ಸುಳ್ಯ: ಸುಳ್ಯ ತಾಲೂಕಿನ ಮಡಪ್ಪಾಡಿಯವರನ್ನು ಕರೆ ಮಾಡಿದರೆ ಸಿಗುವುದು ‘ನೀವು ಕರೆ ಮಾಡಿರುವ ಚಂದಾದಾರರು ವ್ಯಾಪ್ತಿ ಪ್ರದೇಶದಿಂದ ಹೊರಗಿದ್ದಾರೆ’ ಎಂಬ ಉತ್ತರ.
ಮಡಪ್ಪಾಡಿಯ ಜನರಲ್ಲಿ ಯಾರಲ್ಲಿ ಕೇಳಿದರೂ ಅವರು ಮುಂದಿರಿಸುವ ಮೊದಲ ಸಮಸ್ಯೆ ಎಂದರೆ ಮೊಬೈಲ್ ನೆಟ್‍ವರ್ಕ್ ಸಮಸ್ಯೆ. ಗ್ರಾಮದ ಬಹುತೇಕ ಪ್ರದೇಶಗಳು ಯಾವಾಗಲೂ ನಾಟ್ ರೀಚೇಬಲ್ ಆಗಿಯೇ ಇರುತ್ತಾರೆ. ದೂರವಾಣಿ, ನೆಟ್‍ವರ್ಕ್, ಇಂಟರ್‍ನೆಟ್ ಸಮಸ್ಯೆ ಜನರನ್ನು ಕಾಡುತ್ತಲೇ ಇರುತ್ತದೆ. ಬಿಎಸ್‍ಎನ್‍ಎಲ್ ಟವರ್ ಇದ್ದರೂ, ವಿದ್ಯುತ್ ಕೈ-ಕೊಟ್ಟರೆ ಅದು ಸ್ಥಬ್ಧವಾಗುತ್ತದೆ. ಹೀಗಾಗಿ ದೂರವಾಣಿ ಜತೆಗೆ ಇಂಟರ್‍ನೆಟ್ ಸೌಲಭ್ಯಕ್ಕೆ ಇಲ್ಲಿ ನಿತ್ಯವೂ ಪರದಾಟ. ಇದರಿಂದ ಗ್ರಾಮ ಪಂಚಾಯತ್ ಕಚೇರಿ, ಪಡಿತರ ಅಂಗಡಿ, ಶಾಲೆಗಳಲ್ಲಿ ಇಂಟರ್‍ನೆಟ್ ಸಿಗದೆ ಜನರಿಗೆ ಅಗತ್ಯ ಕೆಲಸಗಳು ಆಗುತ್ತಿಲ್ಲ. ಅಲ್ಲದೆ ಗ್ರಾಮದಿಂದ ಹೊರಗಿರುವ ಜನರಿಗೆ ಅಗತ್ಯ ಸಂದರ್ಭ ಮನೆ ಮಂದಿಯನ್ನು ಸಂಪರ್ಕಿಸಲು ನೆಟ್‍ವರ್ಕ್ ಅಡ್ಡಿ ಆಗುತ್ತಿದೆ. ಈ ಹಿಂದೆ ಗ್ರಾಮದಲ್ಲಿ ಇದ್ದ ಸ್ಥಿರ ದೂರವಾಣಿ ಸೌಲಭ್ಯವೂ ಈಗ ಮರೀಚಿಕೆಯಾಗಿದೆ.
ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಜನವರಿ 5ರಂದು ನಡೆಯುವ ಗ್ರಾಮ ವಾಸ್ತವ್ಯಕ್ಕೆ ಮಡಪ್ಪಾಡಿಯನ್ನು ಆಯ್ಕೆ ಮಾಡಿದ ಕಾರಣ ಸದ್ಯ ಮಡಪ್ಪಾಡಿ ಗ್ರಾಮ ಪ್ರಚಾರದಲ್ಲಿದೆ. ಸುಳ್ಯ ತಾಲೂಕಿನ ಎರಡನೇ ಅತಿ ದೊಡ್ಡ ಗ್ರಾಮವಾದ ಮಡಪ್ಪಾಡಿಯಲ್ಲಿ ತನ್ನ ವ್ಯಾಪ್ತಿಯಷ್ಟೇ ವಿಸ್ತಾರವಾದ ಸಮಸ್ಯೆಗಳೂ ಕೂಡ ಹರಡಿಕೊಂಡಿದೆ. ರಸ್ತೆ ಸಂಪರ್ಕದ ಕೊರತೆ, ನೆಟ್‍ವರ್ಕ್ ಸಮಸ್ಯೆ, ಹಳದಿರೋಗದಿಂದ ಅಡಕೆ ಕೃಷಿ ನಾಶ ಹೀಗೆ ಹತ್ತಾರು ಸಮಸ್ಯೆಗಳು ಈ ಗ್ರಾಮವನ್ನು ಕಾಡುತಿದೆ. ಒಂದೊಮ್ಮೆ ಕುಗ್ರಾಮ ಎಂಬ ಹಣೆಪಟ್ಟಿ ಹೊಂದಿದ್ದ ಈ ಊರು ಕಾಲ ಕ್ರಮೇಣ ಅಭಿವೃದ್ಧಿಗೆ ತೆರೆದುಕೊಂಡರೂ ಸಮಸ್ಯೆಗಳು ಇನ್ನೂ ಹಲವು ಇದೆ.
