ಮಂಗಳೂರು: ಮಂಗಳೂರಿನ ಕುದ್ರೋಳಿಯ ಶ್ರೀ ಗೋಕರ್ಣನಾಥ ದೇವಸ್ಥಾನದಿಂದ ಆರಂಭಗೊಂಡ ಮಂಗಳೂರು ದಸರಾ ಸಂಪನ್ನಗೊಂಡಿತು.
ಸೆ.29ರಂದು ಪ್ರತಿಷ್ಠಾಪನೆಗೊಂಡು ಪೂಜೆ-ಪುನಸ್ಕಾರ ಸ್ವೀಕರಿಸಿದ ದುರ್ಗೆಯರು ವಿಶೇಷ ಪೂಜೆ ಬಳಿಕ ಅದ್ದೂರಿ ಮೆರವಣಿಗೆ ನಡೆಯಿತು.ಅಲಂಕೃತ ವಾಹನದಲ್ಲಿ ನಾರಾಯಣ ಗುರುಗಳ ಮೂರ್ತಿ, ನವದುರ್ಗೆಯರಾದ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟ, ಕೂಷ್ಮಾಂಡಿನಿ, ಸ್ಕಂದಮಾತಾ, ಕಾತ್ಯಾಯಿನಿ, ಮಹಾಕಾಳಿ, ಮಹಾಗೌರಿ, ಸಿದ್ಧಿದಾತ್ರಿ ಮತ್ತು ಆದಿಶಕ್ತಿಯರೊಂದಿಗೆ ಶಾರದಾ ಮಾತೆಯನ್ನಿರಿಸಿ ಮೆರವಣಿಗೆ ಆರಂಭಿಸಲಾಯಿತು.
ಮಾಜಿ ಸಚಿವರಾದ ರಮಾನಾಥ ರೈ, ಅಭಯಚಂದ್ರ ಜೈನ್, ಮಾಜಿ ಶಾಸಕ ಜೆ.ಆರ್.ಲೋಬೊ, ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಎಚ್.ಎಸ್.ಸಾಯಿರಾಮ್, ಕೋಶಾಧಿಕಾರಿ ಪದ್ಮರಾಜ್ ಆರ್, ಸದಸ್ಯರಾದ ಬಿ.ಕೆ.ತಾರಾನಾಥ್, ರವಿಶಂಕರ ಮಿಜಾರ್, ಅಭಿವೃದ್ಧಿ ಸಮಿತಿ ಸದಸ್ಯ ಜಯ ಸಿ.ಸುವರ್ಣ, ಸದಸ್ಯರಾದ ಹರಿಕೃಷ್ಣ ಬಂಟ್ವಾಳ, ಡಾ.ಬಿ.ಜಿ.ಸುವರ್ಣ ಮತ್ತಿತರರಿದ್ದರು.ನವರಾತ್ರಿ ಮಹೋತ್ಸವ ಸಂದರ್ಭ ಕುದ್ರೋಳಿ ಕ್ಷೇತ್ರಕ್ಕೆ ವಿವಿಧ ರೀತಿಯಲ್ಲಿ ಸೇವೆ ಸಲ್ಲಿಸಿದವರನ್ನು ಆಡಳಿತ ಮಂಡಳಿ ಅಧ್ಯಕ್ಷ ಎಚ್.ಎಸ್.ಸಾಯಿರಾಮ್, ಕೋಶಾಧಿಕಾರಿ ಪದ್ಮರಾಜ್ ಆರ್.ಸನ್ಮಾನಿಸಿದರು.
ಮಂಗಳೂರು ದಸರಾ ಮೆರವಣಿಗೆ ಕುದ್ರೋಳಿ ಕ್ಷೇತ್ರದಿಂದ ಆರಂಭಗೊಂಡು ಮಣ್ಣಗುಡ್ಡ, ಲೇಡಿಹಿಲ್, ಲಾಲ್‌ಭಾಗ್, ಎಂ.ಜಿ.ರಸ್ತೆ, ಕೆ.ಎಸ್.ರಾವ್ ರಸ್ತೆ, ವಿ.ವಿ.ಕಾಲೇಜು ವೃತ್ತದಿಂದ ಬಲಕ್ಕೆ ಜಿ.ಎಚ್.ಎಸ್.ರಸ್ತೆ, ರಥಬೀದಿ, ಅಳಕೆ ಮೂಲಕ ಸುಮಾರು 9 ಕಿ.ಮೀ. ಸಾಗಿ ಮತ್ತೆ ಕುದ್ರೋಳಿ ಕ್ಷೇತ್ರ ತಲಪಿತು.