ಮಡಿಕೇರಿ: ಪ್ರಸ್ತುತ ವರ್ಷ ಆಗಸ್ಟ್ ತಿಂಗಳಿನಲ್ಲಿ ಸುರಿದ ಮಹಾಮಳೆಯ ಪ್ರವಾಹದ ಸಂಕಷ್ಟವನ್ನು ಎದುರಿಸುತ್ತಿರುವ ಕೊಡಗು ಜಿಲ್ಲೆಯಲ್ಲಿ ಸಾಂಪ್ರದಾಯಿಕ ಗಣೇಶೋತ್ಸವಕ್ಕೆ ಸಿದ್ಧತೆ ಪೂರ್ಣಗೊಂಡಿದೆ.
ಜಿಲ್ಲೆಯಾದ್ಯಂತ ವಿವಿಧ ಗಣೇಶೋತ್ಸವ ಸಮಿತಿಗಳು 400 ಕ್ಕೂ ಹೆಚ್ಚು ಭಾಗಗಳಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸಲಿವೆ. ಮಡಿಕೇರಿಯ ಕೋಟೆ ಶ್ರೀಮಹಾಗಣಪತಿ ದೇವಾಲಯದಲ್ಲಿ ಸೋಮವಾರ ಬೆಳಗ್ಗಿನಿಂದಲೇ ಅಭಿಷೇಕ, ಅಲಂಕಾರ, ಅರ್ಚನೆ, ಹೋಮ ಹವನಾದಿ ವಿಶೇಷ ಪೂಜೆಗಳು ನಡೆಯಲಿವೆ. ಭಕ್ತರು ಸಾವಿರಾರು ಈಡುಗಾಯಿ ಸೇವೆಯನ್ನು ಮಹಾಗಣಪತಿಗೆ ಅರ್ಪಿಸಲಿದ್ದಾರೆ.
ಉಳಿದಂತೆ ನಗರದ ಹೊಸ ಬಡಾವಣೆಯ ಪ್ರಸನ್ನ ಗಣಪತಿ ದೇವಾಲಯ, ದೇಚೂರು ಶ್ರೀವಿದ್ಯಾಗಣಪತಿ, ಕನ್ನಂಡಬಾಣೆಯ ದೃಷ್ಟಿ ಗಣಪತಿ, ಕಾಲೇಜು ರಸ್ತೆಯ ವಿಜಯವಿನಾಯಕ ಸೇರಿದಂತೆ ಎಲ್ಲಾ ದೇವಾಲಯಗಳಲ್ಲಿ ಗಣೇಶನ ಆರಾಧನೆ ನಡೆಯಲಿದೆ.ನಗರದಲ್ಲಿ 25 ಕ್ಕೂ ಹೆಚ್ಚಿನ ಗಣೇಶೋತ್ಸವ ಸಮಿತಿಗಳು ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸಲಿವೆ. ಪ್ರತಿಷ್ಠಾಪನೆ ಮತ್ತು ವಿಸರ್ಜನೆಯ ಸಂದರ್ಭ ತೆಗೆದುಕೊಳ್ಳಬೇಕಾದ ಮುಂಜಾಗೃತಾ ಕ್ರಮಗಳ ಬಗ್ಗೆ ಈಗಾಗಲೇ ನಗರ ಠಾಣಾ ಪೊಲೀಸರು ಸೂಕ್ತ ಸಲಹೆ, ಸೂಚನೆ ನೀಡಿದ್ದಾರೆ.
ಗಣೇಶೋತ್ಸವವನ್ನು ಪ್ರತಿವರ್ಷ ಅದ್ದೂರಿಯಾಗಿ ಆಚರಿಸಲಾಗುತ್ತಿದ್ದ ವಿರಾಜಪೇಟೆಯಲ್ಲಿ ಈ ಬಾರಿ ಮಹಾಮಳೆಯಿಂದ ಸಾವು, ನೋವುಗಳು ಸಂಭವಿಸಿರುವುದರಿಂದ ಸರಳ ಆಚರಣೆಗೆ ಸಮಿತಿಗಳು ಸಿದ್ಧತೆ ಮಾಡಿಕೊಂಡಿವೆ. ಸೋಮವಾರಪೇಟೆಯಲ್ಲಿ ಹೊನ್ನಮ್ಮನ ಕೆರೆಗೆ ಬಾಗಿನ ಅರ್ಪಿಸುವುದರೊಂದಿಗೆ ಗಣೇಶೋತ್ಸವಕ್ಕೆ ಚಾಲನೆ ದೊರೆಯಲಿದ್ದು, ಸಾಂಪ್ರದಾಯಿಕ ಆಚರಣೆಗೆ ಒತ್ತು ನೀಡಲಾಗುತ್ತಿದೆ.
ಕುಶಾಲನಗರ ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀಗಣಪತಿ ದೇವಾಲಯದಲ್ಲೂ ಗೌರಿ, ಗಣೇಶೋತ್ಸವ ವಿಶೇಷ ಪೂಜೆಗಳೊಂದಿಗೆ ಶ್ರದ್ಧಾಭಕ್ತಿಯಿಂದ ಜರುಗಲಿದೆ. ಈ ಬಾರಿ ಪರಿಸರ ಸ್ನೇಹಿ ಗಣಪನ ಮೂರ್ತಿಗಳಿಗೆ ಆದ್ಯತೆ ನೀಡಿರುವುದು ವಿಶೇಷ.