ಸುಳ್ಯ: ಅಯ್ಯನಕಟ್ಟೆ ಜಾತ್ರೆ ಎಂದರೆ ಊರಿಗೆ ಊರೇ ಸೇರಿ ಸಂಭ್ರಮಿಸುವ ಕಾಲವೊಂದಿತ್ತು. ಜಾತ್ರೆಗೆ ದೂರದ ಊರುಗಳಿಂದ ವ್ಯಾಪಾರಸ್ಥರು ಆಗಮಿಸಿ ಸಂತೆ ನಡೆಸುತ್ತಿದ್ದರು. ಎರಡು ಮೂರು ಮೇಳಗಳ ಟೆಂಟ್ ಯಕ್ಷಗಾನ ಪ್ರದರ್ಶನ ನಡೆಯುತ್ತಿತ್ತು. ಜಾತ್ರಾ ಸಂದರ್ಭದಲ್ಲಿ ಬಂಗಾರದ ಆಭರಣಗಳನ್ನೂ ಮಾರಾಟ ಮಾಡಲಾಗುತ್ತಿತ್ತು ಅಷ್ಟೊಂದು ಅದ್ದೂರಿಯಿಂದ ಜಾತ್ರೆ ನಡೆಯುತ್ತಿತ್ತು ಎಂದು ಹಿರಿಯರು ನೆನಪಿಸುತ್ತಾರೆ. ಸುಮಾರು 50 ವರ್ಷಗಳ ಹಿಂದಿನ ಕಥೆಯಿದು. ಈಗ ಮತ್ತೆ ಆ ಸಂಭ್ರಮ, ಸಡಗರ ಮರುಕಳಿಸುವ ಕಾಲ, ಸುಯೋಗ ದೈವಗಳ ಅನುಗ್ರಹದಿಂದ ಕೂಡಿಬಂದಿದೆ.
Advertisement
Advertisement
ಅಯ್ಯನಕಟ್ಟೆ ಜಾತ್ರೆ ಆರಂಭವಾದ ಬಗ್ಗೆ ಮತ್ತು ಅರ್ಧದಲ್ಲಿ ಯಾಕೆ ನಿಂತಿತು ಎಂಬುವುದರ ಬಗ್ಗೆ ಖಚಿತವಾದ ಮಾಹಿತಿಗಳಿಲ್ಲದಿದ್ದರೂ, ಭೂಸುಧಾರಣಾ ಕಾಯ್ದೆ ಜಾರಿ ಬಂದ ಬಳಿಕ ಗೇಣಿಗೆ ಪಡೆದುಕೊಂಡಿದ್ದ ಕೃಷಿ ಜಮೀನುಗಳೆಲ್ಲಾ ಗೇಣಿದಾರರ ಪಾಲಾಗಿ ಜಾತ್ರೆ ನಡೆಸಲು ಆರ್ಥಿಕ ಸಂಕಷ್ಟ ಎದುರಾಗಿಯೋ ಏನೋ ಜಾತ್ರೆ ನಿಂತು ಹೋಯಿತು ಎಂದು ಅಂದಾಜಿಸಲಾಗಿದೆ. ಆ ಬಳಿಕ ಊರಿನ ಹಿರಿಯರಾದ ಕೋಟೆ ವಸಂತ ಕುಮಾರ್ ರವರು ಊರಿನ ಪ್ರಮುಖರೊಂದಿಗೆ ಸೇರಿಕೊಂಡು ಹಿಂದೆ ಜಾತ್ರೆಯನ್ನು ನಡೆಸಿಕೊಂಡು ಬರುತ್ತಿದ್ದ ಬಾಳಿಲ ಮನೆತನದವರನ್ನೂ ಸೇರಿಸಿಕೊಂಡು ಸುಮಾರು 30 ವರ್ಷಗಳ ಹಿಂದೆ ಮತ್ತೆ ಜಾತ್ರೆ ಆರಂಭಿಸಿದ್ದರು. ಕಳಂಜ ವಿಷ್ಣು ನಗರದ ಸಮೀಪದ ಕಲ್ಲಮಾಡ ಎಂಬಲ್ಲಿ ಮತ್ತು ಅಯ್ಯನಕಟ್ಟೆಯ ಗೌರಿ ಹೊಳೆಯ ತಟದಲ್ಲಿ ಜಾತ್ರೆ ವಿಜೃಂಭಣೆಯಿಂದ ಎರಡು ವರ್ಷ ನಡೆದಿತ್ತು. ಕಾರಣಾಂತರಗಳಿಂದ ಎರಡೇ ವರ್ಷಗಳಲ್ಲಿ ಮತ್ತೆ ಜಾತ್ರೆ ನಿಂತುಹೋಯಿತು.
