ಮಂಗಳೂರು: ಬೆಳೆಸಾಲದ ಗೊಂದಲ ನಿವಾರಣೆಗೆ ಸರಕಾರ ತಕ್ಷಣವೇ ಕ್ರಮ ಕೈಗೊಳ್ಳಲಿದ್ದು ಯಾವುದೇ ಆತಂಕ ಬೇಡ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಸಹಕಾರಿ ಭಾರತೀ ನಿಯೋಗಕ್ಕೆ ಭರವಸೆ ನೀಡಿದ್ದಾರೆ.
ಇದೇ ವೇಳೆ ಅಡಿಕೆ ಬೆಳೆಗಾರರು ಆತಂಕ ಪಡಬೇಕಾದ ಅಗತ್ಯವಿಲ್ಲ ಎಲ್ಲಾ ಕೃಷಿಕರ ಪರ ಸರಕಾರ ಇದೆ ಯಾವುದೇ ಸಮಸ್ಯೆಯಾದಾಗ ತಿಳಿಸಲು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನಿಯೋಗಕ್ಕೆ ಭರವಸೆ ನೀಡಿದ್ದಾರೆ.
ಸಹಕಾರಿ ಭಾರತೀ ರಾಜ್ಯಾಧ್ಯಕ್ಷ , ಕ್ಯಾಂಪ್ಕೋ ಅಧ್ಯಕ್ಷ ಎಸ್ ಆರ್ ಸತೀಶ್ಚಂದ್ರ ನೇತೃತ್ವದಲ್ಲಿ ಮಂಗಳವಾರ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಬೆಳೆ ಸಾಲಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಂದಿರುವ ಆದೇಶದ ಪ್ರಕಾರ ಒಂದು ರೇಶನ್ ಕಾರ್ಡ್ ಮೂಲಕ ಒಬ್ಬ ಕೃಷಿಕನಿಗೆ ಮಾತ್ರವೇ ಬೆಳೆಸಾಲ ಸೇರಿದಂತೆ ಇತರ ಗೊಂದಲಗಳು ಇದ್ದವು. ಇದನ್ನು ನಿವಾರಣೆ ಮಾಡಬೇಕು ಎಂದು ಒತ್ತಾಯ ಮಾಡಿದರು. ತಕ್ಷಣವೇ ಸಹಕಾರಿ ಸಚಿವ ಎಸ್ ಟಿ ಸೋಮಶೇಖರ್ ಜೊತೆ ಮಾತುಕತೆ ನಡೆಸಿ ವಾರದೊಳಗೆ ಗೊಂದಲ ನಿವಾರಣೆ ಮಾಡುವಂತೆ ಸೂಚಿಸಿದರು.
ಇದೇ ಸಂದರ್ಭ ಅಡಿಕೆ ಬೆಳೆಗಾರರ ಸ್ಥಿತಿಯ ಬಗ್ಗೆ ಮಾಹಿತಿ ಪಡೆದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ರಾಜ್ಯದ ಎಲ್ಲಾ ಕೃಷಿಕರ ಪರ ಸರಕಾರ ಇದೆ. ಅಡಿಕೆ ಬೆಳೆಗಾರರಿಗೆ ಯಾವುದೇ ತೊಂದರೆಯಾದರೆ ತಕ್ಷಣವೇ ಸರಕಾರದ ಗಮನಕ್ಕೆ ತರಲು ತಿಳಿಸಿದರು.
ಈ ಸಂದರ್ಭ ಪುತ್ತೂರು ಶಾಸಕ ಸಂಜೀವ ಮಠಂದೂರು , ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಮೊದಲಾದವರು ಇದ್ದರು.