ಮಳೆ ಗಣಿತ…!. ಇದೆಂತ ಗಣಿತ ಅಂತ ಯೋಚನೆ ಮಾಡಬೇಡಿ. ದಿನವೂ ಬೀಳುವ ಮಳೆಯ ಲೆಕ್ಕ ನೋಡಿ ದಾಖಲಿಸಿ, ಅದರ ಲೆಕ್ಕಾಚಾರವನ್ನು ಮಾಡುವ ಹಲವು ಮಂದಿ ನಮ್ಮೂರಲ್ಲೇ ಇದ್ದಾರೆ. ಸರಕಾರದ ದಾಖಲೆಗಳು ಮಳೆ ಎಷ್ಟು ಬಂತು ಎಂದು ಮೆಸೇಜ್ ಬಂದರೆ ನಮ್ಮೂರಿನ ಮಂದಿಯಿಂದ ಇಂದಿಷ್ಟು ಮಳೆ ಎಂದು ವಾಟ್ಸಪ್ ಮೆಸೇಜ್ ಬರುತ್ತದೆ. ಈ ಲೆಕ್ಕದ ಹಿಂದೆ ಹಲವು ಕುತೂಹಲಗಳು ಇವೆ.
Advertisement
ಸುಳ್ಯ:ಮಳೆ ಸರಿಯಾಗಿ ಬರದಿದ್ದರೆ ಆತಂಕ ಪಡುವವರು, ಹೆಚ್ಚು ಮಳೆ ಸುರಿದರೆ ಚಿಂತೆ ಮಾಡುವವರು ಹಲವರಿದ್ದಾರೆ. ಆದರೆ ಎಷ್ಟು ಮಳೆ ಸುರಿಯುತ್ತದೆ ಎಂದು ಮಳೆಯ ಪ್ರತಿ ಹನಿಯ ಲೆಕ್ಕವನ್ನು ಇರಿಸಿ ಹೇಳುವವರು ನಮ್ಮ ನಡುವೆ ಹಲವರಿದ್ದಾರೆ. ಕಳೆದ ನಾಲ್ಕು ದಶಕದಲ್ಲಿ ಪ್ರತಿ ದಿನದ ಮಳೆಯ ಲೆಕ್ಕೂ ಇವರಲ್ಲಿ ಸಿದ್ಧ. ಎಲ್ಲೋ ಒಂದಿಬ್ಬರು ತಮ್ಮ ಕುತೂಹಲಕ್ಕಆಗಿ ಮಳೆಯ ಲೆಕ್ಕಾಚಾರ ಮಾಡುತ್ತಿದ್ದರು. ಆದರೆ ಇದೀಗ ನಾಡಿನಾದ್ಯಂತ ಹಲವು ಮಂದಿ ಮಳೆಯ ಲೆಕ್ಕಾಚಾರವನ್ನು ಹವ್ಯಾಸವಾಗಿಸಿ ತಮ್ಮ ಜೀವನದ ಭಾಗವಾಗಿಸಿದ್ದಾರೆ. ಪ್ರತಿ ದಿನ ತಮ್ಮ ಮಳೆ ಮಾಪಿನಿಯ ಮೂಲಕ ಮಳೆಯ ನೀರನ್ನು ಸಂಗ್ರಹಿಸಿ ಅದನ್ನು ಅಳತೆ ಮಾಡಿ ಅದನ್ನು ದಾಖಲಿಸಿಡುತ್ತಾರೆ. ಪ್ರತಿ ದಿನದ ಮಳೆ ದಾಖಲೆಯನ್ನು ವಾಟ್ಸಾಪ್ ಗುಂಪು, ಫೇಸ್ ಬುಕ್ ಮತ್ತಿತರ ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿ ಕೊಳ್ಳುತ್ತಾರೆ.