ತನ್ನ ವಿಸ್ತೀರ್ಣದ ಶೇ.83.43 ಅರಣ್ಯದಿಂದ ಆವೃತವಾಗಿರುವ ಈ ಗ್ರಾಮದಲ್ಲಿ 5559.39 ಹೆಕ್ಟೇರು ವಿಸ್ತೀರ್ಣದಲ್ಲಿ 4648.70 ಹೆಕ್ಟೇರು ಅರಣ್ಯವೇ ತುಂಬಿಕೊಂಡಿದೆ. ದೇವಚಳ್ಳ, ಮರ್ಕಂಜ, ಕೊಲ್ಲಮೊಗ್ರು ಗ್ರಾಮ ಸುತ್ತಲಿಂದ ಆವರಿಸಿಕೊಂಡಿದೆ. 2011 ರ ಪ್ರಕಾರ ಇಲ್ಲಿ 1757 ಜನಸಂಖ್ಯೆ ಇದೆ. ಮಡಪ್ಪಾಡಿ,ಬಲ್ಕಜೆ, ಹಾಡಿಕಲ್ಲಿನಲ್ಲಿ ಪ್ರಾಥಮಿಕ ಶಾಲೆ, ಎರಡು ಅಂಗನವಾಡಿ ಕೇಂದ್ರಗಳಿವೆ. ಗ್ರಾ.ಪಂ.ಕಚೇರಿ, ಸಹಕಾರಿ ಸಂಘ ಮೊದಲಾದ ಕೇಂದ್ರಗಳು ಇಲ್ಲಿವೆ.
ರಸ್ತೆ, ಕೃಷಿ ಸಮಸ್ಯೆ:
ಗ್ರಾಮದಲ್ಲಿ ಹಲವೆಡೆ ಸರ್ವ ಋತು ಸಂಪರ್ಕ ರಸ್ತೆಯ ಬೇಡಿಕೆ ಇದೆ. ಮಡಪ್ಪಾಡಿಯನ್ನು ಹೊರ ಜಗತ್ತಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಾದ ಎಲಿಮಲೆ-ಸೇವಾಜೆ-ಮಡಪ್ಪಾಡಿ-ಕಂದ್ರಪ್ಪಾಡಿ-ಗುತ್ತಿಗಾರು ರಸ್ತೆಯನ್ನು ಮೇಲ್ದರ್ಜೆಗೇರಿಸಿ ಅಭಿವೃದ್ಧಿಪಡಿಸಬೇಕು ಎಂಬುದು ಪ್ರಮುಖ ಬೇಡಿಕೆ. ಅಲ್ಲದೆ ಗ್ರಾಮದಲ್ಲಿ 60 ಕಿ.ಮಿಗೂ ಹೆಚ್ಚು ಉದ್ದವಿರುವ 42 ವಿವಿಧ ಗ್ರಾಮೀಣ ರಸ್ತೆಗಳಿವೆ. ವಾಹನ ಸಂಚಾರಕ್ಕೆ ದುಸ್ತರವಾಗಿರುವ ಈ ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕು ಜೊತೆಗೆ ಅಲ್ಲಲ್ಲಿ ಸೇತುವೆ, ಮೋರಿಗಳ ನಿರ್ಮಾಣದ ಬೇಡಿಕೆಯೂ ಇದೆ. ರಸ್ತೆ, ಸೇತುವೆ ಸಮಪರ್ಕಕವಾಗಿ ಇಲ್ಲದ ಕಾರಣ ಮಳೆಗಾಲದಲ್ಲಿ ಕೆಲವು ಪ್ರದೇಶಗಳು ದ್ವೀಪದಂತಾಗುತ್ತದೆ. ಸುತ್ತಲೂ ಅರಣ್ಯ ಸುತ್ತುವರಿದ ಕಾರಣ ರಸ್ತೆ, ಸೇತುವೆ ನಿರ್ಮಾಣಕ್ಕೆ, ಹಕ್ಕುಪತ್ರ ಕಲ್ಪಿಸಲು, ಕೆಲವೊಂದು ತೊಡಕು ಉಂಟಾಗುತಿದೆ ಎನ್ನುತ್ತಾರೆ ಸಾರ್ವಜನಿಕರು. ಅಡಿಕೆ ಕೃಷಿಯೇ ಇಲ್ಲಿನ ಜನ ಜೀವನ ಆಧಾರ. ಈ ಕೃಷಿಗೆ ಕೆಲ ವರ್ಷಗಳ ಹಿಂದೆ ಹಳದಿ ರೋಗ ಬಾಧಿಸಿ ಶೇ.50 ರಷ್ಟು ಅಡಕೆ ಕೃಷಿ ನಾಶವಾಗಿದೆ. ಜನರು ಈಗ ಪರ್ಯಾಯ ಆದಾಯ ಮತ್ತು ಉದ್ಯೋಗದತ್ತ ದೃಷ್ಟಿ ಹರಿಸಬೇಕಾದ ಸ್ಥಿತಿ ಉಂಟಾಗಿದೆ. ಜೊತೆಗೆ ಕೃಷಿಗೆ ಕಾಡು ಪ್ರಾಣಿಗಳ ಉಪಟಳವೂ ತಪ್ಪುವುದಿಲ್ಲ.
