ಹಲ್ಲುಆಹಾರ ಜಗಿದು ತಿನ್ನಲು ಸಹಕಾರಿ ಮಾತ್ರವಲ್ಲ, ಮನುಷ್ಯನ ಅಂದ ಹೆಚ್ಚಿಸುವುದರಲ್ಲೂ ಪ್ರಮುಖ ಪಾತ್ರವಹಿಸುತ್ತದೆ. ಕಪ್ಪಾದ ಹುಳುಕು ಹಲ್ಲುಗಳು ಬಾಯೊಳಗಿದ್ದರೆ ಜನರ ಮುಂದೆ ಮಾತಾನಾಡಲು ಮುಜುಗರ, ಸಂಕೋಚ ಹಾಗಾಗಿ ಡೆಂಟಲ್ ಕ್ಲಿನಿಕ್‍ಗಳ ಕದತಟ್ಟಿ ಆದಷ್ಟೂ ಬೆಳ್ಳಗಾಗಿರಿಸಲು ತಡಕಾಡುತ್ತೇವೆ. ನಾನಾ ನಮೂನೆಯ ಪರಿಮಳಯುಕ್ತ ಹಲ್ಲುಜ್ಜುವ ಪೇಸ್ಟ್ ಗಳು ಮಾರುಕಟ್ಟೆಗೆ ಲಗ್ಗೆ ಇಡುವ ಮೊದಲು ಬೇವಿನ ಕಡ್ಡಿ, ಕಟ್ಟಿಗೆ ಉರಿಸಿದ ಒಲೆಯಲ್ಲಿ ದೊರೆಯುತ್ತಿದ್ದ ಮಸಿ, ಕಲ್ಲುಪ್ಪುಗಳ ಮಿಶ್ರಣದಲ್ಲಿ ಹಲ್ಲುಜ್ಜುತ್ತಿದ್ದ ಮನೆಯಲ್ಲಿರುವ ಅಜ್ಜಿಅಜ್ಜಂದಿರ ಹಲ್ಲುಗಳು ಗಟ್ಟಿಮುಟ್ಟಾಗಿರುವುದು ಸುಳ್ಳಲ್ಲ. ನ್ಯಾಚುರಲ್ ಆಗಿ ಮನೆಯಲ್ಲೇ ಹಲ್ಲುಪುಡಿ ತಯಾರಿಸುವ ಒಂದು ಸುಲಭ ವಿಧಾನ ಇಲ್ಲಿದೆ.
ಹಲ್ಲುಪುಡಿ ತಯಾರಿಸುವುದು ಹೀಗೆ :
ಹಲ್ಲು ಹುಡಿ ತಯಾರಿಸಲು ಮೊದಲಿಗೆ ಕಟ್ಟಿಗೆ (ಗೇರು ಮರದ ) ಸುಟ್ಟು ಇದ್ದಿಲು ಮಾಡಬೇಕು. ಕರಕಲಾದ ಇದ್ದಿಲನ್ನು ಬಿಸಿಲಿನಲ್ಲಿ ಇಟ್ಟು ಎರಡರಿಂದ ಮೂರು ದಿನ ಒಣಗಿಸಬೇಕು.ನಂತರ ಇದ್ದಿಲನ್ನು ಚೆನ್ನಾಗಿ ಕುಟ್ಟಿ ಪುಡಿ ಮಾಡಬೇಕು. ಕಾಲು ಕೆ.ಜಿ ಇದ್ದಿಲಿಗೆ 100 ಗ್ರಾಂ ಲವಂಗ , 100 ಗ್ರಾಂ ಕಾಳುಮೆಣಸು, ರುಚಿಗೆ ತಕ್ಕ ಉಪ್ಪುನ್ನು ಹುಡಿ ಮಾಡಿ ಎಲ್ಲವನ್ನೂ ಮಿಕ್ಸ್ ಮಾಡಿದರೆ ಹಲ್ಲುಉಜ್ಜಲು ಪರಿಶುದ್ಧವಾದ ಮನೆಯಲ್ಲೇ ತಯಾರಿಸಿದಂತಹ ಹಲ್ಲುಪುಡಿ ತಯಾರಾಗುತ್ತದೆ. ಭದ್ರವಾಗಿಇಟ್ಟರೆ ವರ್ಷವಾದರೂ ಹಾಳಾಗದ ಈ ಹುಡಿ ಯಾವುದೇ ಅಡ್ಡಪರಿಣಾಮ ಇಲ್ಲದೆ ಹಲ್ಲನ್ನು ಹಾಳಾಗದಂತೆ ಕಾಪಾಡಬಲ್ಲದು. ಮಕ್ಕಳಿಗೆ ಕಾಳುಮೆಣಸು ಖಾರವಾಗುತ್ತದೆ ಅಂತಾದರೆ ಸ್ವಲ್ಪಕಡಿಮೆ ಪ್ರಮಾಣದಲ್ಲಿ ಸೇರಿಸಿದರಾಯಿತು.