ಮಳೆಯ ದಾಖಲೆ ಹವ್ಯಾಸವಾಗಿಸಿದವರು:
44 ವರುಷಗಳಿಂದ ನಿರಂತರ ಮಳೆಯ ಅಳತೆಯನ್ನು ಮಾಡಿ ದಾಖಲಿಸುವ ಬಾಳಿಲದ ಕೃಷಿಕ ಪಿಜಿಎಸ್‍ಎನ್ ಪ್ರಸಾದ್ ಮಳೆದಾಖಲೆಗಾರರಲ್ಲಿ ಮುಂಚೂಣಿಯಲ್ಲಿದ್ದಾರೆ. 1976ರಿಂದ ಪ್ರತಿ ದಿನದ ಸುರಿಯುವ ಮಳೆಯ ಕರಾರುವಕ್ಕಾದ ಲೆಕ್ಕ ಇವರಲ್ಲಿದೆ. ಮಳೆಯ ದಾಖಲೆಯನ್ನು ಇರಿಸಿ ಅದನ್ನು ಎಲ್ಲರಿಗೂ ನೀಡುವ ಪ್ರಸಾದ್ ಅವರ ಮಳೆ ಲೆಕ್ಕ ಹಲವಾರು ಕುತೂಹಲಕಾರಿ ಅಂಶಗಳನ್ನು ಮುಂದಿಡುತ್ತದೆ. ನಕ್ಷದ ಆಧಾರದಲ್ಲಿ ಸುರಿಯಬಹುದಾದ ಮಳೆಯ ಬಗ್ಗೆ ಲೆಕ್ಕವನ್ನು ನೀಡುವುದರ ಜೊತೆಗೆ ಮಳೆ ಸುರಿಯುವ ಮುನ್ಸೂಚನೆಯನ್ನೂ ನೀಡುತ್ತಾರೆ.
ಸುಳ್ಯ ತಾಲೂಕಿನ ಕೊಲ್ಲಮೊಗ್ರದ ಕೃಷಿಕ ಕೇಶವ ಕಟ್ಟ 27 ವರ್ಷಗಳಿಂದ ಮಳೆ ದಾಖಲಿಸಿದ್ದಾರೆ. ತನ್ನ ಪ್ರದೇಶದ ಮಳೆಯ ಲೆಕ್ಕವನ್ನು ಇರಿಸಿ ದಾಖಲಿಸುವ ಹವ್ಯಾಸ ಬೆಳೆಸಿಕೊಂಡಿರುವ ಇವರು ವಾಟ್ಸಾಪ್ ಗ್ರೂಪ್‍ಗಳ ಮೂಲಕ ಮಳೆ ಲೆಕ್ಕ ನೀಡುತ್ತಾರೆ. ವಿಟ್ಲ ಎಲಿಂಜ ಕೋಡಪದವಿನ ಸಿ.ಜಿ.ವೆಂಕಟಗಿರಿ 18 ವರ್ಷಗಳಿಂದ ಮಳೆ ಲೆಕ್ಕವನ್ನು ದಾಖಲಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹಲವು ಮಂದಿ ಯುವಕರೂ ಮಳೆ ಲೆಕ್ಕ ಮಾಡಲು ಆರಂಭಿಸಿದ್ದು ಇನ್ನೊಂದು ವಿಶೇಷ.

