ಬೆಳ್ಳಾರೆ: ಗ್ರಾಮಕ್ಕೆ ಮೂಲ ಸೌಕರ್ಯಗಳನ್ನು ಒದಗಿಸುವ ಬೆಳ್ಳಾರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿಯೇ ಎಲ್ಲಾ ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ.
ಗ್ರಾಮಾಭಿವೃದ್ದಿ ಪರಿಕಲ್ಪನೆಯಲ್ಲಿ ಪ್ರತಿ ಮನೆಗೂ ಶೌಚಾಲಯ, ನೀರು, ವಿದ್ಯುತ್ ಸಿಗಲೇಬೇಕು. ಆದರೆ ಬೆಳ್ಳಾರೆ ಪೇಟೆಯಿಂದ ದೂರದಲ್ಲಿರುವ ಬಂಗ್ಲೆಗುಡ್ಡೆಯಲ್ಲಿರುವ ಬ್ರಿಟಿಷರ ಕಾಲದ ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿಯಲ್ಲಿ ಶೌಚಾಲಯ, ನೀರು, ವಿದ್ಯುತ್ ಇಲ್ಲದೆ ಇದ್ದು, ಶಿಥಿಲಗೊಂಡಿರುವ ಕಾರಣ ಇಂದೋ ನಾಳೆಯೋ ಕುಸಿದು ಬೀಳುವ ಸ್ಥಿತಿಯಲ್ಲಿದೆ. ಈ ಕಚೇರಿಯನ್ನು ಬೆಳ್ಳಾರೆ-ಸುಳ್ಯ ರಸ್ತೆಯ ಪಶು ಚಿಕಿತ್ಸಾಲಯದ ಬಳಿ ಇರುವ ಪಂಚಾಯತ್ ಉದ್ಯೋಗಿಗಳ ವಾಸಸ್ಥಳದ ಕಟ್ಟಡಕ್ಕೆ ಸ್ಥಳಾಂತರಿಸಲು ಲೋಕಸಭಾ ಚುನಾವಣೆಗೂ ಮುನ್ನ ಕಟ್ಟಡಕ್ಕೆ ಸುಣ್ಣ-ಬಣ್ಣ ಬಳಿಯಲಾಗಿದೆ. ಆದರೆ ಇದುವರೆಗೂ ಸ್ಥಳಾಂತರದ ಪ್ರಕ್ರಿಯೆ ನಡೆದಿಲ್ಲ. ಮಳೆಗಾಲದಲ್ಲಿ ಲೆಕ್ಕಾಧಿಕಾರಿಗಳ ಈ ಕಚೇರಿ ಸೋರುತ್ತಿದ್ದು, ನೀರು ಬಿದ್ದರೆ ಎಲ್ಲಾ ದಾಖಲೆಗಳಿಗೆ ಹಾನಿಯಾಗುವ ಅಪಾಯವಿದೆ.
ಕಚೇರಿಗೆ ನೀರಿಲ್ಲ, ಶೌಚಾಲಯವಿಲ್ಲ ವಿದ್ಯುತ್ ಇಲ್ಲ:
ಸ್ವಚ್ಛ ಗ್ರಾಮದ ಅನ್ವಯ ಪ್ರತಿ ಮನೆಗೂ ಶೌಚಾಲಯ ಖಡ್ಡಾಯವಾಗಿದೆ. ಆದರೆ ಬಂಗ್ಲಗುಡ್ಡೆಯಲ್ಲಿರುವ ಗ್ರಾಮ ಲೆಕ್ಕಾಧಿಕಾರಿ ಕಚೇರಿಯಲ್ಲಿ ಮಹಿಳಾ ಗ್ರಾಮ ಲೆಕ್ಕಾಧಿಕಾರಿಯೊಬ್ಬರು ಕರ್ತವ್ಯ ನಿರ್ವಹಿಸುತ್ತಿದ್ದರೂ ಇಲ್ಲಿ ಶೌಚಾಲಯದ ವ್ಯವಸ್ಥೆಯಿಲ್ಲ. ಕುಡಿಯುವ ನೀರು ಬೇಕಾದರೆ ಅಧಿಕಾರಿಗೆ ಬೇಕರಿಯಲ್ಲಿರುವ ನೀರೆ ಗತಿಯಾಗಿದೆ.
