ಸುಳ್ಯ: ದೈವವೇ ಬಂದು ಜಗಳ ಬಿಡಿಸಿ ಸೌಹಾರ್ದತೆಯಿಂದ ಬಾಳಿ ಎಂಬ ಗತ ಕಾಲದ ದೈವ ಸಂದೇಶವನ್ನು ಇಂದಿಗೂ ಜನ ಮಾನಸಕ್ಕೆ ಮುಟ್ಟಿಸುವ ವಿಶಿಷ್ಟ ಆಚರಣೆ ಅಡ್ಡಣಪೆಟ್ಟು ಸುಳ್ಯ ತಾಲೂಕಿನ ಮಂಡೆಕೋಲಿನಲ್ಲಿ ಪ್ರತಿ ವರ್ಷವೂ ನಡೆಯುತಿದೆ.
ಮಂಡೆಕೋಲು ಗ್ರಾಮದ ಶ್ರೀ ಮಹಾ ವಿಷ್ಣುಮೂರ್ತಿ ದೇವಸ್ಥಾನದ ಜಾತ್ರೋತ್ಸವದ ಅಂಗವಾಗಿ ನಡೆಯುವ ಉಳ್ಳಾಕುಲು ಹಾಗೂ ಪರಿವಾರ ದೈವದ ನೇಮದ ಸಂದರ್ಭದ ನಡೆಯುವ ವಿಶಿಷ್ಟವಾದ ಅಡ್ಡಣ ಪೆಟ್ಟು ಎಂಬ `ಹೊಡೆದಾಟ’ದ ಸಂಪ್ರದಾಯ ಜಾತ್ರೋತ್ಸವದ ಪ್ರಮುಖ ಆಕರ್ಷಣೆ.
ಶ್ರೀ ವಿಷ್ಣುಮೂರ್ತಿ ದೇವರ ಬಲಿ, ಬಟ್ಟಲು ಕಾಣಿಕೆ ನಡೆದ ಮರುದಿನ ಉಳ್ಳಾಕುಲು ಹಾಗೂ ಪರಿವಾರ ದೈವದ ನೇಮ ನಡೆಯುವುದು ಸಂಪ್ರದಾಯ. ಶುಕ್ರವಾರ ನಡೆದ ನೇಮದಲ್ಲಿ ಬೆಳಿಗ್ಗೆ ನಾಲ್ಕೂರಿನ ಪ್ರತಿನಿಧಿಗಳ ನಡುವೆ ತುಳುನಾಡಿನ ಅತ್ಯಂತ ಅಪರೂಪದ `ಅಡ್ಡಣ ಪೆಟ್ಟು’ ಆಚರಣೆ ನಡೆಯಿತು. ಹಳೆ ಸಂಪ್ರದಾಯವನ್ನು ಪ್ರತಿನಿಧಿಸಿ ಸಾಂಕೇತಿಕವಾಗಿ ನಡೆಯುವ ಈ ಹೊಡೆದಾಟವನ್ನು ನೋಡಲು ನಾಡಿನ ವಿವಿಧೆಡೆಯಿಂದ ಭಕ್ತರು ಆಗಮಿಸಿದ್ದರು. ದೇವಸ್ಥಾನಕ್ಕೆ ಸಂಬಂಧಪಟ್ಟ ಕೇನಾಜೆ- ಮಾವಜಿ, ಮುರೂರು- ಬೊಳುಗಲ್ಲು ಎಂಬ ನಾಲ್ಕು ಗೌಡ ಮನೆತನಗಳು ಇಲ್ಲಿವೆ. ಉಳ್ಳಾಕುಲು ನೇಮದ ಸಂದರ್ಭ ಇದೇ ನಾಲ್ಕು ಮನೆತನದ ಪ್ರತಿನಿಧಿಗಳು ಬೆತ್ತದಿಂದ ತಯಾರಿಸಿದ ಗುರಾಣಿಯ ಮಾದರಿಯ ಅಡ್ಡಣವನ್ನು ಹಿಡಿದು ದಂಡದಿಂದ ಪರಸ್ಪರ ಹೊಡೆದಾಡಿಕೊಳ್ಳುತ್ತಾರೆ. ಉಳ್ಳಾಕುಲು ದೈವ ಬಂದು ಹೊಡೆದಾಟವನ್ನು ಬಿಡಿಸುತ್ತದೆ.