ಗುತ್ತಿಗಾರು ಸಮೀಪದ ಹಾಲೆಮಜಲಿನ ಕೆ.ಉಣ್ಣಿಕೃಷ್ಣನ್ ಕಳೆದ ಎರಡು ವರ್ಷಗಳಿಂದ ಮಳೆಯ ಲೆಕ್ಕಾಚಾರ ಇರಿಸುತ್ತಿದ್ದರೆ, ಸುಬ್ರಹ್ಮಣ್ಯ ಸಮೀಪದ ಕಲ್ಲಾಜೆಯ ಶಿಜೋ ಅಬ್ರಹಾಂ ಒಂದು ವರ್ಷದಿಂದ ತನ್ನ ಪ್ರದೇಶದ ಮಳೆಯನ್ನು ಅಳೆಯುತ್ತಿದ್ದಾರೆ. ಕೃಷಿಕ ಹಾಗೂ ಪತ್ರಕರ್ತ ಮಹೇಶ್ ಪುಚ್ಚಪ್ಪಾಡಿ ಕೆಲವು ಸಮಯದಿಂದ ಮಳೆಯನ್ನು ದಾಖಲಿಸುವುದರೊಂದಿಗೆ ಮಳೆ ದಾಖಲೆ ಮಾಡುವ ನಾಡಿನ ಹಲವು ಮಂದಿಯನ್ನು ಒಟ್ಟು ಸೇರಿಸಿ “ಮಳೆ ಲೆಕ್ಕ” ಎಂಬ ವಾಟ್ಸಾಪ್ ಗ್ರೂಪ್ ರಚಿಸಿ ಮಳೆಯ ಮಾಹಿತಿಯನ್ನು ಹಂಚಿ ಕೊಳ್ಳುತ್ತಾರೆ. ನಿವೃತ್ತ ಉಪಅರಣ್ಯ ಸಂರಕ್ಷಣಾಧಿಕಾರಿ ಸದಾಶಿವ ಭಟ್ ಕಳೆದ ಒಂದು ವರ್ಷದಿಂದ ಕಡಬದ ತನ್ನ ಮನೆಯ ಸುತ್ತಲ ಮಳೆಯನ್ನು ಲೆಕ್ಕ ಮಾಡುತ್ತಾರೆ. ಬೆಳ್ತಂಗಡಿ ತಾಲೂಕಿನ ಅಡೆಂಜ ಉರುವಾಲಿನ ಕಿಶನ್ ಕೈಂತಜೆ ಪ್ರತಿ ದಿನದ ಮಳೆ ಲೆಕ್ಕಾಚಾರ ಮಾಡಿ ದಾಖಲಿಸುತ್ತಾರೆ. ಇವರ ತಂದೆ ದಿನಕರ ಭಟ್ ಮೂರು ದಶಕಗಳಿಂದಲೂ ಹೆಚ್ಚು ಸಮಯದಿಂದ ಮಳೆಯ ಲೆಕ್ಕವನ್ನಿರಿಸಿದ್ದಾರೆ. ಹೀಗೆ ನಾಡಿನ ಎಲ್ಲೆಡೆ ಹಲವಾರು ಮಂದಿ ಮಳೆಯ ಲೆಕ್ಕದ ದಾಖಲೀಕರಣ ಮಾಡುತ್ತಿದ್ದಾರೆ.

ಕುತೂಹಲದ ಲೆಕ್ಕ:
ಯಾವ ದಿನ ಎಷ್ಟು ಮಳೆ ಸುರಿಯಿತು. ವರ್ಷದಲ್ಲಿ ಒಟ್ಟು ಎಷ್ಟು ಮಳೆ ಬಂತು, ಒಂದೊಂದು ಪ್ರದೇಶದ ವಾರ್ಷಿಕ ಮಳೆಯ ಸರಾಸರಿ ಎಷ್ಟು, ಯಾವ ವರ್ಷ ಯಾವಾಗ ಮುಂಗಾರು ಆರಂಭಗೊಂಡಿತ್ತು. ಹಿಂಗಾರು ಮಳೆಯ ಪ್ರಭಾವ ಹೇಗಿತ್ತು, ವರ್ಷದಿಂದ ವರ್ಷಕ್ಕೆ ಸುರಿಯುವ ಮಳೆಯ ವ್ಯತ್ಯಾಸ ಹೇಗಿದೆ, ಹೀಗೆ ಒಂದಲ್ಲ, ಎರಡಲ್ಲ ಹಲವಾರು ಕುತೂಹಲಕಾರಿ ವಿಚಾರಗಳು ಪ್ರತಿಯೊಬ್ಬರ ಮಳೆ ಲೆಕ್ಕ ಪುಸ್ತಕ ತೆರೆದಿಡುತ್ತದೆ. ಅತೀ ಕುತೂಹಲ ಬರಿಸುವ ವಿಷಯವೆಂದರೆ ಪ್ರದೇಶದಿಂದ ಪ್ರದೇಶಕ್ಕೆ ಮಳೆಯ ಪ್ರಮಾಣದಲ್ಲಿ ಆಗುವ ವ್ಯತ್ಯಾಸ. ಮಳೆಯನ್ನು ಇಷ್ಟ ಪಡುವವರಿಗೆ, ಮಳೆಯ ಬಗ್ಗೆ ತಿಳಿಯಲು ಆಸಕ್ತಿ ಇರುವವರಿಗೆ, ಅಧ್ಯಯನ ನಡೆಸುವವರಿಗೆ ಇವರ ಮಳೆ ದಾಖಲೆಗಳು ದೊಡ್ಡ ಆಗರವೇ ಆಗಿದೆ. ಪಶ್ಚಿಮ ಘಟ್ಟದ ತಪ್ಪಲಲ್ಲಿರುವ ಸುಬ್ರಹ್ಮಣ್ಯ ಸಮೀಪದ ಕಲ್ಲಾಜೆಗಳಲ್ಲಿ ಪ್ರತಿ ದಿವಸ ಉಳಿದ ಕಡೆಗಳಿಗಿಂತ ಸ್ವಲ್ಪ ಅಧಿಕವೇ ಮಳೆ ದಾಖಲಾಗುತ್ತದೆ. ಮಳೆಯ ಲೆಕ್ಕಾಚಾರ ಇಡಲು ಆರಂಭಿಸಿದ ಮೇಲೆ ಕಲ್ಲಾಜೆ ಹೆಚ್ಚು ಮಳೆ ಬೀಳುವ ಪ್ರದೇಶ ಎಂಬ ವಿಸ್ಮಯಕಾರಿ ವಿಚಾರ ತಿಳಿಯಿತು ಎನ್ನುತ್ತಾರೆ ಶಿಜೋ ಅಬ್ರಹಾಂ.
ಮಳೆ ಲೆಕ್ಕ ಹಾಕುವುದು ಹೇಗೆ ?
ಮಳೆ ಲೆಕ್ಕ ಮಾಡಲು ಇವರಲ್ಲಿ ಮಾಪನ ಇದೆ. ಮನೆ ಸಮೀಪ ಅಳತೆ ಇರುವ ಸಮಾನಾದ ಸುತ್ತಳತೆ ಇರುವ ಗಾಜಿನ ಜಾರನ್ನು ಇಟ್ಟು ಅದರಲ್ಲಿ ಮಳೆ ನೀರು ಸಂಗ್ರಹಿಸಲಾಗುವುದು. ಪ್ರತಿ ದಿನ ಬೆಳಿಗ್ಗೆ ನಿಗದಿತ ಸಮಯಕ್ಕೆ ಅದನ್ನು ನೋಡಿ ದಾಖಲೆ ಪುಸ್ತಕದಲ್ಲಿ ಬರೆದಿಡುತ್ತಾರೆ. ಮಳೆಯ ಲೆಕ್ಕ ಮಾತ್ರವಲ್ಲದೆ ಆ ದಿನ ಮಳೆಯು ಯಾವ ರೀತಿ ಇತ್ತು ಎಂಬುದನ್ನೂ ಬರೆದಿಡುತ್ತಾರೆ. ಕೆಲವರು ಮಳೆಯ ಲೆಕ್ಕವನ್ನು ಪುಸ್ತಕದಲ್ಲಿ ಬರೆದಿಟ್ಟರೆ ಇನ್ನು ಕೆಲವರು ಕಂಪ್ಯೂಟರ್ ಗಳಲ್ಲಿ ಫೀಡ್ ಮಾಡಿ ಇಟ್ಟಿದ್ದಾರೆ.