ಪ್ರಮೀಳಾ ರಾಜ್ಯ:
ರಾಜ್ಯದಲ್ಲಿಯೇ ವಿಶಿಷ್ಠತೆಯನ್ನು ಪಡೆದ ಗ್ರಾಮ ಪಂಚಾಯಿತಿ ಮಡಪ್ಪಾಡಿ. 442 ಮನೆಗಳಿರುವ ಗ್ರಾಮದಲ್ಲಿ ಇರುವುದು ಕೇವಲ ಎರಡು ವಾರ್ಡ್‍ಗಳು ಮತ್ತು ಐದು ಸದಸ್ಯರು ಮಾತ್ರ. ನೆಲ್ಲೂರು ಕೆಮ್ರಾಜೆ ಮಂಡಲ ಪಂಚಾಯಿತಿಗೆ ಸೇರಿದ್ದ ಮಡಪ್ಪಾಡಿ 1994ರಲ್ಲಿ ಗ್ರಾಮ ಪಂಚಾಯಿತಿ ಆಗಿ ಅಸ್ತಿತ್ವಕ್ಕೆ ಬಂತು. ಮೊದಲ ಎರಡು ಅವಧಿಯಲ್ಲಿ ನಾಲ್ಕು ಮಂದಿ ಮಹಿಳಾ ಸದಸ್ಯರು ಮಾತ್ರ ಇದ್ದರು. ಬಳಿಕ ಸದಸ್ಯರ ಸಂಖ್ಯೆ ಐದಕ್ಕೆ ಏರಿ ಮೂರು ಮತ್ತು ನಾಲ್ಕನೇ ಅವಧಿಯಲ್ಲಿ ನಾಲ್ಕು ಮಂದಿ ಮಹಿಳೆಯರು ಮತ್ತು ಓರ್ವ ಪುರುಷ ಸದಸ್ಯರು ಇದ್ದರು. ಐದನೇ ಅವಧಿಗೆ ಮೂರು ಮಹಿಳೆಯರು ಮತ್ತು ಇಬ್ಬರು ಪುರುಷ ಸದಸ್ಯರಿದ್ದಾರೆ. 25 ವರ್ಷದ ಅವಧಿಯಲ್ಲಿ ಒಂದು ಬಾರಿ ಮಾತ್ರ ಪುರುಷ ಸದಸ್ಯ ಅಧ್ಯಕ್ಷರಾಗಿದ್ದರು. ಉಳಿದಂತೆ ಮಹಿಳೆಯರೇ ಅಧ್ಯಕ್ಷರಾಗಿ ಪಂಚಾಯಿತಿಯನ್ನು ಮುನ್ನಡೆಸಿದ್ದಾರೆ. ಚಂದ್ರಮತಿ.ಪಿ.ಜಿ ಎರಡು ಬಾರಿ, ಉಷಾ ಜಯರಾಮ ಎರಡು ಬಾರಿ ಅಧ್ಯಕ್ಷರಾಗಿದ್ದರು. ಕಮಲಾ ಪಣಿಯಾಲ, ಮಾಚುಲು ಕಜೆ, ಸುಬ್ರಹ್ಮಣ್ಯ ಕಜೆ ಈ ಒಂದು ಬಾರಿ ಅಧ್ಯಕ್ಷರಾಗಿದ್ದರು. ಈಗ ಶಕುಂತಳ ಕೇವಳ ಅಧ್ಯಕ್ಷೆಯಾಗಿದ್ದಾರೆ.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…