ಸವಣೂರು: ವಿದ್ಯಾರ್ಥಿಗಳಿಗೆ ತರಗತಿಯಲ್ಲಿ ಕೇವಲ ಪಾಠ ಮಾಡುವುದಷ್ಟೇ ನಮ್ಮ ಕೆಲಸವಲ್ಲ, ಅದರಾಚೆಗೂ ಕೆಲಸ ಮಾಡಿದರೆ ವಿದ್ಯಾರ್ಥಿಗಳಿಗೆ ಇನ್ನಷ್ಟು ಉಪಯುಕ್ತವಾಗುತ್ತದೆ ಎಂಬುವುದನ್ನು ಕೃಷಿ ಮಾಡುವ ಮೂಲಕ ಪುತ್ತೂರು ತಾಲೂಕು ಕೊಳ್ತಿಗೆ ಗ್ರಾಮದ ಮಣಿಕ್ಕರ ಶಾಲಾಭಿವೃದ್ದಿ ಸಮಿತಿ ಹಾಗೂ ಪೋಷಕರು, ಶಿಕ್ಷಕರು ತೋರಿಸಿಕೊಟ್ಟಿದ್ದಾರೆ.
ಶಾಲಾ ಖಾಲಿಯಿದ್ದ ಜಮೀನಿನಲ್ಲಿ ಶಾಲಾಭಿವೃದ್ದಿ ಸಮಿತಿ ಹಾಗೂ ಪೋಷಕರ ಸಹಕಾರದಲ್ಲಿ ಕೃಷಿ ಮಾಡಿದ್ದಾರೆ. ಈ ತೋಟದಲ್ಲಿ ಅಡಿಕೆ ಗಿಡ, ಬಾಳೆ ಗಿಡ, ಮರಗೆಣಸು, ಅನಾನಸು ನಾಟಿ ಮಾಡಲಾಗಿದೆ. ಬಾಳೆ ಗಿಡಗಳು ಬಲಿತು ದೊಡ್ಡದಾಗಿದೆ. ಅಡಿಕೆ ಗಿಡಕ್ಕೆ ನೆರಳಿನಾಶ್ರಯವೂ ಇದರಿಂದ ದೊರಕುತ್ತದೆ. ಈ ಗಿಡಗಳಿಗೆ ನೀರುಣಿಸುವ ಕಾರ್ಯವನ್ನು ಶಾಲಾ ಮಕ್ಕಳ ಇಕೋಕ್ಲಬ್‍ಗೆ ಹಂಚಿಕೆ ಮಾಡಲಾಗಿದ್ದು, ಒಂದೊಂದು ಸಾಲುಗಳಿಗೆ ಒಂದೊಂದು ತಂಡ ಮಾಡಿ ನೀರುಣಿಸುವ ಕಾರ್ಯ ಮಾಡಲಾಗುತ್ತಿದೆ. ಮಣಿಕ್ಕರ ಶಾಲೆಯಲ್ಲಿ ಮಾಡಿರುವ ಈ ತೋಟ ಎಲ್ಲರನ್ನು ಆಕರ್ಷಿಸುತ್ತಿದೆ. ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ನೀಡುವ ಬಿಸಿ ಊಟದ ಜೊತೆಗೆ ಪದಾರ್ಥ ಮಾಡಲು ಬೇಕಾದ ತರಕಾರಿಗಳನ್ನೂ ಈ ತೋಟದಲ್ಲಿ ಮಾಡುವ ಯೋಜನೆಯಿದೆ. ಶಾಲೆಯಲ್ಲಿ ಮಾಡಿದ ಕೃಷಿಯಿಂದ ಪ್ರೇರಣೆಗೊಂಡ ಅನೇಕ ಮಕ್ಕಳು ತಮ್ಮ ಮನೆಯಲ್ಲೂ ಇದೇ ಮಾದರಿಯ ಕೃಷಿ ಆರಂಭಿಸಿದ್ದಾರೆ.