ಇದರಲ್ಲಿದೆ ಹಲ್ಲಿಗೆ ಬೇಕಾದಅಗತ್ಯ ಪೋಷಕಾಂಶಗಳು:
ಗೇರು ಇದ್ದಿಲು : ಇದು ಹಲ್ಲಿನ ವಸಡುಗಳಿಗೆ ಶಕ್ತಿ ನೀಡಿಗಟ್ಟಿಯಾಗುವಂತೆ ಮಾಡುತ್ತದೆ.
ಲವಂಗ: ಬಾಯಿಯ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.ಲವಂಗದಲ್ಲಿರುವ ಸೂಕ್ಷಾಣು ವಿರೋಧಿ ಗುಣ ಬಾಯಿಯಲ್ಲಿ ಬ್ಯಾಕ್ಟೀರಿಯ ಬೆಳೆಯದಂತೆ ನೋಡಿಕೊಳ್ಳುತ್ತದೆ.ಇದರ ಉಪಯೋಗದಿಂದ ಹಲ್ಲು ಮತ್ತು ವಸಡಿನ ಸಮಸ್ಯೆ ಕಡಿಮೆಯಾಗುತ್ತದೆ.
ಕಾಳುಮೆಣಸು : ಬಾಯಿ ಹುಣ್ಣು, ಹುಳುಕು ಹಲ್ಲು, ಹಲ್ಲು ನೋವಿಗೆ ಉತ್ತಮ. ಕಾಳು ಮೆಣಸು ಆಂಟಿಇನ್‍ಫ್ಲಾಮೇಟರಿ ಗುಣ ಹೊಂದಿದ್ದು, ನ್ಯಾಚುರಲ್ ಆಂಟಿ ಬಯಾಟಿಕ್ ಇದಾಗಿದೆ. ಕಾಳು ಮೆಣಸು ಗಂಟಲಿನ ಆರೋಗ್ಯಕ್ಕೂ ಒಳ್ಳೆಯದು.
ಉಪ್ಪು : ಹಲ್ಲಿನ ಆರೋಗ್ಯಕ್ಕೆ ಅಯೋಡಿನ್‍ಯುಕ್ತ ಉಪ್ಪುಅವಶ್ಯಕ. ಇದು ಹಲ್ಲು ಸವೆಯದಂತೆ ಕಾಪಾಡುತ್ತದೆ. ಹಲ್ಲುಗಟ್ಟಿಯಾಗಿರುವಂತೆ ನೋಡಿಕೊಳ್ಳುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಉಪ್ಪು.
ಇವುಗಳೊಂದಿಗೆ ರಸತೆಗೆದ ನಿಂಬೆಹುಳಿ ಸಿಪ್ಪೆಯನ್ನು ಎಸೆಯುವ ಬದಲು ಬಿಸಿಲಿನಲ್ಲಿ ಒಣಗಿಸಿ ಹುಡಿ ಮಾಡಿ ಸೇರಿಸಬಹುದು. ಇದು ಹಲ್ಲಿಗೆ ಹೊಳಪು ಬರುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಜೊತೆಗೆ ಒಣಗಿದ ತುಳಸಿ ಹೂ ಮಿಕ್ಸ್ ಮಾಡುವುದರಿಂದ ಬಾಯಿಯ ದುರ್ವಾಸನೆ ದೂರವಾಗುತ್ತದೆ.
@ ವಂದನಾರವಿ ಕೆ.ವೈ. ವೇಣೂರು.