ಪ್ರದೇಶದಿಂದ ಪ್ರದೇಶಕ್ಕೆ ಮಳೆ ಸುರಿಯುವ ಪ್ರಮಾಣ ವ್ಯತ್ಯಾಸವಿದ್ದರೂ, ತನ್ನ ಲೆಕ್ಕ ಮತ್ತು ತಾಲೂಕಿನ ಸರಾಸರಿ ಮಳೆಯ ಲೆಕ್ಕಕ್ಕೆ ಸಾಮ್ಯತೆ ಇರುತ್ತದೆ ಎನ್ನುತ್ತಾರೆ ಪಿಜಿಎಸ್‍ಎನ್ ಪ್ರಸಾದ್. ಮಳೆ ನಕ್ಷತ್ರ ಸಮಯದಲ್ಲಿ ಮಳೆ ಜಾಸ್ತಿ ಎಂಬ ನಂಬಿಕೆ ಇದೆ. ಇದಕ್ಕನುಗುಣವಾಗಿ ಆ ಸಮಯದ ಮಳೆಯ ಲೆಕ್ಕ ತೆಗೆದು ಚಾರ್ಟನನ್ನು ತಯಾರು ಮಾಡಿದ್ದಾರೆ. ಮಳೆಯ ಬಗ್ಗೆ ಅಂದಾಜಿಸುವ ಇವರು ಇಂಟರ್‍ನೆಟ್, ಪತ್ರಿಕೆಗಳಲ್ಲಿ ನೀಡುವ ಮೋಡದ ಚಿತ್ರಣವನ್ನೂ ಗಮನಿಸಿ ಅಧ್ಯಯನ ನಡೆಸುತ್ತಾರೆ. 44 ವರ್ಷದ ಮಳೆಯ ಲೆಕ್ಕವನ್ನು ಚಾರ್ಟ್ ಮಾಡಿ ಲ್ಯಾಮಿನೇಷನ್ ಮಾಡಿ ಇಟ್ಟಿದ್ದಾರೆ.
ಕೃಷಿಕರಿಗೆ ಹೆಚ್ಚು ಪ್ರಯೋಜನ:
ಮಳೆಯ ಚಲನ ವಲನಗಳು ಕೃಷಿ ಬದುಕಿನೊಂದಿಗೆ ಸಮ್ಮಿಳಿತವಾಗಿದೆ. ಮಳೆಯನ್ನು ನಂಬಿಕೊಂಡೇ, ಮಳೆಯ ಲಭ್ಯತೆಯ ಆಶ್ರಯದಲ್ಲಿಯೇ ಕೃಷಿ ಬದುಕು ನಿಂತಿದೆ. ಮಳೆಯನ್ನು ಅತ್ಯಂತ ಹತ್ತಿರದಿಂದ ನೋಡುವವರು ಮಳೆಯ ಒಳಿತು ಕೆಡುಕುಗಳನ್ನು ಅನುಭವಿಸುವವರು ಕೃಷಿಕರೇ ಆಗಿದ್ದಾರೆ. ಆದುದರಿಂದ ಮಳೆಯ ಲೆಕ್ಕವನ್ನು ಕೃಷಿಕರು ಬಲು ಕುತೂಹಲದಿಂದ ವೀಕ್ಷಿಸುತ್ತಾರೆ. ಭತ್ತ, ಅಡಿಕೆ, ರಬ್ಬರ್, ಕಾಳು ಮೆಣಸು, ಕೊಕ್ಕೊ, ತೆಂಗು ಹೀಗೆ ಪ್ರತಿಯೊಂದು ಕೃಷಿಯೂ ಮಳೆಯೊಂದಿಗೆ ಮೇಳೈಸಿಕೊಂಡಿದೆ. ಆದುದರಿಂದ ಕೃಷಿಕರೇ ಹೆಚ್ಚು ಮಳೆ ಲೆಕ್ಕವನ್ನು ಇರಿಸುತ್ತಾರೆ ಮತ್ತು ಗಮನಿಸುತ್ತಾರೆ. ಮಳೆಯ ಲೆಕ್ಕ ಗೊತ್ತಿದ್ದರೆ ಮಳೆಯ ಲಭ್ಯತೆಯನ್ನು ಅಂದಾಜಿಸಲು ಕೃಷಿ ಮಾಡಲು, ಔಷಧ ಸಿಂಪಡಣೆಗೆ, ಹೀಗೆ ಎಲ್ಲದಕ್ಕೂ ಕೃಷಿಕರಿಗೆ ಮಳೆಯ ಲೆಕ್ಕ ಬಹು ಉಪಯೋಗಿಯಾಗಿದೆ.