ಕಾಲ ಕ್ರಮೇಣ ಊರಿನ ಹಿರಿಯರು ಜಾತ್ರೆ ನಿಂತು ಹೋಗಿರುವುದರಿಂದ ಊರಿಗೆ ಶ್ರೇಯಸ್ಸಾಗುವುದಿಲ್ಲವೆಂದು ಮನಗಂಡು, ಮತ್ತೆ 2-3 ವರ್ಷಗಳಿಂದ ಊರ ಅನೇಕ ದೈವಭಕ್ತರನ್ನು ಸೇರಿಸಿಕೊಂಡು ಪ್ರಶ್ನಾ ಚಿಂತನೆಯನ್ನು ನಡೆಸಿ ಅದರ ಪ್ರಕಾರ ಊರ ಪರವೂರ ದಾನಿಗಳ ಸಹಕಾರದಿಂದ ಬಾಳಿಲ ಗ್ರಾಮದ ಮೂರು ಕಲ್ಕಡ್ಕ, ತಂಟೆಪ್ಪಾಡಿ ಮತ್ತು ಕಳಂಜ ಗ್ರಾಮದ ಕಲ್ಲಮಾಡಗಳಲ್ಲಿ ಜೀರ್ಣೋದ್ಧಾರ ಕಾರ್ಯಗಳನ್ನು ಆರಂಭಿಸಲಾಯಿತು. ಕಳೆದ ವರ್ಷ ಮತ್ತೆ ವೈದಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಮೂರು ಕಡೆಗಳಲ್ಲೂ ದೈವ ಸಾನಿಧ್ಯವನ್ನು ಅಭಿವೃದ್ಧಿಪಡಿಸಿ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆಸುವ ಬಗ್ಗೆ ಕಾರ್ಯಪ್ರವೃತ್ತರಾದರು. ಮೂರು ಗ್ರಾಮಗಳ ಗ್ರಾಮಸ್ಥರನ್ನು ಜೊತೆಗೂಡಿಸಿ ವಿವಿಧ ಸಮಿತಿಗಳನ್ನು ರಚಿಸಿ ಆ ಮೂಲಕ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಯಿತು. ತದ ನಂತರ ಹಂತ ಹಂತವಾಗಿ ದೈವದ ಗುಡಿ, ಮಾಡಗಳು ನಿರ್ಮಾಣಗೊಂಡು ಬ್ರಹ್ಮಕಲಶೋತ್ಸವಕ್ಕೆ ಅಣಿಯಾಗಿದೆ.
ಸಮಿತಿಗಳಲ್ಲಿ ಜೀರ್ಣೋದ್ಧಾರ ಸಮಿತಿ, ಸೇವಾ ಸಮಿತಿ ಮತ್ತು ಬ್ರಹ್ಮ ಕಲಶೋತ್ಸವ ಸಮಿತಿಗಳು ಪ್ರಮುಖವಾಗಿವೆ. ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾಗಿ ಜಿ.ಪಂ. ಸದಸ್ಯ ಎಸ್.ಎನ್. ಮನ್ಮಥ, ಅಧ್ಯಕ್ಷರಾಗಿ ಕೆದ್ಲ ನರಸಿಂಹ ಭಟ್, ಸೇವಾ ಸಮಿತಿಯಲ್ಲಿ ಗೌರವಾಧ್ಯಕ್ಷರಾಗಿ ಬಾಳಿಲ ಸುಬ್ರಾಯ ಅಡಿಕೆಹಿತ್ಲು, ಅಧ್ಯಕ್ಷರಾಗಿ ಲಕ್ಷ್ಮಣ ಗೌಡ ಬೇರಿಕೆ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷರಾಗಿ ಎನ್. ವಿಶ್ವನಾಥ ರೈ ಕಳಂಜ ಹಾಗೂ ಅಧ್ಯಕ್ಷರಾಗಿ ಮಾಧವ ಗೌಡ ಕೆ, ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಸುಧಾಕರ ರೈ ಎ.ಎಂ, ಬ್ರಹ್ಮ ಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷರಾಗಿ ಕೂಸಪ್ಪ ಗೌಡ ಮುಗುಪು, ಎರಡೂ ಸಮಿತಿಗಳ ಪ್ರಧಾನ ಕಾರ್ಯದರ್ಶಿಯಾಗಿ ಪಿ.ಜಿ.ಎಸ್.ಎನ್. ಪ್ರಸಾದ್ ದುಡಿಯುತ್ತಿದ್ದರೆ, ಉಳಿದಂತೆ ಅನೇಕ ಮಂದಿ ಬೇರೆ ಬೇರೆ ಸಮಿತಿಗಳಲ್ಲಿ ಸಂಚಾಲಕರಾಗಿ, ಸದಸ್ಯರಾಗಿ ದೈವಗಳ ಸೇವೆಗೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಹಾಗೂ ಪರಿವಾರ ದೈವಗಳ ಸನ್ನಿಧಾನ ನೂತನವಾಗಿ ನಿರ್ಮಾಣಗೊಂಡಿದ್ದು, ಜ. 25 ರಿಂದ ಜ. 27 ರ ತನಕ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆದು, ಜ. 27 ರಿಂದ ಜ. 30 ರ ತನಕ ವಿಜೃಂಭಣೆಯ ಜಾತ್ರೋತ್ಸವವು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.