ಮಡಿಕೇರಿ : ಡಾ.ಕಸ್ತೂರಿರಂಗನ್ ವರದಿಯ ತೂಗುಗತ್ತಿಯಡಿಯಲ್ಲೇ ದಿನದೂಡುತ್ತಿದ್ದ ಭಾಗಮಂಡಲದ ತಣ್ಣಿಮಾನಿ ಗ್ರಾಮಸ್ಥರಿಗೆ ಆಘಾತವೊಂದು ಎದುರಾಗಿದೆ. ಕಳೆದ ಎರಡು ದಿನಗಳಿಂದ ಈ ಭಾಗದಲ್ಲಿ ದಿಢೀರ್ ಸರ್ವೆ ಕಾರ್ಯ ಆರಂಭಿಸಿರುವ ಅರಣ್ಯ ಇಲಾಖೆ ಸ್ಥಳೀಯ ನಿವಾಸಿಗಳಲ್ಲಿ ಆತಂಕ ಸೃಷ್ಟಿಸಿದೆ.
ಅರಣ್ಯಾಧಿಕಾರಿಗಳ ಕ್ರಮದಿಂದ ದಾರಿ ತೋಚದಾಗಿರುವ ಗ್ರಾಮಸ್ಥರು ಇಂದು ಜಿಲ್ಲಾಡಳಿತವನ್ನು ಭೇಟಿಯಾಗಿ ಸರ್ವೆ ಕಾರ್ಯವನ್ನು ಸ್ಥಗಿತಗೊಳಿಸಲು ಸೂಚನೆ ನೀಡುವಂತೆ ಮನವಿ ಮಾಡಿದರು.
ಆತಂಕಕ್ಕೆ ಒಳಗಾದ ತಣ್ಣಿಮಾನಿ ಗ್ರಾಮ ನಿವಾಸಿಗಳು ಏಕಾಏಕಿ ಸರ್ವೆ ಕಾರ್ಯ ಆರಂಭಿಸುವ ಮೂಲಕ ಕೃಷಿ ಜಮೀನುಗಳನ್ನು ‘ಅರಣ್ಯ’ ಎಂದು ಹೇಳುವ ಮೂಲಕ ಅರಣ್ಯ ಅಧಿಕಾರಿಗಳು ಕಿರುಕುಳ ನೀಡಲಾರಂಭಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಸರ್ವೆ ಕಾರ್ಯವನ್ನು ಸ್ಥಗಿತಗೊಳಿಸದಿದ್ದಲ್ಲಿ ಭಾಗಮಂಡಲ ಹೋಬಳಿಯ ಎಲ್ಲಾ ಗ್ರಾಮಗಳ ಗ್ರಾಮಸ್ಥರು ಒಗ್ಗೂಡಿ ಅರಣ್ಯ ಇಲಾಖೆ ವಿರುದ್ಧ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಗ್ರಾಮಸ್ಥರ ಪರವಾಗಿ ಮಾತನಾಡಿದ ಮಡಿಕೇರಿ ತಾಲೂಕು ಲ್ಯಾಂಪ್ಸ್ ನಿರ್ದೇಶಕ ಹಾಗೂ ಬಿಜೆಪಿ ಎಸ್‍ಟಿ ಮೋರ್ಚಾದ ಅಧ್ಯಕ್ಷ ಮಿಟ್ಟು ರಂಜಿತ್ ಹಾಗೂ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಕಾಳನ ರವಿ ಅವರುಗಳು ಅರಣ್ಯ ಇಲಾಖೆ ಕಾರ್ಯವೈಖರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಕೊಡಗಿಗೆ ಮಾರಕವಾಗಿರುವ ಕಸ್ತೂರಿರಂಗನ್ ವರದಿಯ ಹೆಸರಿನಲ್ಲಿ ಅರಣ್ಯದ ಅಂಚಿನಲ್ಲಿರುವ ಗ್ರಾಮಗಳಲ್ಲಿ ಸರ್ವೆ ಕಾರ್ಯವನ್ನು ದಿಢೀರ್ ಆಗಿ ಆರಂಭಿಸಿರುವ ಅರಣ್ಯ ಇಲಾಖೆಯ ಅಧಿಕಾರಿಗಳು, ಆ ಜಾಗ ಅರಣ್ಯ ಇಲಾಖೆಗೆ ಸೇರಿದ್ದೆಂದು ಹೇಳುವ ಮೂಲಕ ವಿನಾ ಕಾರಣ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸುತ್ತಿದ್ದಾರೆ ಎಂದು ದೂರಿದರು.
ಕಳೆದ 25-30 ವರ್ಷಗಳ ಹಿಂದೆ ಕಂದಾಯ ಜಮೀನಿನ ಪಕ್ಕದಲ್ಲಿದ್ದ ಜಮೀನನ್ನು ಅರಣ್ಯ ಇಲಾಖೆಯವರು ಸರ್ವೆ ಮಾಡಿ ತಮ್ಮ ಗಡಿ ಭಾಗ ಗುರುತಿಸಿ ಹದ್ದುಬಸ್ತು ಮಾಡಿ ಸೋಲಾರ್ ಬೇಲಿ ಅಳವಡಿಸಿದ್ದರೂ, ಇದೀಗ ಜನವಸತಿ ಇರುವ ಕಂದಾಯ ಜಾಗವನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರುಗಳು ಆರೋಪಿಸಿದರು.
