ಮಂಗಳೂರು: ಲೋಕಸಭಾ ಅಧಿವೇಶನದ ಶೂನ್ಯವೇಳೆಯಲ್ಲಿ ದಕ್ಷಿಣ ಕನ್ನಡ ಲೋಕಸಭಾ ಸದಸ್ಯರಾದ ನಳಿನ್ ಕುಮಾರ್ ಕಟೀಲ್ ಇವರು ಮಂಗಳೂರು ವಿಮಾನ ನಿಲ್ದಾಣದ ರನ್-ವೇಯನ್ನು ವಿಸ್ತರಿಸುವ ವಿಚಾರದ ಬಗ್ಗೆ ಪ್ರಸ್ತಾಪಿಸಿದರು.
ಕನ್ನಡದಲ್ಲೇ ಮಾತನಾಡಿದ ನಳಿನ್ ಕುಮಾರ್ ಕಟೀಲು ಮಂಗಳೂರು ವಿಮಾನ ನಿಲ್ದಾಣದಲ್ಲಿ ಭಾನುವಾರ ದುಬೈನಿಂದ ಮಂಗಳೂರಿಗೆ ಆಗಮಿಸಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನವು ತನ್ನ ಲಯವನ್ನು ತಪ್ಪಿ ರನ್-ವೇಯಿಂದ ಹೊರಗಡೆ ಜಾರಿ ಸಂಭವನೀಯ ಭಾರಿ ಅನಾಹುತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದೆ. ವಿಮಾನ ಇನ್ನೂ 20 ಅಡಿ ಮುಂದಕ್ಕೆ ಚಲಿಸಿದ್ದರೆ, ಈ ಹಿಂದೆ 2010ರ ಮೇ 22ರಂದು ದುಬೈನಿಂದ ಮಂಗಳೂರಿಗೆ ಆಗಮಿಸಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನವು ಕಿರಿದಾದ ರನ್- ವೇಯಿಂದಾಗಿ ನಿಯಂತ್ರಣ ಕಳೆದುಕೊಂಡು ಕಂದಕಕ್ಕೆ ಬಿದ್ದು ವಿಮಾನದಲ್ಲಿದ್ದ 158 ಪ್ರಯಾಣಿಕರು ಮೃತಪಟ್ಟಿದ್ದರು. ಇದಲ್ಲದೆ ಇದೇ ರೀತಿ 1981 ಆಗಸ್ಟ್ 19ರಂದು ಇಂಡಿಯನ್ ಏರ್ ಲೈನ್ಸ್ ವಿಮಾನವು ರನ್-ವೇಯಿಂದ ಜಾರಿ ಕಂದಕದ ಸಮೀಪ ನಿಂತಿತ್ತು. ಈ ಎಲ್ಲಾ ದುರ್ಘಟನೆಗಳಿಗೆ ಮಂಗಳೂರು ವಿಮಾನ ನಿಲ್ದಾಣದ ಕಿರಿದಾದ ರನ್ ವೇ ಕಾರಣವಾಗಿರುತ್ತದೆ. ಈ ಕೂಡಲೇ ಕೇಂದ್ರ ಸರಕಾರವು ಮಂಗಳೂರು ವಿಮಾನ ನಿಲ್ದಾಣದ ರನ್-ವೇ ವಿಸ್ತರಣೆ ಹಾಗೂ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಯ ಕುರಿತು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮವನ್ನು ತೆಗೆದುಕೊಳ್ಳುವಂತೆ ಹಾಗೂ ಈ ಘಟನೆಯ ಕುರಿತು ಸಮಗ್ರ ತನಿಖೆಯನ್ನು ಕೈಗೊಳ್ಳುವಂತೆ ಕೇಂದ್ರ ಸರಕಾರವನ್ನು ಸಂಸದರು ಆಗ್ರಹಿಸಿದರು.