ಮಲೆನಾಡು, ಪಶ್ಚಿಮಘಟ್ಟದಲ್ಲಿ ನಿರಂತರ ಮಳೆ ಸುರಿದರೆ ರೈಲು ಸಂಚಾರಕ್ಕೆ ಸಂಕಷ್ಟವಾಗುತ್ತದೆ. ಗುಡ್ಡ ಕುಸಿತ, ಬಂಡೆ ಕಲ್ಲು ಉರುಳಿ ಹಳಿಯ ಮೇಲೆ ಬೀಳುವ ಕಾರಣ ರೈಲು ಸಂಚಾರಕ್ಕೆ ಅಡ್ಡಿಯಾಗುತ್ತದೆ. ಇದೀಗ ಮಂಗಳೂರು-ಬೆಂಗಳೂರು ರೈಲು ಸಂಚಾರವೂ ಅದೇ ಹಾದಿಯಲ್ಲಿದೆ. ಈಚೆಗೆ ರೈಲ್ವೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದರು. ಇದೀಗ ಬಂಡೆ ಕಲ್ಲುಗಳ ತೆರವು ಕಾರ್ಯ ನಡೆಯುತ್ತಿದೆ.
Advertisement
ಘಟ್ಟ ಪ್ರದೇಶದಲ್ಲಿ ಆಗಾಗ ಭಾರೀ ಮಳೆಯಾಗುತ್ತದೆ. ಕೆಲವೊಮ್ಮೆ ಕಡಿಮೆ ಎನಿಸಿದರೂ ಮಣ್ಣು ಸಡಿಲಗೊಂಡು ಗೂಡ್ಸ್ ರೈಲು ಹಾಗೂ ಪ್ರಯಾಣಿಕ ರೈಲು ಸಾಗುವ ಮಂಗಳೂರು-ಬೆಂಗಳೂರು ರೈಲು ಹಳಿಯಲ್ಲಿ ಸಕಲೇಶಪುರದಿಂದ ಸುಬ್ರಹ್ಮಣ್ಯ ರೋಡ್ ವರೆಗಿನ ರೈಲು ಮಾರ್ಗದ ಮೇಲೆ ಮಣ್ಣು ಕುಸಿತವಾಗುತ್ತದೆ. ಹೀಗಾಗಿ ಸಂಚಾರದಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಸುರಿಯವ ಮಳೆಯ ಕಾರಣದಿಂದ ಬಂಡೆ ಕಲ್ಲುಗಳು ಕೂಡಾ ಜಾರಿ ಹಳಿಯ ಮೇಲೆ ಬೀಳುತ್ತವೆ. ಈಗ ಅಂತಹ ಕಲ್ಲುಗಳ ತೆರವು ಕಾರ್ಯ ನಡೆಯುತ್ತಿದೆ. ಬುಧವಾರ ಸಂಜೆ ಪೂರ್ಣಗೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ.
ಸುಬ್ರಹ್ಮಣ್ಯ ರಸ್ತೆ-ಸಿರಿಬಾಗಿಲು ನಡುವಣ ರೈಲು ಹಳಿಯ ಮೇಲೆ ಉರುಳಲು ಸಿದ್ಧವಾಗಿದ್ದ ಬಂಡೆಯನ್ನು ತೆರವುಗೊಳಿಸುವ ಕಾರ್ಯ ಶನಿವಾರ ಆರಂಭವಾಗಿತ್ತು. ಸ್ಫೋಟಕಗಳನ್ನು ಇರಿಸಿ ಬಂಡೆಯನ್ನು ಸಿಡಿಸುವ ಕಾಮಗಾರಿ ನಡೆಸುವ ಕಾರಣ ಗುಡ್ಡದಲ್ಲಿ ಕಂಪನ ಉಂಟಾಗಿ ಕಲ್ಲಿನ ಪರಿಸರದ ಮಣ್ಣು ಕೂಡಾ ಹಳಿಯ ಮೇಲೆ ಉರುಳಿ ಬಿದ್ದಿತ್ತು. ಮಳೆಯ ಕಾರಣದಿಂದಾಗಿ ಸಡಿಲಗೊಂಡ ಗುಡ್ಡೆಯ ಮಣ್ಣು ಮತ್ತೆ ಮತ್ತೆ ಕುಸಿಯುತ್ತಿರುವುದು ಕಾಮಗಾರಿಗೆ ಅಡ್ಡಿಯಾಯಿತು. ಆದರೂ 60ಕ್ಕೂ ಹೆಚ್ಚು ಕಾರ್ಮಿಕರು ಮತ್ತು ತಂತ್ರಜ್ಞರು ಜೆಸಿಬಿ, ಹಿಟಾಚಿಗಳ ಮೂಲಕ ತೆರವು ಕಾರ್ಯವನ್ನು ನಿರಂತರವಾಗಿ ನಡೆಸಲಾಗುತ್ತಿದೆ.
ಎರಡು ವಾರಗಳ ಹಿಂದೆ ರೈಲ್ವೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ತೆರಳಿದ್ದರು. ಬಳಿಕ ಬಂಡೆ ಕಲ್ಲುಗಳನ್ನು ತೆರವು ಮಾಡುವ ಬಗ್ಗೆ ಚಿಂತನೆ ನಡೆಸಿದ್ದರು.