ಪಾರಂಪರಿಕವಾಗಿ ತಲೆಮಾರಿಂದ ತಲೆಮಾರಿಗೆ ಹರಿದು ಬಂದ ಯಕ್ಷಗಾನದ ಅರ್ಥಗಾರಿಕೆಯು ಕನ್ನಡ ಸಾಹಿತ್ಯಕ್ಕೆ ದೊಡ್ಡ ಅಲಿಖಿತ ಕೊಡುಗೆ ನೀಡಿದೆ. ಡಾ.ಶೇಣಿ ಗೋಪಾಲಕೃಷ್ಣ ಭಟ್, ಹರಿದಾಸ್ ಮಲ್ಪೆ ಶಂಕರನಾರಾಯಣ ಸಾಮಗ, ಹರಿದಾಸ್ ಮಲ್ಪೆ ರಾಮದಾಸ ಸಾಮಗರು, ಕವಿಭೂಷಣ ವೆಂಕಪ್ಪ ಶೆಟ್ಟರು, ವಿದ್ವಾನ್ ಕಾಂತ ರೈ… ಅಲ್ಲದೆ ಇವರಿಂದಲೂ ಹಿಂದಿನ ಅನೇಕ ಉದ್ಧಾಮರು ಅರ್ಥಗಾರಿಕೆಗೆ ಹೊಸ ಹೊಳಹನ್ನು ನೀಡಿದ್ದಾರೆ. ಆ ಕಾಲಘಟ್ಟದಲ್ಲಿ ಅವರ ಅರ್ಥಗಾರಿಕೆಯನ್ನು ದಾಖಲಿಸುವ ತಂತ್ರಜ್ಞಾನಗಳು ವಿರಳ. ಸಾಮಾನ್ಯವಾಗಿ 2000ರ ಈಚೆಗೆ ಧ್ವನಿಮುದ್ರಿಕೆ, ವೀಡಿಯೋ ತಂತ್ರಜ್ಞಾನಗಳು ಅಭಿವೃದ್ಧಿಯಾದುವು. ಹಾಗಾಗಿ ಹಿರಿಯ ಅರ್ಥದಾರಿಗಳ ಅರ್ಥಗಾರಿಕೆಯ ಸೊಗಸು, ಸೊಬಗು ಮಾತಿಗೆ ಮಾತ್ರ ವಸ್ತುವಾಗಿದೆಯಷ್ಟೇ. ಈ ಹಿನ್ನೆಲೆಯಲ್ಲಿ ಹಿರಿಯರ ಅರ್ಥಗಾರಿಕೆಯ ‘ಝಲಕ್’ ನಿಮಗಾಗಿ ಇಂದಿನಿಂದ…..
ಶೇಣಿ ಗೋಪಾಲಕೃಷ್ಣ ಭಟ್ಟರ ‘ದೂರ್ವಾಸ’ ಮುನಿ.
(ಪ್ರಸಂಗ : ದೂರ್ವಾಸಾತಿಥ್ಯ)
ಸಂದರ್ಭ : ಮುನಿಯು ಕೌರವನ ಅಸ್ಥಾನಕ್ಕೆ ಬಂದಾಗ…..
“..ಮೃಷ್ಟಾನ್ನ ಭೋಜನದಿಂದ ನನ್ನನ್ನು, ನನ್ನ ಪರಿವಾರದವರನ್ನು ತಣಿಸು. ಇನ್ನೂ ಒಂದು ತಾತ್ವಿಕ ಹಿನ್ನೆಲೆಯಿದೆ. ನನ್ನಂತಹವರಿಗೆ ಮೂಡುವ ಹಸಿವೆ ಅಪರೂಪದ್ದು. ಹೇಳಿಕೇಳಿ ರುದ್ರಾಂಶ ಸಂಭೂತ ನಾನು. ಪ್ರತ್ಯಕ್ಷವಾಗಿ ಶಿವನಂತೆ ನಿನ್ನ ಮುಂದೆ ಗುರುಭೂತವಾಗಿ ಬಂದಿರುವಾಗ, ನನ್ನ ಹೊಟ್ಟೆಯ ಹಸಿವು ತಣಿಸಲ್ಪಟ್ಟರೆ, ಬಹುಶಃ ಎಲ್ಲಾ ಭೂತಗಳ ಪ್ರಾತಿನಿಧ್ಯವನ್ನು ವಹಿಸಿದ ಮಾತ್ರವಲ್ಲ, ಸರ್ವಸ್ವದಲ್ಲೂ ಅಖಂಡ ನಾನು ಅಂತ ತಿಳಿದ ನನ್ನ ಚಿತ್ತವೃತ್ತಿಗೆ, ನನ್ನ ಮನೋವೃತ್ತಿಗೆ ಸಂದಾಗ ಅದು ಬಹುಶಃ ಎಲ್ಲರಿಗೂ ಮುಟ್ಟುತ್ತದೆ…
ಈ ಪ್ರಪಂಚದಲ್ಲಿ ಯಾವ ಜೀವಿಯ ಮನಸ್ಸನ್ನು ತುಂಬ ತೃಪ್ತಿಪಡಿಸಲಿಕ್ಕಾಗುವುದಿಲ್ಲ. ಮನಸ್ಸು ‘ಬೇಕು’ ಅಂತ ಹೇಳುತ್ತದೆ. ‘ಬೇಕು’ ಅಂತ ಬಯಸಿದ್ದು ಸಿಕ್ಕಿದರೆ ಮತ್ತಷ್ಟು ಬೇಕು ಅಂತ ಅನ್ನಿಸುತ್ತದೆ. ಈ ಬೇಕುಗಳ ಸರಮಾಲೆಯಿಂದ ಜೀವರನ್ನು ಹೊರಕ್ಕೆ ಎಳೆದು ತಂದು ಅವರ ಪ್ರಾಣಕ್ಕೆ ತುಂಬಿ ತುಂಬಾ ಅನ್ನವನ್ನಿಟ್ಟೆವು ಅಂತಾದರೆ, ಆಗ ವಿರೋಧಿಯಾದರೂ, ‘ಸಾಕು ಸಾಕು’ ಅಂತ ಹೇಳುತ್ತಾನೆ. ಏನು ಕೊಟ್ಟರೂ ಮನುಷ್ಯನ ಬಾಯಿಂದ ‘ಸಾಕು’ ಅಂತ ಹೇಳಿಸುವುದು ಕಷ್ಟ. ಊಟ ಇಕ್ಕಿ ನೋಡು, ‘ಸಾಕು ಸಾಕು’ ಅಂತ ಹೇಳದೆ ಒಬ್ಬನೂ ಇರುವುದಿಲ್ಲ. ಆದರೆ ದುರಾತ್ಮರು ‘ಸಾಕು ಸಾಕು’ ಅನ್ನಿಸುವುದಕ್ಕೆ ದಂಡನೀತಿಯನ್ನೇ ಉಪಯೋಗಿಸುತ್ತಾರೆ. ಅಂತಹ ದಂಡನೀತಿ ಸ್ಥಾಯಿಯಾಗಿ, ಶಾಶ್ವತವಾಗಿ ಯಾರಿಗೂ ಸುಖವನ್ನು ಕೊಡುವುದಿಲ್ಲ. ಉಂಡವನು ಹರಸಬೇಕಾಗಿಲ್ಲ. ಉಂಡವನು ತೇಗಿದರೆ ಅದುವೇ ಆಶೀರ್ವಾದ..”