ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದ ಬಾಂಬ್ ಪತ್ತೆ ಪ್ರಕರಣದ ಆರೋಪಿ ಆದಿತ್ಯ ರಾವ್ ಮೈಸೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಮುಗಿಸಿ ನಂತರ ಮತ್ತೊಂದು ಪ್ರತಿಷ್ಠಿತ ಕಾಲೇಜಿನಲ್ಲಿ ಎಂಬಿಎ ಮಾರ್ಕೆಟಿಂಗ್ ಆಂಡ್ ಆಪರೇಷನ್ ಸ್ನಾತಕೋತ್ತರ ಪದವಿ ಪಡೆದವನು. ಇಷ್ಟೆಲ್ಲಾ ಓದಿ ಹಂತ ಹಂತವಾಗಿ ಪ್ರಮೋಶನ್ ಆಗಬೇಕಾದ ಆದಿತ್ಯ ರಾವ್ ಆದದ್ದು ಮಾತ್ರಾ ಡಿಮೋಶನ್. ವೈಟ್ ಕಾಲರ್ ಜಾಬ್ ನಿಂದ ಸಾಮಾನ್ಯ ಕೆಲಸದ ಕಡೆಗೆ ಹೊರಳಿದ್ದು…!.
ಮನೆಯಿಂದ ಉತ್ತಮ ವ್ಯಾಸಾಂಗಕ್ಕೆ ಹೆತ್ತವರು ಸಂಪೂರ್ಣವಾಗಿ ಸಹಕಾರ ನೀಡಿದ್ದರು. ಓದಿ ಚೆನ್ನಾದ ಹುದ್ದೆ ಪಡೆಯಲಿ ಎಂದು ಹೆತ್ತವರು ಕನಸು ಕಂಡಿದ್ದರು. ಆದರೆ ಕೊನೆ ಕೊನೆಗೆ ಮನೆಯವರೊಂದಿಗೆ ಹೆಚ್ಚು ಸಂಪರ್ಕವೂ ಇಲ್ಲದೆ ತನ್ನ ಪಾಡಿಗೆ ಇರುತ್ತಿದ್ದ ಆದಿತ್ಯ ರಾವ್ ಈಗ ಬಾಂಬರ್ ಆಗಿ ಬೆಳಕಿಗೆ ಬಂದಿದ್ದಾನೆ. ವಿವಿದೆಡೆ ಕೆಲಸ ಮಾಡಿದ್ದಾನೆ, ಆದರೆ ಎಲ್ಲೂ ಹೆಚ್ಚು ಕಾಲ ಉಳಿಯಲಿಲ್ಲ. ಕ್ಷುಲ್ಲಕ ಕಾರಣಗಳಿಂದ ಹುದ್ದೆ ತೊರೆದಿದ್ದ. ಎಸಿ ವ್ಯವಸ್ಥೆ ಆರೋಗ್ಯಕ್ಕೆ ಹಾಳು ಎಂದು ಕೆಲಸ ಬಿಟ್ಟರೆ, ಇನ್ನೂ ಕೆಲವು ಕಡೆ ಮೇಲಾಧಿಕಾರಿಗಳ ಮೇಲೆ ಸಿಟ್ಟಿನಿಂದ ಹೊರಬಂದ, ಇನ್ನೂ ಕೆಲವು ಕಡೆ ಒತ್ತಡ ಎಂದು ಹೊರಬಂದ…!
ಆದಿತ್ಯ ರಾವ್ ಪೊಲೀಸರಿಗೆ ನೀಡಿರುವ ಮಾಹಿತಿಯಂತೆ ಆತ ಐಸಿಐಸಿಐ ಪ್ರ್ಯುಡೆನ್ಶಿಯಲ್, ಎಚ್‌ಎಸ್‌ಬಿಸಿ, ಎಚ್‌ಡಿಎಫ್‌ಸಿ ಲೈಫ್ ಸೇರಿದಂತೆ ವಿವಿಧ ಹಣಕಾಸು ಸಂಬಂಧಿ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾನೆ. ನಂತರ ಬ್ಯಾಂಕಿಂಗ್ ಕ್ಷೇತ್ರ ಬಿಟ್ಟು ಮೆಕ್ಯಾನಿಕಲ್ ಇಂಜಿನಿಯರಿಂಗ್ ಆಧಾರದಲ್ಲಿ ಕೆಲಸ ಪಡೆದ. ಈ ಆಧಾರದಲ್ಲಿ ಬೆಂಗಳೂರಿನಲ್ಲಿ ವಿವಿದೆಡೆ ಉತ್ತಮ ಕಂಪನಿಗಳಲ್ಲಿ ಕೆಲಸ ಮಾಡಿದ. ಅಲ್ಲೂ ಕ್ಷೇತ್ರ ಸರಿ ಇಲ್ಲ ಎಂದು ಕೆಲಸ ಬಿಟ್ಟು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸೆಕ್ಯೂರಿಟಿ ಗಾರ್ಡ್ ಕೆಲಸಕ್ಕೆ ಅರ್ಜಿ ಹಾಕಿ. ಆದರೆ ಇಲ್ಲಿ ಕೆಲಸ ದೊರೆಯದ ಬಳಿಕ ಹೋಟೆಲ್ ಕೆಲಸ, ಹೋಟೆಲ್ ಸೆಕ್ಯೂರಿಟಿ ಗಾರ್ಡ್ ಕೆಲಸ ಸೇರಿದಂತೆ ವಿವಿದೆಡೆ ಕೆಲಸ ಮಾಡಿದ.
ಕೊನೆಗೆ ಈ ವ್ಯವಸ್ಥೆಯೇ ಸರಿ ಇಲ್ಲ ಎಂದು ಹೇಳುತ್ತಲೇ ಈಗ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಡುವ ಮೂಲಕ ಬಾಂಬರ್ ಆಗಿದ್ದಾನೆ. ಅತೀ ಹೆಚ್ಚು ಓದಿ ಡಬಲ್ ಗ್ರಾಜುವೇಟ್ ಆಗಿ ಬ್ಯಾಂಕಿಂಗ್ ನಿಂದ ಬಾಂಬರ್ ವರೆಗೆ ಆದಿತ್ಯ ರಾವ್ ಡಿಮೋಶನ್ ಆಗುತ್ತಲೇ ಪೊಲೀಸ್ ಅತಿಥಿಯಾದ…!