ಮನಸಿನ ಭಾವನೆಗಳನ್ನು ಹಂಚಿಕೊಳ್ಳುವುದು ಅಗತ್ಯ. ಒಳ್ಳೆಯ ಗೆಳೆಯರಿದ್ದಾಗ ಅವರೊಂದಿಗೆ ಮಾತನಾಡುತ್ತಾ ರಿಲ್ಯಾಕ್ಸ್ ಆಗಿಬಿಡುತ್ತೇವೆ. ಎಲ್ಲರಿಗೆ ಈ ಭಾಗ್ಯವಿರುವುದಿಲ್ಲ. ಮನಸಿನ ಮಾತು ಹಂಚಿಕೊಳ್ಳುವಂತಹ ಮಿತ್ರರು ಸಿಗುವುದೇ ಅದೃಷ್ಟ. ಕರೆದಾಗಲೆಲ್ಲಾ ಮಾತನಾಡಲು ಗೆಳೆಯರು ಸಿಗುವಂತಿದ್ದರೆ ! ಬಿಡಿ ಇದಂತು ಅಪರೂಪವೇ !. ಅಂತಹ ಕ್ಷಣಗಳಲ್ಲಿ ಕೈ ಹಿಡಿಯುವುದು ಬರಹಗಳು.
ಬರಹಗಳು ಮನಸಿನ ಕನ್ನಡಿಯಂತೆ. ಹಲವಾರು ವಿಷಯಗಳು ಮನಸಿಗೆ ಬಂದು ಹೋಗುತ್ತವೆ. ಅವುಗಳೆಲ್ಲಾ ನೆನಪಿನಲ್ಲಿ ಇರುವುದಿಲ್ಲ. ಅದರಲ್ಲೂ ಕೆಲವಂತೂ ಕಾಡೀ ಕಾಡೀ ಕೊನೆಗೆ ಬೇಕೆಂದಾಗ ಬರೆಯ ಹೊರಟರೆ ನೆನಪಿಗೇ ಬಾರದು. ಮಹಿಳೆಯರ ಮನಸಿನಲ್ಲಿ ಹೀಗೆ ಎಷ್ಟೋ ಕಥೆಗಳು ಹುಟ್ಟಿ ಹುಟ್ಟಿ ಸಾಯುತ್ತವೆ ಎಂದು ಖ್ಯಾತ ಲೇಖಕಿ ವೈದೇಹಿಯವರು ತಮ್ಮ ಬರಹವೊಂದರಲ್ಲಿ ಹಂಚಿ ಕೊಂಡಿದ್ದಾರೆ.
ಮಾತಿನಲ್ಲಿ ಹೇಳಲಾಗದಂತಹುದು ಬರಹಗಳಾಗಿ ಹೊರ ಹೊಮ್ಮುತ್ತವೆ. ಅಲ್ಲಿ ಕನಸುಗಳಿರುತ್ತವೆ, ಮನಸಿನ ಒತ್ತಡಗಳಿರುತ್ತವೆ, ನೋವು ಬೇಸರಿಕೆಗಳಿವೆ, ಸಂತಸದ ಕ್ಷಣಗಳಿರುತ್ತವೆ, ಒಟ್ಟಾರೆ ಮನಸಿನ ಮಾತು ಅಕ್ಷರಗಳ ರೂಪ ಪಡೆದು ಪ್ರಕಟ ಗೊಳ್ಳುತ್ತವೆ. ಬರಹಗಳಿಂದ ಒತ್ತಡ ಕಡಿಮೆಯಾಗಿ ಮನಸು ನಿರಾಳವಾಗುತ್ತದೆ. ಕಥೆ ಕವನಗಳು ಯಾವಾಗ ಹುಟ್ಟುತ್ತವೆ ಎಂದು ಗೊತ್ತೇ ಆಗುವುದಿಲ್ಲ. ಪೆನ್ನು, ಪುಸ್ತಕ ಕೈಯಲ್ಲಿ ಹಿಡಿದು ಬರೆಯ ಬೇಕೆಂದು ಹೊರಟರೆ ಒಂದೇ ಒಂದು ಅಕ್ಷರಗಳು ಹೊಳೆಯದು. ಕಾಯಿ ಹೆರೆಯುತ್ತಿರುವಾಗ, ಹಾಲು ಕರೆಯುವಾಗ, ಹಿಟ್ಟು ಬೀಸುವಾಗ, ಬಾಳೆಕಾಯಿ ,ಹಲಸಿನಕಾಯಿ ಕೊರೆ ಯುವಾಗ ಇನ್ನೇನು ನಿದ್ದೆ ಬಂದೇ ಬಿಟ್ಟಿತು ಅನ್ನುವಾಗ, ತಟ್ಟನೆ ಒಳ್ಳೊಳ್ಳೆಯ ವಾಕ್ಯಗಳು ಹುಟ್ಟಿ ಬಿಡುತ್ತವೆ. ಬರೆದಿಡಲಾಗದ ಪರಿಸ್ಥಿತಿ. ಹತ್ತತ್ತು ಬಾರಿ ರಿಹರ್ಸಲ್ ಮಾಡಿದರೂ ಬರೆಯ ಹೊರಟಾಗ ನೆನಪಿಗೆ ಬಾರದೆ ಸತಾಯಿಸಿ ಮತ್ತೇನೋ ಬರೆದು ಸಮಾಧಾನ ಮಾಡಿಕೊಳ್ಳ ಬೇಕಾಗುತ್ತದೆ. ಹೀಗೆ ಎಷ್ಟೋ ಹುಟ್ಟಿ ಹುಟ್ಟಿ ಸಾಯುವ ಕಥೆಗಳಿಗೆ ಲೆಕ್ಕವಿಲ್ಲ.
ಎಂದೋ ಆದ ಘಟನೆಗಳು ನಮ್ಮನ್ನು ಕೊರೆಯುತ್ತಿರುತ್ತದೆ. ಆ ಸಂದರ್ಭದಲ್ಲಿ ಏನೂ ಪ್ರತಿಕ್ರಿಯಿಸ ಲಾಗಿರುವುದಿಲ್ಲ. ಆದರೆ ಒಳಗೇ ಕೆಂಡದಂತೆ ಸುಡುತ್ತಿರುತ್ತದೆ. ಯಾವುದೋ ಒಂದು ರೂಪದಲ್ಲಿ ಹೊರಹಾಕಲು ಕಾಯುತ್ತಿರುತ್ತೇವೆ. ಅದಕ್ಕೆ ಬರಹದ ರೂಪ ಕೊಟ್ಟಾಗ ಮನಸು ನಿರಾಳ. ಕಥೆ, ಕವನ, ಸಾಂದರ್ಭಿಕ ಲೇಖನಗಳು ಹೀಗೆ ಅದು ಯಾವ ರೂಪವಾದರೂ ಸರಿ ಪ್ರಕಟಗೊಳ್ಳುವುದು ಮುಖ್ಯ. ಅಲ್ಲಿ ಕಲ್ಪನೆಯೂ ಸೇರಿ ಒಂದು ಒಳ್ಳೆಯ ಬರಹ ರೂಪುಗೊಳ್ಳುತ್ತದೆ. ಅದು ನಮ್ಮ ಮನಸಿಗೆ ಇಷ್ಟವಾದರೆ ಉಳಿದವರೂ ಮೆಚ್ಚಿ ಒಂದೆರಡು ಮಾತು ಹೇಳಿದರೆ ಸ್ವರ್ಗಕ್ಕೆ ಕಿಚ್ಚು ಹಚ್ಚುವುದೊಂದೇ ಬಾಕಿ.
* ಅಶ್ವಿನಿ ಮೂರ್ತಿ ಅಯ್ಯನಕಟ್ಟೆ