ಸುಳ್ಯ: ಕಾಸರಗೋಡಿನಿಂದ ಮಂಗಳೂರಿಗೆ ಉದ್ಯೋಗ ಮತ್ತಿತರ ಅಗತ್ಯಕ್ಕಾಗಿ ಪ್ರಯಾಣಕ್ಕೆ ದಿನ ನಿತ್ಯದ ಪಾಸ್ ನೀಡುವುದನ್ನು ಕಾಸರಗೋಡು ಜಿಲ್ಲಾಡಳಿತ ಸ್ಥಗಿತಗೊಳಿಸಿದೆ. ಇದು ದಿನ ನಿತ್ಯದ ಅಗತ್ಯಕ್ಕಾಗಿ ಗಡಿಯ ಮೂಲಕ ಪ್ರಯಾಣಿಸುವವರಿಗೆ ಆತಂಕ ಸೃಷ್ಠಿಸಿದೆ. ಹೊಸ ನಿರ್ಧಾರದ ಹಿನ್ನಲೆಯಲ್ಲಿ ತಲಪಾಡಿ ಗಡಿಯಲ್ಲಿ ನೂರಾರು ಮಂದಿ ಗಡಿ ದಾಟಲಾಗದೆ ಸಿಲುಕಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ದಿನ ನಿತ್ಯದ ಪಾಸ್ ಸ್ಥಗಿತಗೊಳಿಸಲು ಸಚಿವ ಇ.ಚಂದ್ರಶೇಖರನ್ ಅಧ್ಯಕ್ಷತೆಯಲ್ಲಿ ಕಾಸರಗೋಡಿನಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ. ಕಾಸರಗೋಡಿನಿಂದ ಹೋಗಿ ಮಂಗಳೂರಿನಲ್ಲಿ ಉದ್ಯೋಗ ಮಾಡುವವರು ಅಲ್ಲೇ ಉಳಿದು ಉದ್ಯೋಗ ಮಾಡಬೇಕು. ಅದೇ ರೀತಿ ಕಾಸರಗೋಡಿನಲ್ಲಿ ವೃತ್ತಿ ನಿರ್ವಹಿಸುವವರು ದಕ್ಷಿಣ ಕನ್ನಡ ಜಿಲ್ಲೆಯವರು ಕೂಡ ಕಾಸರಗೋಡಿನಲ್ಲಿಯೇ ಉಳಿದುಕೊಳ್ಳಬೇಕಾಗಿದೆ. ಹೀಗೆ ಕನಿಷ್ಟ 28 ದಿನಗಳ ಕಾಲ ಅಲ್ಲಲ್ಲಿಯೇ ಉಳಿದುಕೊಳ್ಳಲು ಸೂಚಿಸಲಾಗಿದೆ. ಅಲ್ಲದೆ ಎಲ್ಲಾ ಗಡಿಯ ಮೂಲಕವೂ ಕೇರಳ ಭೇಟಿಯನ್ನು ನಿಷೇಧಿಸಲಾಗಿದೆ. ಗಡಿ ಪ್ರದೇಶದಲ್ಲಿ ಬ್ಯಾರಿಕೇಡ್ ಅಳವಡಿಸಿ ಚೆಕ್ ಪೋಸ್ಟ್ ಸ್ಥಾಪಿಸಲು ನಿರ್ಧರಿಸಲಾಗಿದೆ. ಕೇರಳದ ಹೊಸ ನಿರ್ಧಾರದಿಂದ ಡೈಲಿ ಪಾಸ್ ಪಡೆದು ದಿನ ನಿತ್ಯ ಪ್ರಯಾಣಿಸುವ ಗಡಿ ಪ್ರದೇಶದ ಜನ ತ್ರಿಶಂಕು ಸ್ವರ್ಗದಲ್ಲಿ ಸಿಲುಕಿದಂತಾಗಿದೆ.