ಗ್ರಾಮದ ಅರಣ್ಯದ ಅಂಚಿನಲ್ಲಿರುವ ಪ್ರದೇಶವು ಕಂದಾಯ ಜಾಗವಾಗಿದ್ದು, ಇಲ್ಲಿ ಸುಮಾರು 70-80 ವರ್ಷಗಳಿಂದ ಜನರು ಕೃಷಿ ಮಾಡಿಕೊಂಡು ವಾಸವಾಗಿದ್ದಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು ಹಾಗೂ ಇತರ ಎಲ್ಲಾ ಜನಾಂಗದ ಕಡು ಬಡವರೇ ಈ ಪ್ರದೇಶದಲ್ಲಿದ್ದು ಅತ್ಯಂತ ಕಷ್ಟದಿಂದ ಕೂಲಿ ಮಾಡಿ ಜೀವನ ಸಾಗಿಸಿಕೊಂಡು ಬರುತ್ತಿದ್ದಾರೆ. ಈ ಪ್ರದೇಶಗಳಿಗೆ ಭಾಗಮಂಡಲ ಗ್ರಾಮ ಪಂಚಾಯಿತಿಯಿಂದ ಮೂಲಭೂತ ಸೌಕರ್ಯಗಳಾದ ರಸ್ತೆ, ಕುಡಿಯುವ ನೀರು ಸೇರಿದಂತೆ ವಿವಿಧ ಸವಲತ್ತುಗಳನ್ನು ಒದಗಿಸಲಾಗಿದೆ. ಆದರೂ ಕೂಡ ಅರಣ್ಯ ಇಲಾಖೆಯವರು ಏಕಾಏಕಿ ಈ ಜಾಗ ಅರಣ್ಯಕ್ಕೆ ಸೇರಿದ್ದೆಂದು ಹೇಳಿಕೊಂಡು ಸರ್ವೆ ಕಾರ್ಯ ಆರಂಭಿಸಿದ್ದಾರೆ ಎಂದು ಟೀಕಿಸಿದರು.
ಕಳೆದ ಎರಡು ವರ್ಷಗಳ ಹಿಂದೆ ಇದೇ ರೀತಿ ಸರ್ವೆ ಕಾರ್ಯ ಆರಂಭಿಸಿದಾಗ, ಗ್ರಾಮಸ್ಥರು ಮೂರು ದಿನಗಳ ಕಾಲ ಅರಣ್ಯ ಇಲಾಖೆ ಕಚೇರಿ ಎದುರು ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದಾಗ ಮುಂದೆ ಈ ರೀತಿಯ ತೊಂದರೆ ಮಾಡುವುದಿಲ್ಲ ಎಂದು ಇಲಾಖೆಯ ಹಿರಿಯ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ ಇದೀಗ ರಾಜ್ಯ ಸರಕಾರದ ಆದೇಶವಿದೆ ಎಂದು ಹೇಳಿಕೊಂಡು ಅಧಿಕಾರಿಗಳು ಸರ್ವೆ ಕಾರ್ಯ ಆರಂಭಿಸಿದ್ದು, ಗ್ರಾಮಸ್ಥರು ಕಷ್ಟಪಟ್ಟು ಬೆಳೆದಿರುವ ಕೃಷಿಯನ್ನೂ ಹಾಳುಗೆಡವಿದ್ದಾರೆ. ಜಾಗದ ವಾರಸುದಾರರು ಇಲ್ಲದಿರುವ ಸಂದರ್ಭದಲ್ಲಿ ಸರ್ವೆ ಕಾರ್ಯ ನಡೆಸುತ್ತಿದ್ದು, ಮನೆಯಲ್ಲಿರುವವರಿಂದ ಬಲವಂತವಾಗಿ ಸಹಿ ಮಾಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಗ್ರಾಮಸ್ಥರಾದ ಕೆ.ಆರ್.ದಾಸಪ್ಪ, ದೇವಂಗೋಡಿ ಭಾಸ್ಕರ, ಕೆ.ಕೆ.ಪಾರ್ವತಿ ಹಾಗೂ ಕೆ.ಸಿ.ಸರಸ್ವತಿ ಉಪಸ್ಥಿತರಿದ್ದರು. ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವ ಸಂದರ್ಭ ಗ್ರಾಮದ 20 ಕ್ಕೂ ಹೆಚ್ಚು ಕುಟುಂಬಗಳ ಸದಸ್ಯರು ಹಾಜರಿದ್ದರು.
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…
ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…
ಮುಂಜಾನೆಯ ಸಮಯದಲ್ಲಿ ಸ್ಥಬ್ಧವೆನ್ನಿಸುವ ವಾತಾವರಣದಲ್ಲೂ ಸಾಕಷ್ಟು ಹಕ್ಕಿಗಳ ಚಿಲಿಪಿಲಿ ಶಬ್ದ ಕೇಳುತ್ತಿರುತ್ತದೆ. ಆದರೆ…
ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆ ಉಂಟಾಗುವ ಸಾಧ್ಯತೆಗಳಿದ್ದು, ಜನವರಿ 18 ರಂದು…