ಸಿಗುತ್ತಿದೆ ಎಲ್ಲರ ಸಹಕಾರ: ಮುಖ್ಯಶಿಕ್ಷಕಿ ವಿಶಾಲಾಕ್ಷಿ ಕೆ. ಅವರು ತೋಟಕ್ಕೆ ಹಾನಿಯಾಗದಂತೆ ಶಾಲಾಭಿವೃದ್ಧಿ ಸಮಿತಿಯವರು ಮುತುವರ್ಜಿ ವಹಿಸುತ್ತಿದ್ದಾರೆ. ಜೊತೆಗೆ ಪೋಷಕರ ಮತ್ತು ಊರಿನವರ ಸಹಕಾರವೂ ಸಿಗುತ್ತಿದೆ. ಅಲ್ಲದೆ ಶೌಚಾಲಯದ ಬೇಡಿಕೆಯನ್ನು ಕೊಳ್ತಿಗೆ ಮರಾಟಿ ಸಮಾಜ ಸೇವಾ ಸಂಘದವರು ಮಾಡಿಕೊಟ್ಟಿದ್ದಾರೆ. ಶಾಲಾಭಿವೃದ್ದಿ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ ಎಂದು ಹೇಳುತ್ತಾರೆ . ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಇಬ್ರಾಹಿಂ ಎ., ಶಾಲಾ ಪಠ್ಯ ಕ್ರಮದಲ್ಲೂ ಕೃಷಿ ಬಗ್ಗೆ ಇದೆ. ಸರಕಾರಿ ಸುತ್ತೋಲೆಯಲ್ಲೂ ಶಾಲೆಗಳಲ್ಲಿ ಅಕ್ಷರ ತೋಟ ಇರಬೇಕೆಂದು ಇದೆ. ಕೃಷಿ ಚಟುವಟಿಕೆ ಬಗ್ಗೆ ಕೇವಲ ಬೋಧನೆ ಮಾಡಿದರೆ ಮಕ್ಕಳ ತಲೆಗೆ ಹತ್ತುವುದಿಲ್ಲ, ಅದನ್ನು ಈ ರೀತಿ ಕಾರ್ಯರೂಪಕ್ಕಿಳಿಸಿದಾಗ ಮಾತ್ರ ಅದು ಮಕ್ಕಳಿಗೆ ಚೆನ್ನಾಗಿ ಮನವರಿಕೆಯಾಗುತ್ತದೆ. ಈ ಕಾರ್ಯಕ್ಕೆ ಎಸ್.ಡಿ.ಎಂ.ಸಿ ಸದಸ್ಯರ, ಶಿಕ್ಷಕ ವೃಂದದವರ, ಪೋಷಕರ, ಊರವರ ಹೀಗೆ ಎಲ್ಲರ ಬೆಂಬಲ ಸಿಕ್ಕಿದೆ ಎಂದು ಹೇಳುತ್ತಾರೆ
ಇಂದು ಶೌಚಾಲಯ ಉದ್ಘಾಟನೆ:
ಶಾಲೆಯ ಮಕ್ಕಳಿಗೆ ಅನುಕೂವಾಗುವ ನಿಟ್ಟಿನಲ್ಲಿ ಮರಾಟಿ ಸಮಾಜ ಸೇವಾ ಸಂಘ ಕೊಳ್ತಿಗೆ ಇದರ ನೇತೃತ್ವದಲ್ಲಿ ವಿದ್ಯಾಭಿಮಾನಿಗಳ ಸಹಕಾರದಲ್ಲಿ ನೂತನವಾಗಿ ಸುಮಾರು 1.80 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲಾದ ಶೌಚಾಲಯದ ಹಸ್ತಾಂತರ ಹಾಗೂ ಉದ್ಘಾಟನೆ ಕಾರ್ಯಕ್ರಮ ಹಾಗೂ ಮಕ್ಕಳ ಪ್ರತಿಭಾ ಸಿಂಚನ ಡಿ.14ರಂದು ನಡೆಯಲಿದೆ.
