ಒಂದಲ್ಲ, ಎರಡು ತಿಂಗಳು ಅಲ್ಲ. ಇಡೀ ಬೇಸಗೆಯಲ್ಲಿ ಅಡಿಕೆ ತೋಟಕ್ಕೆ ನೀರೇ ಹಾಕದೇ ಇದ್ದರೆ ಏನಾದೀತು ? ಎಲ್ಲರ ಉತ್ತರ ಒಂದೇ ಕರಟಿ ಸಾಯಬಹುದು. ಆದರೆ ನಿಮ್ಮ ವಾದ ತಪ್ಪಾದೀತು. ಇಲ್ಲೊಂದು ಅಡಿಕೆ ತೋಟಕ್ಕೆ ನೀರೇ ಹಾಕುವುದಿಲ್ಲ. ಅದೂ ಗುಡ್ಡದ ತೋಟ…!. ಮಳೆಗಾಲದಲ್ಲಿ ಮಾತ್ರಾ ಅಡಿಕೆ ಮರಕ್ಕೆ ನೀರು ಸಿಗುತ್ತದೆ. ಬೇಸಗೆಯಲ್ಲಿ ಒಂದು ತೊಟ್ಟು ನೀರು ಸಿಗುವುದೇ ಇಲ್ಲ. ಹಾಗಿದ್ದರೂ ಈ ತೋಟ ಹಸಿರಾಗಿದೆ, ಫಸಲೂ ಇದೆ..!.
ಬೇಸಗೆಯ ಈ ಕಾಲದಲ್ಲಿ ನೀರಿಲ್ಲದೆ ಅನೇಕ ತೋಟಗಳು ಕರಟಿದವು. ಇನ್ನೂ ಅನೇಕ ತೋಟಗಳಲ್ಲಿ ನೀರಿನ ಕೊರತೆಯಾಗಿ ಹಿಂಗಾರ ಕರಟಿತು. ಇನ್ನೂ ಹಲವು ತೋಟಗಳಲ್ಲಿ ನಳ್ಳಿ ಉದುರಿದವು. ಒಂದು ದಿನ ನೀರುಣಿಸುವುದು ಕಷ್ಟವಾದರೂ ತೋಟದ ಹುಲ್ಲು ಬಾಡುತ್ತದೆ, ಅಡಿಕೆ ಮರಕ್ಕೆ, ಗಿಡಕ್ಕೆ ಸಮಸ್ಯೆಯಾಗುತ್ತದೆ. ಅಂತಹದ್ದರಲ್ಲಿ “ ಇಲ್ಲೊಂದು ಗುಡ್ಡದ ತೋಟಕ್ಕೆ ನೀರೇ ಹಾಕುವುದಿಲ್ಲ ” ಎಂಬ ಮಾಹಿತಿ ಬಂದಾಗ ನಂಬುವುದು ಕಷ್ಟ. ಆ ತೋಟಕ್ಕೆ ಹೋದರೂ ಹತ್ತಾರು ಪ್ರಶ್ನೆಗಳು, ಸಂದೇಹ ವ್ಯಕ್ತಪಡಿಸಿ ಅಕ್ಕಪಕ್ಕದ ಮನೆಯವರಲ್ಲೂ ವಿಚಾರಿಸಿದಾಗಲೂ ಬಂದ ಉತ್ತರ ನೀರೇ ಹಾಕುವುದಿಲ್ಲ ಈ ತೋಟಕ್ಕೆ…!. ಹಾಗಿದ್ದರೆ ಏನು ಟ್ರಿಕ್ಸ್ ಇರಬಹುದು ?
ಇದು ಕಡಬ ತಾಲೂಕಿನ ಬಳ್ಪ ಗ್ರಾಮದಲ್ಲಿರುವ ತೋಟ. ಬಳ್ಪ ಪೇಟೆಯಿಂದ ಸುಮಾರು ಅರ್ಧ ಕಿಲೋ ಮೀಟರ್ ದೂರ. ಆಲ್ಕಬೆ ಎಂಬಲ್ಲಿನ ಚಂದ್ರಶೇಖರ ಎಂಬವರು ತೋಟ ಇದು. ಆಲ್ಕಬೆ ಹೊನ್ನಪ್ಪ ಗೌಡ ಎಂಬವರ ಮಗನಾದ ಇವರು ಕೃಷಿಯ ಜೊತೆಗೆ ಸೆಂಟ್ರಿಂಗ್ ಕೆಲಸ ಮಾಡುತ್ತಾರೆ. ಸುಮಾರು 270 ಅಡಿಕೆ ಮರ ಇದೆ ಇವರಿಗೆ. ಕಳೆದ 20 ವರ್ಷಗಳಿಂದ ಇವರ ತಂದೆ ಹೊನ್ನಪ್ಪ ಗೌಡ ಹಾಗೂ ಚಂದ್ರಶೇಖರ ಸೇರಿ ಕೃಷಿ ಮಾಡುತ್ತಿದ್ದಾರೆ. ಇಷ್ಟೂ ವರ್ಷದಿಂದ ಈ ತೋಟಕ್ಕೆ ಬೇಸಗೆಯಲ್ಲಿ ನೀರು ಹಾಕುತ್ತಿಲ್ಲ.
