ಜಾಲ್ಸೂರು : ಜಾಲ್ಸೂರಿನಲ್ಲಿ ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಿಸಲಾದ ಶುದ್ಧ ನೀರಿನ ಘಟಕಕ್ಕೆ ನೀರಿನ ದಾಹವಿರುವ ಬೇಸಗೆ ಹೊತ್ತಿನಲ್ಲೂ ಉಪಯೋಗಕ್ಕೆ ಇಲ್ಲವಾಗಿದೆ.
ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ ಸನಿಹದಲ್ಲಿರುವ ಈ ಘಟಕ ಕಾರ್ಯಾರಂಭಕ್ಕೆ ಮೀನ ಮೇಷ ಎಣಿಸುತ್ತಿದೆ. ಸ್ಥಳೀಯ ಪರಿಸರದ ಹಾಗೂ ಪ್ರಯಾಣಿಕರ ನೀರಿನ ದಾಹ ನೀಗಿಸಲು ಒಂದಷ್ಟು ನೆರವಾಗಬಹುದಿತ್ತು. ಅದಾಗ್ಯೂ ಘಟಕ ಕಾರ್ಯನಿರ್ವಹಿಸುವಲ್ಲಿ ನಿರ್ಲಕ್ಷ್ಯ ವಹಿಸಲಾಗಿದೆ.
ಜಾಲ್ಸೂರು ಗ್ರಾ.ಪಂ.ವ್ಯಾಪ್ತಿಗೆ ಒಳಪಟ್ಟಿರುವ ಪ್ರದೇಶದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ನೇತೃತ್ವದಲ್ಲಿ ಘಟಕ ನಿರ್ಮಿಸಲಾಗಿದೆ. ಸುಮಾರು 8.5 ಲಕ್ಷ ರೂ. ವೆಚ್ಚದಲ್ಲಿ ಸ್ಥಾಪನೆಗೊಂಡಿರುವ ಈ ಘಟಕ ನೀರು ಒದಗಿಸಲು ಇನ್ನೂ ಶಕ್ತವಾಗಿಲ್ಲ. ಜಾಲ್ಸೂರು ಮತ್ತು ಕನಕಮಜಲು ಎರಡೂ ಗ್ರಾ.ಪಂ.ಗಳ ವ್ಯಾಪ್ತಿ ಪ್ರದೇಶದ ನಿವಾಸಿಗಳಿಗೆ ತುರ್ತು ಸಂದರ್ಭದಲ್ಲಿ ನೀರು ಪಡೆದುಕೊಳ್ಳಲು ಅನುಕೂಲ. ಉಭಯ ಗ್ರಾ.ಪಂ. ವ್ಯಾಪ್ತಿಯ ಕೆಲ ವಾರ್ಡ್‌ಗಳಲ್ಲಿ ನೀರಿನ ಕೊರತೆ ಕಂಡಿದ್ದು, ಇಂತಹ ಸಂದರ್ಭದಲ್ಲಿ ಘಟಕ ಸಹಕಾರಿ ಆಗುತಿತ್ತು. ಆದರೆ ದುರಸ್ತಿ ಬಗ್ಗೆ ಸ್ಥಳೀಯಾಡಳಿತವು ಮನಸ್ಸು ಮಾಡಿಲ್ಲ ಎನ್ನುವುದು ಸಾರ್ವಜನಿಕರ ದೂರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ 2015-16ನೇ ಸಾಲಿನಲ್ಲಿ ಖಾಸಗಿ ಮತ್ತು ಸರಕಾರಿ ಸಹಭಾಗಿತ್ವದಲ್ಲಿ ದಿನದ 24 ತಾಸು ನೀರೊದಗಿಸಲು ಜನಸಂದಣಿ ಸ್ಥಳಗಳಲ್ಲಿ ಘಟಕ ಸ್ಥಾಪಿಸಲು ಉದ್ದೇಶಿಸಿತ್ತು. ಗ್ರಾ.ಪಂ. ಸಹಭಾಗಿತ್ವದಲ್ಲಿ ಸ್ಥಳ ನಿಗದಿಪಡಿಸಿ ಘಟಕ ಸ್ಥಾಪಿಸಬೇಕಿತ್ತು. ಈ ಯಂತ್ರಕ್ಕೆ 1 ರೂ. ನಾಣ್ಯ ಹಾಕಿದರೆ, ಆರರಿಂದ ಎಂಟು ಲೀಟರ್ ತನಕ ಶುದ್ಧ ನೀರು ಒದಗಿಸುವ ಯೋಜನೆ ಇದಾಗಿತ್ತು. ದ.ಕ. ಜಿಲ್ಲೆಯಲ್ಲಿ ಈ ಯೋಜನೆ ಕಾರ್ಯಸಾಧುವಲ್ಲ ಎಂಬ ಅಭಿಪ್ರಾಯ ಆರಂಭದಲ್ಲೇ ವ್ಯಕ್ತವಾಗಿದ್ದರೂ ಕಾಮಗಾರಿ ಅನುಷ್ಠಾನಗೊಂಡಿತ್ತು. ಅದು ಸಮರ್ಪಕ ರೀತಿಯಲ್ಲಿ ಸಾಗದ ಕಾರಣ ಗುತ್ತಿಗೆ ಸಂಸ್ಥೆಗೆ ನೀಡಿದ ಟೆಂಡರ್ ಅನ್ನು ಸರಕಾರ ರದ್ದುಗೊಳಿಸಿತ್ತು. ದ.ಕ.ಜಿ.ಪಂ.ನಲ್ಲಿ ಸದನ ಸಮಿತಿ ರಚಿಸಿ ಪರಿಶೀಲನೆ ಕ್ರಮ ಕೈಗೊಳ್ಳಲಾಗಿತ್ತು