ಕೊಳ್ತಿಗೆ ಮರಾಟಿ ಸಮಾಜ ಸೇವಾ ಸಂಘದ ಪದಾಧಿಕಾರಿಗಳು, ಸದಸ್ಯರು ಶ್ರಮದಾನದ ಮೂಲಕ ಶೌಚಾಲಯ ನಿರ್ಮಾಣಕ್ಕೆ ಶ್ರಮಿಸಿದ್ದಾರೆ. ವಿದ್ಯಾಭಿಮಾನಿಗಳ ಸಹಕಾರವನ್ನೂ ಪಡೆದುಕೊಂಡಿದ್ದಾರೆ. ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವ ಕೊಳ್ತಿಗೆ ಮರಾಟಿ ಸಮಾಜ ಸೇವಾ ಸಂಘವು ಶಾಲಾ ಮನವಿಯಂತೆ ಹೊಸ ಶೌಚಾಲಯ ನಿರ್ಮಿಸಿದ್ದಾರೆ. ಶೌಚಾಲಯದಲ್ಲಿ ಸ್ವಚ್ಚ ಭಾರತ್ ಹಾಗೂ ಬಯಲು ಮುಕ್ತ ಶೌಚಾಲಯದ ಸಂದೇಶವಿರುವ ಚಿತ್ರಗಳನ್ನು ಬರೆಯಲಾಗಿದೆ.
ಸಭಾ ಕಾರ್ಯಕ್ರಮ:
ಕಾರ್ಯಕ್ರಮವನ್ನು ಪುತ್ತೂರು ಶಾಸಕ ಸಂಜೀವ ಮಠಂದೂರು ಉದ್ಘಾಟಿಸುವರು. ತಾ.ಪಂ.ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಅಧ್ಯಕ್ಷತೆ ವಹಿಸುವರು. ಜಿ.ಪಂ.ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ತಾ.ಪಂ.ಸದಸ್ಯ ರಾಮ ಪಾಂಬಾರು, ಕೊಳ್ತಿಗೆ ಗ್ರಾ.ಪಂ.ಅದ್ಯಕ್ಷೆ ಗಿರಿಜ ಧನಂಜಯ, ಉಪಾಧ್ಯಕ್ಷ ಮಲ್ಲಿಕಾ ಪಾಲ್ತಾಡು, ಸದಸ್ಯರಾದ ಸುಂದರ ಪೂಜಾರಿ, ಕ್ಷೇತ್ರ ಶಿಕ್ಷಣಾದಿಕಾರಿ ವಿಷ್ಣುಪ್ರಸಾದ್, ಸಮೂಹ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಮೋನಪ್ಪ ಪೂಜಾರಿ, ಮಣಿಕ್ಕರ ಪ್ರೌಢಶಾಲಾ ಮುಖ್ಯಗುರು ಮಹಾಲಿಂಗೇಶ್ವರ ಎಂ, ಕಾವು ಕ್ಲಸ್ಟರ್ ಸಿಆರ್‍ಪಿ ಲಕ್ಷ್ಮಣ ನಾಯ್ಕ, ಕೊಳ್ತಿಗೆ ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಪದ್ಮನಾಭ ಎಸ್ ಸರಸ್ವತಿಮೂಲೆ, ಮಣಿಕ್ಕರ ಸರಕಾರಿ ಪ್ರೌಢಶಾಲಾ ಕಾರ್ಯಾಧ್ಯಕ್ಷ ಸುನೀಲ್ ರೈ ಪಾಲ್ತಾಡು, ಕೊಳ್ತಿಗೆ ಸಿ.ಎ.ಬ್ಯಾಂಕ್‍ನ ಅಧ್ಯಕ್ಷ ವಸಂತ ಕುಮಾರ್ ಕೆ ಪಾಲ್ಗೊಳ್ಳಲಿದ್ದಾರೆ.
ವಿದ್ಯಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಇಬ್ರಾಹಿಂ ಎ, ಮುಖ್ಯಶಿಕ್ಷಕಿ ವಿಶಾಲಾಕ್ಷಿ ಕೆ ತಿಳಿಸಿದ್ದಾರೆ.