಟ್ಟಿರುವ ಕುಟುಂಬಗಳನ್ನು ತಾತ್ಕಾಲಿಕವಾಗಿ ಪರಿಹಾರ ಕೇಂದ್ರಗಳಲ್ಲೇ ಇರಿಸುವಂತೆ ಸಲಹೆ ಮಾಡಿದೆ.
ಬೆಟ್ಟ ಬಿರುಕು ಮೂಡಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಕೇಂದ್ರೀಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಪತ್ರ ಬರೆದು ಬೆಟ್ಟ ಪ್ರದೇಶವನ್ನು ವೈಜ್ಞಾನಿಕವಾಗಿ ಪರಿಶೀಲಿಸುವಂತೆ ಮನವಿ ಮಾಡಿದ್ದರು. ಈ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ವಿಜ್ಞಾನಿಗಳಾದ ಸುನಂದನ್ ಬಸು ಮತ್ತು ಕಪಿಲ್ ಸಿಂಗ್ ಶನಿವಾರ ಬೆಟ್ಟ ಬಿರುಕು ಬಿಟ್ಟ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.ಬೆಟ್ಟದ ಮಣ್ಣನ್ನು ಸಂಗ್ರಹಿಸಿದ ವಿಜ್ಞಾನಿಗಳು, ಮೊದಲು ಮಣ್ಣಿನ ಪರೀಕ್ಷೆ ನಡೆಸಬೇಕಿದೆ. ಆ ಬಳಿಕವೇ ಬೆಟ್ಟದಲ್ಲಿ ಬಿರುಕು ಮೂಡಲು ಕಾರಣವಾದ ನಿಖರ ಮಾಹಿತಿ ಲಭ್ಯವಾಗುತ್ತದೆ ಎಂದು ಹೇಳಿದರು.
ಬೆಂಗಳೂರಿನ ಭಾರತೀಯ ಸರ್ವೆಕ್ಷಣಾ ಇಲಾಖಾ ಅಧಿಕಾರಿ ಸುನಂದನ್ ಬಸು ಅವರು ಮಾತನಾಡಿ ಕಲ್ಲು ಮಣ್ಣುಗಳಿಂದ ಕೂಡಿದ ಬೆಟ್ಟ ಪ್ರದೇಶವಾಗಿರುವುದರಿಂದ ಬೆಟ್ಟದ ಮಣ್ಣು ಕಲ್ಲುಗಳನ್ನು ಹಿಡಿದಿಟ್ಟುಕೊಳ್ಳುತ್ತದೆ. ಬೆಟ್ಟ ತುಂಬಾ ಇಳಿಜಾರು ಆಗಿದ್ದು, ಮಳೆಯ ನೀರು ಕಲ್ಲುಗಳ ಸಂದಿಯಲ್ಲಿ ಸೇರಿ ಮಣ್ಣನ್ನು ತೇವ ಮಾಡುವುದರಿಂದ ಮಣ್ಣು ತನ್ನ ಸಾಂದ್ರತೆಯನ್ನು ಕಳೆದುಕೊಂಡು ಮೊದಲು ಬಿರುಕು ಕಾಣಿಸಿಕೊಳ್ಳುತ್ತದೆ ಕ್ರಮೇಣ ಕುಸಿಯುವ ಸಾಧ್ಯತೆ ಇರುವುದಾಗಿ ತಿಳಿಸಿದರಲ್ಲದೆ, ಬೆಟ್ಟದ ಕೆಳ ಭಾಗದ ಜನರನ್ನು ಸ್ಥಳಾಂತರ ಮಾಡುವಂತೆ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ವೀರಾಜಪೇಟೆ ಪಟ್ಟಣ ಪಂಚಾಯತ್ ವತಿಯಿಂದ ಬಿರುಕು ಬಿಟ್ಟ ಸ್ಥಳವನ್ನು ತಾತ್ಕಾಲಿಕವಾಗಿ ಸಿಮೆಂಟ್ ಹಾಕಿ ಮುಚ್ಚಲಾಗಿದೆ. ನೀರು ಹರಿಯಲು ಅನುಕೂಲವಾಗುವಂತೆ ಪರ್ಯಾಯ ದಾರಿ ಮಾಡಿ ಕೊಡಲಾಗಿದೆ. ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ನೀಡಿದ ಪ್ರಾಥಮಿಕ ವರದಿ ಆಧರಿಸಿ, ಬೆಟ್ಟ ತಪ್ಪಲಿನ 54 ಕುಟುಂಬಗಳ ನಿವಾಸಿಗಳನ್ನು ಸ್ಥಳಾಂತರ ಮಾಡಲಾಗಿದೆ. ಸಂತ್ರಸ್ತರಿಗೆ ನಿರಾಶ್ರಿತರ ಶಿಬಿರಗಳಲ್ಲಿ ಆಶ್ರಯ ಕಲ್ಪಿಸಲಾಗಿದ್ದು, ಆ.31ರವರೆಗೆ ಅವರನ್ನು ಅಲ್ಲಿಯೇ ಉಳಿದುಕೊಳ್ಳಲು ತಾತ್ಕಾಲಿಕವಾಗಿ ವ್ಯವಸ್ಥೆ ಮಾಡಲಾಗುತ್ತದೆ. ಮಳೆ ಕಡಿಮೆಯಾದ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಇದೇ ಸಂದರ್ಭ ಅಲ್ಲಿನ ವಾರ್ಡ್ ಸದಸ್ಯ ಡಿ.ಪಿ.ರಾಜೇಶ್ ಮಾತನಾಡಿ, ಆ.11 ರಂದು ಬೆಟ್ಟದಲ್ಲಿ ಬಿರುಕು ಕಾಣಿಸಿಕೊಂಡಿದ್ದು ಮಳೆಯ ನೀರು ಬಿರುಕಿಗೆ ಹೋಗದಂತೆ ಸಿಮೆಂಟ್ ಸ್ಯಾಂಡ್ ಹಾಕಿ ಮುಚ್ಚಲಾಗಿದೆ. ಆದರೂ ಅಲ್ಲಲ್ಲಿ ಸಣ್ಣಪುಟ್ಟ ಬಿರುಕುಗಳು ಕಾಣಿಸುತ್ತಿವೆ. ಈ ಕಾರಣದಿಂದ ಇಲ್ಲಿರುವ ಕುಟುಂಬಗಳನ್ನು ಪರಿಹಾರ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದರು.
ಈ ವೇಳೆ ಪ್ರೊಬೆಷನರಿ ಐಎಎಸ್ ಅಧಿಕಾರಿ ಸುಮೇಶ್, ತಹಶೀಲ್ದಾರ್ ಕೆ.ಪುರಂದರ, ಪಿಡಬ್ಲ್ಯುಡಿ ಸಹಾಯಕ ಅಭಿಯಂತರ ಸುರೇಶ್, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಎ.ಎಂ.ಶ್ರೀಧರ್ ಇತರರು ಉಪಸ್ಥಿತರಿದ್ದರು.
ಕೃಷಿಗಾಗಿ, ಕೃಷಿ ಉಳಿಸುವುದಕ್ಕಾಗಿ ಸುರಂಗ ಕೊರೆದು ನೀರು ಹರಿಸಿದ ವಿಶೇಷ ಸಾಧನೆಯನ್ನು ಮಾಡಿದ್ದಾರೆ…
ದೇಶಾದ್ಯಂತ ಅಳಿವಿನಂಚಿಗೆ ತಲುಪಿರುವ ಗುಬ್ಬಚ್ಚಿ ಸಂಕುಲದ ರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು…
ಸ್ವಾವಲಂಬನೆಯ ಜೀವನ ಕಟ್ಟಿಕೊಳ್ಳುತ್ತಿರುವ ಅನೇಕ ಮಹಿಳಾ ಉದ್ಯಮಿದಾರರಿಗೆ ಎನ್‍ಆರ್ ಎಲ್‍ಎಮ್ ಯೋಜನೆಯು ಸ್ಪೂರ್ತಿಯ…
ಕೊಡಗು ಜಿಲ್ಲೆಯಲ್ಲಿ ಅಕ್ರಮ ಲಾಟರಿ, ಇತರೆ ರಾಜ್ಯದ ಲಾಟರಿಗಳು, ಮಟ್ಕಾಗೆ ಪೂರ್ಣ ಪ್ರಮಾಣದಲ್ಲಿ…
ಹಾನಿಯಾದ ಮನೆ ಮತ್ತು ಬೆಳೆಗಳಿಗೆ ತ್ವರಿತವಾಗಿ ಪರಿಹಾರ ನೀಡಿ, ಯಾವುದೇ ಪ್ರಕರಣಗಳು ಬಾಕಿ…
ಭಾರತದ ಸ್ವಚ್ಛತಾ ಅಭಿಯಾನಕ್ಕೆ ವೇಗ ದೊರೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.…