ಸಂಪೂರ್ಣ ಸಾವಯವ ಕೃಷಿ ಇವರದು. ಅಡಿಕೆ ಮರಕ್ಕೆ ಹಟ್ಟಿ ಗೊಬ್ಬರ ಹಾಕುತ್ತಾರೆ. ಅದರ ಜೊತೆಗೆ ಬೂದಿ ಸಾಧ್ಯವಾದಷ್ಟು ಹಾಕುತ್ತಾರೆ. ರಾಸಾಯನಿಕ ಗೊಬ್ಬರನ್ನು ಬಳಕೆ ಮಾಡುತ್ತಿಲ್ಲ. ಆದರೆ ಸುಮಾರು ಫೆಬ್ರವರಿ , ಮಾರ್ಚ್ ಹೊತ್ತಿಗೆ ಪ್ರತೀ ಬಾರಿ ಅಡಿಕೆ ಮರದ ಬುಡಕ್ಕೆ ಸುಮಾರು ಅರ್ಧ ಕೆಜಿಯಷ್ಟು ಉಪ್ಪು ಹಾಕುತ್ತಾರೆ. ಬೇಸಗೆಯಲ್ಲಿ ಅಡಿಕೆ ಮರದ ಬುಡದ ತುಂಬಾ ಸೊಪ್ಪು, ಸೋಗೆ, ಹಟ್ಟಿಗೊಬ್ಬರ ಇಡುತ್ತಾರೆ. ಇದಿಷ್ಟೇ ಇವರ ಕೃಷಿಯ ಗುಟ್ಟು. ಕಳೆದ ವರ್ಷ ಸುಮಾರು 25 ಚೀಲ ಅಡಿಕೆ ಆಗಿದೆ ಎನ್ನುವ ಚಂದ್ರಶೇಖರ್ ಕೃಷಿಯ ಜೊತೆಗೆ ಕಾಳುಮೆಣಸು ಬಳ್ಳಿಯೂ ಇದೆ. ಆದರೆ ನೀರಿನ ಕೊರತೆ ಹಾಗೂ ಉಪ್ಪು ಹಾಕಿದಾಗ ಸಾಯುತ್ತದೆ ಎಂದು ಹೇಳುತ್ತಾರೆ. ಆದರೆ ಕಾಳುಮೆಣಸಿಗೆಂದೇ ಪ್ರತ್ಯೇಕ ವ್ಯವಸ್ಥೆ ಏನೂ ಮಾಡುತ್ತಿಲ್ಲ ಎಂದು ವಿವರಣೆ ನೀಡುತ್ತಾರೆ.
ಆದರೆ ನೀರೇ ಇಲ್ಲದೆ ಹೇಗೆ ಇಲ್ಲಿ ಅಡಿಕೆ ಬೆಳೆಯುತ್ತದೆ ಎಂಬುದರ ಬಗ್ಗೆ ಕೃಷಿಕ ಕೃಷ್ಣಪ್ರಸಾದ್ ಕರ್ಮಜೆ ಹೀಗೆ ಅಭಿಪ್ರಾಯ ಪಡುತ್ತಾರೆ, ಗುಡ್ಡದಲ್ಲಿರುವ ಈ ತೋಟದ ಮಣ್ಣಿನ ತರಗತಿ, ಗುಣಮಟ್ಟವೂ ಕಾರಣ ಇರುವುದು. ಅದರ ಜೊತೆಗೆ ಪ್ರತೀ ವರ್ಷ ಉಪ್ಪು ಸುರಿಯುವುದರಿಂದ ಯಾವುದೇ ಪ್ರಯೋಜನ ಆಗುತ್ತದೆ ಎನ್ನುತ್ತಾರೆ. ಇಲ್ಲಿನ ತೋಟದ ಫಲಸು ಕೂಡಾ ಕಡಿಮೆ ಏನೂ ಆಗಿಲ್ಲ. ಆಸುಪಾಸಿನ ನೀರು ಹಾಕುವ ತೋಟದಷ್ಟೇ ಇದೆ ಎನ್ನುತ್ತಾರೆ ಕೃಷ್ಣಪ್ರಸಾದ್.
ಹೀಗಾಗಿ ಇಂತಹದ್ದೊಂದು ಕೃಷಿ ಪ್ರಯೋಗ ಕಳೆದ ಹಲವು ವರ್ಷಗಳಿಂದ ಯಶಸ್ವಿಯಾಗಿ ಮಾಡಿದ್ದಾರೆ ಚಂದ್ರಶೇಖರ್ ಕುಟುಂಬ. ಇದೊಂದು ಅಧ್ಯಯನಕ್ಕೆ ಹಾಗೂ ಮಾಹಿತಿಯ ವಿಷಯವಾಗುತ್ತದೆ. ನೀರುಣಿಸದೇ ಹಸಿರಾಗಿರುವ ಕಾರಣ ಏನು ?. ಅಲ್ಲೇ ಪಕ್ಕದ ತೋಟ ನೀರುಣಿಸಿದರೂ ಕರಟಿದೆ. ಗುಡ್ಡದ ಕೆಳಭಾಗದ ತೋಟ ಒಣಗಿದೆ. ಹಾಗಿದ್ದರೆ ಇದ್ಯಾಕೆ ಹೀಗೆ ?