ಪೇಟೆಯಿಂದ ಬಲು ದೂರವಿರುವ ಕಚೇರಿ
ಗ್ರಾಮ ಲೆಕ್ಕಾಧಿಕಾರಿ ಕಚೇರಿಗೆ ತೆರಳಬೇಕಾದರೆ ಬೆಳ್ಳಾರೆ ಪ್ರಾಥಮಿಕ ಶಾಲೆಯ ಹಿಂಭಾಗದಿಂದ ಸುತ್ತು ಬಳಸಿ ಬರಬೇಕು. ಇದು ಬೆಳ್ಳಾರೆ ಬಸ್ ನಿಲ್ದಾಣದಿಂದ 1.ಕಿ.ಮಿ ದೂರದಲ್ಲಿದೆ. ಹಿಂದೆ ಇಲ್ಲಿನ ಪದವಿಪುರ್ವ ಕಾಲೇಜಿನ ಆಟದ ಮೈದಾನದಿಂದ ನೇರವಾಗಿ ಸಂಪರ್ಕಕ್ಕೆ ದಾರಿಯಿತ್ತು. ಆದರೆ ಇಗ ಅದನ್ನು ಮುಚ್ಚಲಾಗಿದೆ.
ಅಂಗವಿಕಲರಿಗೆ ತೊಂದರೆ
ಸರ್ಕಾರದ ಸವಲತ್ತುಗಳನ್ನು ಪಡೆದುಕೊಳ್ಳಲು ಇಲ್ಲಿನ ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿಗೆ ಬರಲೇಬೇಕು. ಆದರೆ ಕಚೇರಿಗೆ ಬರುವ ಮುನ್ನ ಮಣ್ನಿನ ರಸ್ತೆ ಮಳೆಗಾಲದಲ್ಲಿ ಸಂಚಾರಕ್ಕೆ ಯೋಗ್ಯವಿರುವುದಿಲ್ಲ. ಇದರಿಂದಾಗಿ ಅಂಗವಿಕಲರು ಕಚೇರಿಯೆಡೆಗೆ ಬರಲು ಹಿಂಜರಿಯುತ್ತಿದ್ದಾರೆ.
ಸೋರುತ್ತಿರುವ ಕಟ್ಟಡದಿಂದ ಸ್ಥಳಾಂತರಕ್ಕೆ ಆಗ್ರಹ
ಗ್ರಾಮ ಲೆಕ್ಕಾಧಿಕಾರಿಗಳ ಕಟ್ಟಡ ಶಿಥಿಲವಾಗಿ ಸೋರುತ್ತಿದೆ. ಕಚೇರಿಯ ಹಿಂಬದಿ ಛಾವಣಿ ಭಾಗರ್ಶ ಕುಸಿದಿದ್ದು ಗಾಳಿ ಮಳೆಯಿಂದ ಕಟ್ಟಡಕ್ಕೆ ಹಾನಿಯಾಘುವ ದೊಡ್ಡ ಅಪಾಯವಿದೆ. ಬಾವಲಿಗಳು ರಾತ್ರಿ ಕಚೇರಿಯೊಳಗೆ ಠಿಕಾಣಿ ಹುಡುವುದರಿಂದ ಸ್ವಚ್ಛತೆಯೇ ಬಹು ದೊಡ್ಡ ಸವಾಲಾಗಿದೆ. ಸ್ಥಳಿಯರು ಕಟ್ಟಡದ ಸ್ಥಳಾಂತರಕ್ಕೆ ಪಡೆ ಪದೆ ಆಗ್ರಹಿಸುತ್ತಲೆ ಇದ್ದಾರೆ. ಉದ್ಯೋಗಿಗಳ ವಾಸ ಸ್ಥಳದ ಕಟ್ಟಡವನ್ನು ದುರಸ್ಥಿಗೊಳಿಸುವ ಕಾರ್ಯಕ್ಕೆ ಬೆಳ್ಳಾರೆ ಗ್ರಾಮ ಪಂಚಾಯತ್ ಮುಂದಾಗಿದೆ. ಶೀಘ್ರದಲ್ಲಿ ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿ ಸ್ಥಳಾಂತರಗೊಂಡಲ್ಲಿ ಬೆಳ್ಳಾರೆ ಜನತೆಗೆ ಅನುಕೂಲವಾಗುತ್ತದೆ.
ಈ ಬಗ್ಗೆ ತಹಶೀಲ್ದಾರ್ ಹೀಗೆ ಹೇಳುತ್ತಾರೆ,
ಸ್ಥಳಾಂತರಗೊಳ್ಳಲಿರುವ ಪಂಚಾಯತ್ ಉದ್ಯೋಗಿಗಳ ವಾಸ ಸ್ಥಳದ ಕಟ್ಟಡವನ್ನು ತ್ವರಿತವಾಗಿ ದುರಸ್ಥಿಗೊಳಿಸಿ ಅಲ್ಲಿಗೆ ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿಯನ್ನು ಸ್ಥಳಾಂತರಗೊಳಿಸಲು ಸೂಚಿಸಿದ್ದೇನೆ – ಕುಂಞ ಅಹಮ್ಮದ್, ತಹಶೀಲ್ದಾರರು ಸುಳ್ಯ
Advertisement