ಬೆಳ್ತಂಗಡಿ : ಪಶ್ಚಿಮ ಘಟ್ಟದಿಂದ ಜರಿತ ಉಂಟಾಗಿ ಅನಾಹುತ ಸಂಭವಿಸಿದ್ದು ಇದು ಮುಂದೆಯೂ ಅಪಾಯಕಾರಿಯಾಗಿದೆ. ಈ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ವಿಜ್ಞಾನಿಗಳ ತಂಡವನ್ನು ಅದ್ಯಯನ ನಡೆಸಿ ಮುಂದೆ ಈ ಪ್ರದೇಶದಲ್ಲಿ ವಾಸಿಸುವ ಕುಟುಂಬಗಳಿಗೆ ವಾಸಿಸಲು ಯೋಗ್ಯವೇ ಎಂಬುದನ್ನು ಪರಿಶೀಲಿಸಬೇಕು ಇಲ್ಲವಾದಲ್ಲಿ ಬದಲಿ ವ್ಯವಸ್ಥೆಯನ್ನು ಮಾಡಬೇಕು ಎಂದು ಕೇಂದ್ರದ ಮಾಜಿ ಸಚಿವ ವೀರಪ್ಪ ಮೊಯಿಲಿ ಹೇಳಿದ್ದಾರೆ.
ಅವರು ಶುಕ್ರವಾರ ತಾಲೂಕಿನ ನೆರೆಪೀಡಿತ ಕುಕ್ಕಾವು, ಚಾರ್ಮಾಡಿ ಮುಂತಾದ ಪ್ರದೇಶಗಳಿಗೆ ಭೇಟಿ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದರು. ಪ್ರವಾಹದಿಂದ ರಾಜ್ಯದಲ್ಲಿ ಸುಮಾರು 250 ಮನೆಗಳು ಪೂರ್ತಿ ಹಾನಿಯಾಗಿದ್ದು ಸುಮಾರು 68 ಜನ ಪ್ರಾಣ ಕಳೆದುಕೊಂಡಿದ್ದಾರೆ.ರೈತರಿಗೆ ಅನೇಕ ತೊಂದರೆಯಾಗಿದ್ದು ರಸ್ತೆ ಸಂಪರ್ಕಗಳು ಹಾನಿಯಾಗಿದೆ. ಪ್ರವಾಹ ಪ್ರದೇಶಕ್ಕೆ ಪ್ರಧಾನಿಗಳು ಬರದಿದ್ದರೂ ಈಗಿನ ಪರಿಸ್ಥಿತಿಯ ವರದಿಯನ್ನು ಆಧರಿಸಿ ಪರಿಹಾರ ಘೋಷಣೆ ಮಾಡಬೇಕಿತ್ತು. ಈಗಾಗಲೇ ಕಾಂಗ್ರೇಸ್ ಪಕ್ಷವು ಕೇಂದ್ರ ಹಾಗೂ ರಾಜ್ಯ ಸರಕಾರದ ಪ್ರವಾಹ ಪೀಡಿತರನ್ನು ನಿರ್ಲಕ್ಷ್ಯ ವಹಿಸಿರುವುದನ್ನು ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ ಮಾಡಿದ್ದು ಈ ಬಗ್ಗೆ ತಕ್ಷಣ ಪರಿಹಾರ ನೀಡಬೇಕು ಎಂದು ರಾಜ್ಯಪಾಲರಲ್ಲಿ ಮನವಿಯನ್ನು ಮಾಡಿದೆ ಎಂದರು. 2009ರಲ್ಲಿ ಕಾಂಗ್ರೇಸ್ ಆಡಳಿತವಿರುವಾಗ ಪ್ರವಾಹ ಬಂದಿದ್ದು ಆಗಿನ ಪ್ರಧಾನಿ ಮನಮೋಹನ್ ಸಿಂಗ್‍ರವರು ರಾಜ್ಯಕ್ಕೆ ಭೇಟಿ ನೀಡಿ ತಕ್ಷಣ 1600ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದರು ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ. ವಸಂತ ಬಂಗೇರ, ವಿಧಾನಪರಿಷತ್ ಸದಸ್ಯ, ಕಾಂಗ್ರೇಸ್ ಜಿಲ್ಲಾಧ್ಯಕ್ಷ ಕೆ. ಹರೀಶ್ ಕುಮಾರ್, ಮಾಜಿ ಸಚಿವ ಅಭಯಚಂದ್ರ ಜೈನ್, ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ, ಹರ್ಷ ಮೊಯಿಲಿ, ನಗರ ಬ್ಲಾಕ್ ಅಧ್ಯಕ್ಷ ರಾಜಶೇಖರ ಅಜ್ರಿ, ಜಿ.ಪಂ ಸದಸರಾದ ಶೇಖರ ಕುಕ್ಕೇಡಿ, ನಮಿತಾ, ತಾ.ಪಂ ಸದಸ್ಯ ಪ್ರವೀಣ್ ಗೌಡ, ತಾಲೂಕು ಯೂತ್ ಕಾಂಗ್ರೆಸ್ ಅಧ್ಯಕ್ಷ ಅಭಿನಂದನ್, ಮುಖಂಡರಾದ ಶೈಲೇಶ್ ಕುಮಾರ್, ಕೇಶವ ಬೆಳಾಲು, ಈಶ್ವರ ಭಟ್, ಅಶ್ರಫ್ ನೆರಿಯ, ಹರೀಶ ಗೌಡ ಬಂದಾರು, ಲೋಕೇಶ್ವರೀ ವಿನಯಚಂದ್ರ, ಸುಂದರ ಗೌಡ, ಜೆಸೀಂತಾ ಮೋನಿಸ್, ವಿನ್ಸೆಂಟ್ ಮಡಂತ್ಯಾರು, ಅಬ್ದುಲ್ ರಹಿಮಾನ್ ಪಡ್ಪು, ರಮೇಶ ಪೂಜಾರಿ, ಮೆಹಬೂಬ್ ಬೆಳ್ತಂಗಡಿ, ಪ್ರಭಾಕರ ಓಡಿಲ್ನಾಳ, ಅನೂಪ್ ಪಾಯಸ್,ಮೊದಲಾದವರು ಉಪಸ್ಥಿತರಿದ್ದರು.