ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಚುನಾವಣೆಯ ದಿನಾಂಕವವನ್ನು ರಾಜ್ಯ ಚುನಾವಣಾ ಆಯೋಗ ಘೋಷಿಸಿದೆ. ನವೆಂಬರ್ 12ರಂದು ಪಾಲಿಕೆಯ ವ್ಯಾಪ್ತಿಯ 60 ವಾರ್ಡ್‌ಗಳಿಗೆ ಚುನಾವಣೆ ನಡೆಯಲಿದೆ.
ಪಾಲಿಕೆಯ ಚುನಾವಣೆಗೆ ಸಂಬಂಧಿಸಿದಂತೆ ಅ.24ರಂದು ಅಧಿಸೂಚನೆ ಹೊರಡಿಸಲಿದ್ದಾರೆ. ಅ.31ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ನವೆಂಬರ್ 2ರಂದು ನಾಮಪತ್ರಗಳ ಪರಿಶೀಲನೆ ಕಾರ್ಯ ನಡೆಯಲಿದೆ. ನ.4ರಂದು ಉಮೇದುವಾರಿಕೆಗಳನ್ನು ಹಿಂದೆಗೆದುಕೊಳ್ಳಲು ಕೊನೆಯ ದಿನವಾಗಿದ್ದು, ನ.12ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 5ರವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ.
ಮರು ಮತದಾನ ಇದ್ದಲ್ಲಿ ನ.13ರಂದು ಮತದಾನ ಪ್ರಕ್ರಿಯೆ ನಡೆಸಬಹುದಾಗಿದೆ. ನ.14ರಂದು ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ನಡೆಯಲಿದೆ. ಚುನಾವಣಾ ನೀತಿ ಸಂಹಿತೆಯು ರವಿವಾರದಿಂದಲೇ ಆರಂಭವಾಗಿದ್ದು, ನ.14ರವರೆಗೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಜಾರಿಯಲ್ಲಿರುತ್ತದೆ.
14 ಸ್ಥಳೀಯ ಸಂಸ್ಥೆಗಳ ಚುನಾವಣೆ: ರಾಜ್ಯದ ಎರಡು ಮಹಾನಗರ ಪಾಲಿಕೆ, 6 ನಗರ ಸಭೆ, 3 ಪುರಸಭೆ, 3 ಪಟ್ಟಣ ಪಂಚಾಯತ್ ಸೇರಿ 14 ನಗರ ಸ್ಥಳೀಯ ಸಂಸ್ಥೆಗಳಿಗೆ ನ.12ರಂದು ಚುನಾವಣೆ ಘೋಷಿಸಿದೆ.
ವೆಚ್ಚ ಮಿತಿ: ಮಹಾನಗರ ಪಾಲಿಕೆ ವ್ಯಾಪ್ತಿಗೆ ನಡೆಯುವ ಚುನಾವಣೆಯಲ್ಲಿ ಅಭ್ಯರ್ಥಿಯು ಮೂರು ಲಕ್ಷ ರೂ.ವರೆಗೆ ಗರಿಷ್ಠ ವೆಚ್ಚ ಮಾಡಬಹುದಾಗಿದೆ.
ರಾಜಕೀಯ ಪಕ್ಷಗಳ ಬ್ಯಾನರ್, ಕಟೌಟ್ ತೆರವುಗೊಳಿಸಲು ಸೂಚನೆ: ಮಂಗಳೂರು ಮಹಾನಗರಪಾಲಿಕೆಗೆ ಚುನಾವಣೆ ಘೋಷಣೆಯಾಗಿದ್ದು, ನಗರಪಾಲಿಕೆ ವ್ಯಾಪ್ತಿಯಲ್ಲಿ ನೀತಿ ಸಂಹಿತೆಯು ತಕ್ಷಣದಿಂದಲೇ ಜಾರಿಗೆ ಬಂದಿದೆ. ನಗರದ ಎಲ್ಲಾ ವಾರ್ಡುಗಳಲ್ಲಿ ರಾಜಕೀಯ ಪಕ್ಷಗಳು, ರಾಜಕೀಯ ಮುಖಂಡರ ಚಿತ್ರ ಇರುವ ಹಾಕಿರುವ ಎಲ್ಲಾ ರೀತಿಯ ಕಟೌಟ್, ಫ್ಲೆಕ್ಸ್, ಬ್ಯಾನರ್, ಹೋರ್ಡಿಂಗ್ ಗಳನ್ನು ಸಂಬಂಧಪಟ್ಟವರು ತಕ್ಷಣದಿಂದಲೇ ತೆರವುಗೊಳಿಸಲು ಮಹಾನಗರಪಾಲಿಕೆ ಆಯುಕ್ತರು ಸೂಚಿಸಿದ್ದಾರೆ.