ಸುಳ್ಯ: ಕಳೆದ 3 ದಿನಗಳಿಂದ ಸುಳ್ಯ-ಪುತ್ತೂರಿನ ಗ್ರಾಮೀಣ ಭಾಗ ಅಕ್ಷರಶ: ಸ್ತಬ್ಧವಾಗಿದೆ. ಕರೆಂಟು ಇಲ್ಲ, ಮೊಬೈಲ್ ಇಲ್ಲ, ಅಂಚೆಸೇವೆಯೂ ಇಲ್ಲ..!. ಎಲ್ಲವೂ ಒಂದಕ್ಕೊಂದು ಲಿಂಕ್..!. ಸಂಸದರೇ, ಶಾಸಕರೇ ಈಗಲೂ ಗಮನಿಸದೇ ಇದ್ದರೆ , ಕನಿಷ್ಟಸಂಪರ್ಕ ವ್ಯವಸ್ಥೆ ಕಡೆಗೆ ಗಮನಿಸದೇ ಇದ್ದರೆ ಹೇಗೆ ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ.
ಒಂದು ಕಾಲದಲ್ಲಿ ಪ್ರತಿ ಗ್ರಾಮಾಂತರ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿದ್ದ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಬಳಿಕ ಖಾಸಗಿ ಮೊಬೈಲ್ ಕಂಪೆನಿಗಳು ಬಂದ ಬಳಿಕ ಹಂತ-ಹಂತವಾಗಿ ತನ್ನ ನೆಟ್‌ವರ್ಕ್ ವ್ಯಾಪ್ತಿ ಕಳೆದುಕೊಳ್ಳುತ್ತಾ ಸಾಗಿ ಇದೀಗ ಬಳಕೆದಾರರು ಹಿಡಿಶಾಪ ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.
ಪುತ್ತೂರು ನಗರ,ಗ್ರಾಮಾಂತರ ಬಂಟ್ವಾಳದಲ್ಲೂ ಸರಿಯಾಗಿ ಸಿಗದ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಸಂಪೂರ್ಣ ಸ್ಥಬ್ಧಗೊಂಡಿದೆ.
ಪುತ್ತೂರು ಸುಳ್ಯ ತಾಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿರುವ ಆಯಾ ಗ್ರಾಮ ಪಂಚಾಯತ್ ಕಚೇರಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿ, ಹಾಲು ಉತ್ಪಾದಕರ ಸಹಕಾರ ಸಂಘದ ಕಚೇರಿ, ಗ್ರಾಮೀಣ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿರುವ ಅನೇಕ ಬ್ಯಾಂಕ್‌ಗಳ ಸಹಿತ ಹಲವಾರು ಸಂಘ ಸಂಸ್ಥೆಗಳು ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಕನೆಕ್ಷ ನ್ ಹೊಂದಿದ್ದು, ಇತ್ತೀಚಿನ ದಿನಗಳಲ್ಲಿ ತೀವ್ರ ನೆಟ್‌ವರ್ಕ್ ಸಮಸ್ಯೆ ಎದುರಿಸುತ್ತಿದ್ದು, ಜನಸಾಮಾನ್ಯರಿಗೆ ಕಚೇರಿ ಕೆಲಸ ಕಾರ್ಯಗಳಿಗೆ ತೊಂದರೆಯಾಗುತ್ತಿದೆ.ಕಳೆದ 3 ದಿನಗಳಿಂದ ಯಾವುದೂ ಇಲ್ಲ..! ಬಹುತೇಕ ಕಡೆ ಸೇವೆ ಸ್ಥಗಿತಗೊಂಡಿದೆ.
ಇಂದಿನ ಯುಗದಲ್ಲಿ ಹೆಚ್ಚಿನ ವಹಿವಾಟುಗಳು ಆನ್‌ಲೈನ್ ಮೂಲಕವೇ ನಡೆಯುತ್ತಿದ್ದು, ಇದಕ್ಕೆ ಇಂಟರ್‌ನೆಟ್ ಸೌಲಭ್ಯ ಅತಿ ಅಗತ್ಯ. ಆದರೆ ಪದೇ ಪದೇ ಸ್ತಬ್ಧಗೊಳ್ಳುತ್ತಿರುವ ನೆಟ್‌ವರ್ಕ್‌ನಿಂದಾಗಿ ಗ್ರಾಮೀಣ ಪ್ರದೇಶದ ಜನರ ಕಷ್ಟವನ್ನು ಕೇಳುವವರೇ ಇಲ್ಲದಂತಾಗಿದೆ.
ಕೆಲವು ಪ್ರದೇಶಗಳಲ್ಲಿ ಕರೆಂಟ್ ಹೋದರೆ ಬಿಎಸ್‌ಎನ್‌ಎಲ್ ಸಂಪರ್ಕ ಕಳೆದುಕೊಳ್ಳುತ್ತಿದ್ದು, ಕರೆಂಟ್ ಇರುವಾಗ ಮಾತ್ರ ಸೇವೆ ಒದಗಿಸುತ್ತಿದೆ. ಆದರೆ ಇನ್ನೂ ಕೆಲವು ಗ್ರಾಮೀಣ ಭಾಗಗಳಲ್ಲಿ ಕರೆಂಟ್ ಇದ್ದರೂ, ಇಲ್ಲದಿದ್ದರೂ ನೆಟ್‌ವರ್ಕ್ ಸಿಗುವುದೇ ಇಲ್ಲ. ಹೆಚ್ಚಿನ ಕಡೆಗಳಲ್ಲಿ ಟವರ್‌ನ ಬ್ಯಾಟರಿ ಚಾರ್ಜ್ ಮಾಡಲು ಜನರೇಟರ್‌ಗೆ ಸಮರ್ಪಕ ಡೀಸೆಲ್ ಕೊರತೆಯಿಂದ ಸಮಸ್ಯೆಯಾಗುತ್ತಿದೆ.
ಇದೀಗ ಮಳೆ ಗಾಳಿಯ ಕಾರಣದಿಂದ ಕರೆಂಟ್ ಸಮಸ್ಯೆಯೂ ವಿಪರೀತವಾಗಿದೆ.ಹಲವು ದಿನಗಳಿಂದ ಕರೆಂಟ್ ಇಲ್ಲವಾಗಿದೆ. ಇದರಿಂದ ಸಿಗ್ನಲ್ ಇಲ್ಲವಾಗಿದೆ. ಹೀಗಾಗಿ ಅಂಚೆಸೇವೆಯೂ ಬಂದ್…!
ಒಟ್ಟಿನಲ್ಲಿ ಜನಸಾಮಾನ್ಯರ ಗೋಳನ್ನು ಕೇಳುವವರೇ ಇಲ್ಲದಂತಾಗಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.