ಕೊರೋನಾಕ್ಕಿಂತ ದೊಡ್ಡ ಆತಂಕವಾದ ಗಡಿ: ಅತ್ಯಂತ ನಿಕಟ ಸಂಪರ್ಕ ಇರುವ ಎರಡು ಜಿಲ್ಲೆಗಳ ಗಡಿಪ್ರದೇಶಗಳ ಗಡಿಯನ್ನು ಕಳೆದ ನಾಲ್ಕು ತಿಂಗಳಿನಿಂದ ಮುಚ್ಚಿರುವುದು ಗಡಿ ಪ್ರದೇಶದ ಜನರ ಬದುಕನ್ನು ದುಸ್ತರವಾಗಿಸಿದೆ. ಕೊರೋನಾ ಆತಂಕದ ಜೊತೆಗೆ ಗಡಿ ಸಮಸ್ಯೆಯೂ ಎರಡೂ ಜಿಲ್ಲೆಗಳ ಜನರಿಗೆ ದೊಡ್ಡ ಆತಂಕ ಮತ್ತು ತಲೆ ನೋವನ್ನು ತಂದಿರಿಸಿದೆ.
ಕಳೆದ ಮಾರ್ಚ್ ನಲ್ಲಿ ಕಾಸರಗೋಡಿನಲ್ಲಿ ಕೊರೋನಾ ಪ್ರಕರಣಗಳು ಅಧಿಕ ಇದೆ ಎಂದು ದಕ್ಷಿಣ ಕನ್ನಡ-ಕಾಸರಗೋಡು ಜಿಲ್ಲೆ ಗಡಿ ರಸ್ತೆಯಲ್ಲಿ ಮಣ್ಣು ಹಾಕಿ ಗಡಿಯನ್ನು ದ.ಕ.ಜಿಲ್ಲಾಡಳಿತ ಮುಚ್ಚಿತ್ತು. ಅದು ಇನ್ನೂ ತೆರೆದುಕೊಂಡಿಲ್ಲ. ಅಂದು ಭಾರೀ ಪ್ರತಿರೋಧ ಒಡ್ಡಿದ್ದ ಕೇರಳಿಗರು ಈಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಪ್ರಕರಣ ಅಧಿಕ ಇದೆ ಎಂದು ಎಂದು ಗಡಿ ನಿಯಂತ್ರಣವನ್ನು ಬಿಗುಗೊಳಿಸಿದೆ. ಗಡಿಯನ್ನು ಮುಚ್ಚಿದಾಗ ಎರಡು ಜಿಲ್ಲೆಯ ರಾಜಕೀಯ ಮುಖಂಡರು, ಜನಪ್ರತಿನಿಧಿಗಳು ಪರಸ್ಪರ ರಾಜಕೀಯ ಆರೋಪ- ಪ್ರತ್ಯಾರೋಪ ನಡೆಸಿದರೇ ಹೊರತು ಪರಸ್ಪರ ಸಹಕಾರ, ಮಾತುಕತೆ ಮೂಲಕ ಸಮಸ್ಯೆ ಪರಿಹರಿಸಿ ಒಟ್ಟಾಗಿ ಕೊರೋನಾವನ್ನು ಪ್ರತಿರೋಧಿಸುವ ಪ್ರಬುದ್ಧತೆಯನ್ನು ತೋರಿಲ್ಲ ಎಂಬ ಕೊರಗು ಗಡಿನಾಡ ಜನತೆಯದ್ದು. ವ್ಯವಹಾರಿಕ, ಶೈಕ್ಷಣಿಕ, ಸಾಮಾಜಿಕ ಎಲ್ಲಾ ರೀತಿಯಲ್ಲಿಯೂ ಅನ್ಯೂನ್ಯತೆಯ ಬದುಕು ಸಾಗಿಸಿದ್ದ ಜನರಿಗೆ ಕೊರೋನಾ ಮತ್ತು ಗಡಿ ಮುಚ್ಚುವಿಕೆ ಬಲು ದೊಡ್ಡ ಆತಂಕ ಮತ್ತು ನೋವನ್ನು ತಂದೊಡ್ಡಿದೆ.