ವರುಷದಿಂದ ವರುಷಕ್ಕೆ ಮಳೆಯ ಲಭ್ಯತೆಯಲ್ಲಿ ವ್ಯತ್ಯಾಸ ಸ್ಪಷ್ಟವಾಗಿ ಗೋಚರಿಸುತ್ತದೆ. ಇತ್ತೀಚಿನ ವರುಷಗಳಲ್ಲಿ ಮಳೆಗಾಲದಲ್ಲಿ ಎಷ್ಟೇ ಮಳೆ ಸುರಿದರೂ ಅಕ್ಟೋಬರ್ ಮತ್ತು ನವೆಂಬರ್ ತಿಂಗಳ ಸ್ವಾತಿ ನಕ್ಷತ್ರದ ಸಂದರ್ಭದ ಮಹಾ ಮಳೆ ಕಡಿಮೆಯಾಗುವ ಕಾರಣ ಬೇಸಿಗೆಯಲ್ಲಿ ನೀರಿಗೆ ಹಾಹಾಕಾರ ಉಂಟಾಗುತಿದೆ. ಇನ್ನು ವರ್ಷದಲ್ಲಿ ಮಳೆ ದಿನಗಳು ಕೂಡ ಕಡಿಮೆಯಾಗುತ್ತಿರುವುದು ಕಂಡು ಬಂದಿದೆ. ಇದು ನೀರಿನ ಸಂರಕ್ಷಣೆಯನ್ನು ಪ್ರತಿಯೊಬ್ಬರೂ ಮಾಡಬೇಕು ಎಂಬ ಎಚ್ಚರಿಕೆಯ ಗಂಟೆಯೂ ಹೌದು ಎನ್ನುತ್ತಾರೆ ಪಿಜಿಎಸ್‍ಎನ್ ಪ್ರಸಾದ್.
ಕೃಷಿಕರಾದ ನಮಗೆ ಕೃಷಿ ಚಟುವಟಿಕೆಗಲ್ಲಿ ತೊಡಗಲು ಮಳೆ, ಬಿಸಿಲಿನ ಪ್ರಮಾಣ ಮತ್ತು ವಾತಾವರಣದ ಅಂದಾಜು ಬೇಕಾಗುತ್ತದೆ. ಮಳೆಯ ಲೆಕ್ಕಾಚಾರ ಹಾಕುವುದರಿಂದ ಮಳೆಯ ಅಂದಾಜು ಸಿಗುತ್ತದೆ. ಆದುದರಿಂದ ಕೃಷಿ ಚಟುವಟಿಯಲ್ಲಿ ತೊಡಗಿಸಿಕೊಳ್ಳಲು ಮಳೆಯ ಲೆಕ್ಕಾಚಾರ ತುಂಬಾ ಸಹಕಾರಿಯಾಗಿದೆ ಎನ್ನುತ್ತಾರೆ ಕೆ.ಉಣ್ಣಿಕೃಷ್ಣನ್ ಹಾಲೆಮಜಲು