ಅಡ್ಡಣ ಪೆಟ್ಟಿನ ಇತಿಹಾಸ:
ಮಂಡೆಕೋಲು ನೇಮದಲ್ಲಿ ಅಡ್ಡಣ ಪೆಟ್ಟು ಸಂಪ್ರದಾಯಕ್ಕೆ ಬೇರೆ ಬೇರೆ ಐಹಿತ್ಯವಿದೆ. ಅಡ್ಡಣಪೆಟ್ಟು ನಡೆದರೆ ಊರಲ್ಲಿ ಮುಂದೆ ಗಲಾಟೆ, ಹೊಡೆದಾಟಗಳು ಸಂಭವಿಸುವುದಿಲ್ಲ ಎಂಬ ನಂಬಿಕೆಯೂ ಊರಿನ ಭಕ್ತ ಜನರಲ್ಲಿದೆ. ನಾಲ್ಕೂರಿನ ಜಗಳವನ್ನು ದೈವ ಬಿಡಿಸುವುದು, ಗಲಾಟೆ ಮಾಡದೆ ಸೌಹಾರ್ದದಿಂದ ಬಾಳಿ ಎನ್ನುವ ಸಂದೇಶವೂ ಈ ಆಚರಣೆಯಲ್ಲಿದೆ. ಪುರಾತನ ಕಾಲದಲ್ಲಿ ಯಾವುದೋ ಗಲಾಟೆ ನಡೆದ ಸಂದರ್ಭ ಉಳ್ಳಾಕುಲು ದೈವ ಬಂದು ಗಲಾಟೆ ಬಿಡಿಸಿ ಪರಸ್ಪರ ಸಂದಾನ ನಡೆಸಿತ್ತು ಎಂಬ ಪ್ರತೀತಿಯೂ ಇದೆ. ಇದೇ ಕಾರಣದಿಂದ ಪ್ರತಿ ವರ್ಷ ಉಳ್ಳಾಕುಲು ನೇಮದ ಸಂದರ್ಭ “ಅಡ್ಡಣ ಪೆಟ್ಟು” ಒಂದು ಸಂಪ್ರದಾಯವಾಗಿ ನಡೆದು ಬರುತ್ತಿದೆ.
ಆಚರಣೆ ಹೇಗೆ ?:
ನೇಮೋತ್ಸವ ದಿನದಂದು ಉಳ್ಳಾಕುಲು ದೈವದ ಭಂಡಾರ ತೆಗೆದ ಬಳಿಕ ದೈವ ಸಹಿತ ನಾಲ್ಕೂರಿನ ಪ್ರತಿನಿಧಿಗಳು, ದೈವರ ಪರಿಚಾರಕರು ದೇವಸ್ಥಾನದ ಸಮೀಪದ ಗದ್ದೆಯಲ್ಲಿರುವ ಕಟ್ಟೆಗೆ ತೆರಳುತ್ತಾರೆ. ಕೇನಾಜೆ- ಮಾವಜಿ, ಮುರೂರು-ಬೊಳುಗಲ್ಲು ಮನೆತನಕ್ಕೆ ಸೇರಿದ ನಾಲ್ವರು ಪ್ರತಿನಿಧಿಗಳು ಸಮವಸ್ತ್ರ ಧರಿಸಿ ದಂಡ ಮತ್ತು ಗುರಾಣಿ (ಅಡ್ಡಣ) ಹಿಡಿದು ದೈವದ ಜತೆಯಲ್ಲಿ ತೆರಳುತ್ತಾರೆ. ಕಟ್ಟೆಯ ಬಳಿ ತೆರಳಿದ ಬಳಿಕ ಕೆಲವೊಂದು ಸಂಪ್ರದಾಯ ಆಚರಣೆಗಳು ನಡೆದು ಅಡ್ಡಣ ಹಿಡಿದ ಯುವಕರು ಅಡ್ಡಣವನ್ನು ನೆಲದಲ್ಲಿ ಎದುರು ಬದುರಾಗಿ ಇಡುತ್ತಾರೆ. ಲಾಠಿ ಮಾದರಿಯ ಹೊಡೆಯುವ ದಂಡವನ್ನು ಕೈಯಲ್ಲಿ ಹಿಡಿದಿರುತ್ತಾರೆ. ಇತ್ತ ಅಡ್ಡಣ ಹೊಡೆತದಲ್ಲಿ ಭಾಗವಹಿಸುವ ನಾಲ್ವರು ಯುವಕರಿಗೆ ಬೆನ್ನು ಹಾಕಿ ನಿಂತಿರುವ ಉಳ್ಳಾಕುಲು ದೈವಕ್ಕೆ ಅಣಿಯನ್ನು ಕೂರಿಸಲಾಗುತ್ತದೆ. ಅಣಿ ಇಟ್ಟ ಬಳಿಕ ತುಳು ನುಡಿಗಟ್ಟೊಂದನ್ನು ಹೇಳಲಾಗುತ್ತದೆ. ಈ ನುಡಿಗಟ್ಟು ಮುಗಿಯುತ್ತಿದ್ದಂತೆ ದೈವದ ಪರಿಚಾರಕರೊಬ್ಬರು ಅಡ್ಡಣ ಹೊಡೆತಕ್ಕೆ ಅಣಿಯಾಗಿ ನಿಂತಿರುವ ಯುವಕರತ್ತ ಕಲಶದ ನೀರಿನಿಂದ ಪ್ರೋಕ್ಷಣೆ ಮಾಡುತ್ತಾರೆ. ಕಲಶ ಪ್ರೋಕ್ಷಣೆ ಆಗುತ್ತಿದ್ದಂತೆ ಎದುರು ಬದುರಾಗಿ ನಿಂತಿರುವ ಯುವಕರು ನೆಲದಲ್ಲಿಟ್ಟ ಅಡ್ಡಣವನ್ನು ಕೈಗೆ ಎತ್ತಿಕೊಂಡು ಅದನ್ನು ಗುರಾಣಿಯಂತೆ ಹಿಡಿದು ಎದುರುಬದುರಾಗಿ ಹೊಡೆದಾಟ ಆರಂಭಿಸುತ್ತಾರೆ. ಪ್ರತಿಯೊಬ್ಬರೂ ಎದುರು ಪ್ರತಿನಿಧಿಯ ಕೈಯಲ್ಲಿ ಹಿಡಿದಿರುವ ಅಡ್ಡಣಕ್ಕೆ ಹೊಡೆಯಬೇಕೆಂಬ ನಿಯಮವೂ ಇದೆ. ಹೊಡೆದಾಟ ಜೋರಾಗುತ್ತಿದ್ದಂತೆ ಬೆನ್ನು ಹಾಕಿ ನಿಂತಿರುವ ಉಳ್ಳಾಕುಲು ದೈವ ಬಂದು ಹೊಡೆದಾಟವನ್ನು ಬಿಡಿಸುತ್ತದೆ.
ಉಳ್ಳಾಕುಲು ದೈವ ಹೊಡೆದಾಟದ ನಡುವೆ ಬಂದು ಸುತ್ತು ಹಾಕಿ ಹೊಡೆದಾಟ ನಡೆಸದಂತೆ ಸಂದಾನ ನಡೆಸುತ್ತದೆ. ಸಂಧಾನ ನಡೆದ ಅನಂತರ ಅಡ್ಡಣ ಹೊಡೆತ ಪ್ರಕ್ರಿಯೆ ಮುಗಿಯುತ್ತದೆ. ಅಲ್ಲಿಂದ ಮತ್ತೆ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಎದುರಿಗೆ ಬಂದು ನೇಮದ ಉಳಿದ ಸಂಪ್ರದಾಯಗಳು ಮುಂದುವರಿಯಿತು.
22.12.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು, ದಕ್ಷಿಣ…
ಒಡಿಶಾ ರಾಜ್ಯ ಸರ್ಕಾರವು ಕೃಷಿಯಲ್ಲಿ ಹೊಸವಿಧಾನಗಳ, ಪರ್ಯಾಯ ಕೃಷಿಯ ಪಾತ್ರವನ್ನು ಪರೋಕ್ಷವಾಗಿ ಕೃಷಿಕರಿಗೆ…
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್…
ಗದಗ ಜಿಲ್ಲೆಯ ಹುಲಕೋಟಿ ಗ್ರಾಮದ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಮಾಡಲಗೇರಿ ಗ್ರಾಮದಲ್ಲಿ…
ಹವಾಮಾನದ ಕಾರಣದಿಂದ ಕೃಷಿ ಹಾನಿ ಉಂಟಾಗಿ ನಷ್ಟವಾದ ಸಂದರ್ಭದಲ್ಲಿ ಅಥವಾ ಬೆಲೆ ಕುಸಿತದಂತಹ…
ಚಳಿಗಾಲ ಆರಂಭವಾಗಿದೆ, ಬಿಸಿಲು ಹೆಚ್ಚಾಗುತ್ತಿದ್ದಂತೆಯೇ ಮಲೆನಾಡು ಭಾಗದಲ್ಲಿ ಮಂಗನಕಾಯಿಲೆ ಹರಡುವ ಸಾಧ್ಯತೆ ಇದೆ.…