ಬೆಳ್ಳಾರೆ: ಅಂಕ ಗಳಿಕೆಯನ್ನು ಮಾತ್ರ ಯೋಚಿಸದೇ ಭವಿಷ್ಯದ ಬಗ್ಗೆಯೂ ವಿದ್ಯಾರ್ಥಿಗಳು ಯೋಚಿಸಿಕೊಂಡು ಓದಿನಲ್ಲಿ ತೊಡಗಿದಾಗ ಯಶಸ್ಸು ಗಳಿಸಲು ಸಾಧ್ಯ. ಉನ್ನತ ಶೈಕ್ಷಣಿಕ ಭವಿಷ್ಯ ರೂಪಿಸಿಕೋಳ್ಳುವುದಕ್ಕೆ ಪರೀಕ್ಷೆಯನ್ನು ಉತ್ತಮ ರೀತಿಯಲ್ಲಿ ಎದುರಿಸುವುದು ಅನಿವಾರ್ಯ. ಇಚ್ಛಾಶಕ್ತಿ ಮತ್ತು ಶ್ರದ್ಧೆಯಿಂದ ಪರೀಕ್ಷೆಯನ್ನು ಸುಲಭವಾಗಿ ಎದುರಿಸಬಹುದು ಎಂದು ಶ್ರೀ ರಾಮಕುಂಕೇಶ್ವರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಸತೀಶ್ ಭಟ್ ಬಿಳಿನೆಲೆ ಹೇಳಿದರು.
ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟ್(ರಿ) ಪುತ್ತೂರು ಇದರ ವತಿಯಿಂದ ಜ್ಞಾನದೀಪ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್ ಮತ್ತು ಇಂಟರ್ಯಾಕ್ಟ್ ಕ್ಲಬ್ ಸಹಭಾಗಿತ್ವದಲ್ಲಿ ಬೆಳ್ಳಾರೆಯ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ನಡೆದ ಪರೀಕ್ಷೆ ಎದುರಿಸುವುದು ಹೇಗೆ? ಎಂಬ ವಿಷಯದ ತರಬೇತು ಕಾರ್ಯಕ್ರಮದಲ್ಲಿ ಅವರು ತರಬೇತಿ ನೀಡಿದರು.
ಅಧ್ಯಯನ ತಂತ್ರಗಳನ್ನು ಬಳಸಿ ಸುಲಭವಾಗಿ ಪರೀಕ್ಷೆಗೆ ಸಿದ್ಧತೆ ನಡೆಸುವ ಹಾಗೂ ಉತ್ತಮ ಅಂಕ ಗಳಿಸುವ ವಿಧಾನಗಳನ್ನು ಸತೀಶ್ ಭಟ್ ಬಿಳಿನೆಲೆ ವಿದ್ಯಾರ್ಥಿಗಳಿಗೆ ತಿಳಿಸಿದರು. ಬೆಳ್ಳಾರೆ ಟೌನ್ ರೋಟರಿ ಕ್ಲಬ್ ಪೂರ್ವಾಧ್ಯಕ್ಷ ನವೀನ್ ಕುಮಾರ್ ರೈ ತಂಬಿನಮಕ್ಕಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟ್‍ನ ಟ್ರಸ್ಟಿ ದಿನಕರ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಜ್ಞಾನದೀಪ ಸಂಸ್ಥೆಯ ನಿರ್ದೇಶಕ ಉಮೇಶ್ ಮಣಿಕ್ಕಾರ, ಜ್ಞಾನದೀಪ ಇಂಟರ್ಯಾಕ್ಟ್ ಕ್ಲಬ್ ಅಧ್ಯಕ್ಷೆ ಯಶ್ಮಿತಾ ಉಪಸ್ಥಿತರಿದ್ದರು. ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟ್‍ನ ಸಾರ್ವಜನಿಕ ಸಂಪರ್ಕ ಅಧಿಕಾರಿ ಬಿಪಿನ್‍ಚಂದ್ರ ಸ್ವಾಗತಿಸಿದರು. ಶ್ರೀ ಸರಸ್ವತಿ ಸೌಹಾರ್ದ ಸಹಕಾರಿಯ ಬೆಳ್ಳಾರೆ ಶಾಖೆಯ ವ್ಯವಸ್ಥಾಪಕ ಶಿವಪ್ರಸಾದ್ ಪೆರುವಾಜೆ ವಂದಿಸಿದರು. ಉಪನ್ಯಾಸಕ ಗಣೇಶ್ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು.