ಮಳೆ ಬರುವ ಕಾಲಕ್ಕೆ… ಒಳಗ್ಯಾಕ ಕುಂತೇವು…! ಇಳೆಯೊಡನೆ ಜಳಕವಾಡೋಣು…

July 18, 2020
11:18 AM

ಮಳೆ ಬರುವ ಕಾಲಕ್ಕೆ
ಒಳಗ್ಯಾಕ ಕುಂತೇವು
ಇಳೆಯೊಡನೆ ಜಳಕವಾಡೋಣು
ನಾವೂನು, ಮೋಡಗಳ ಆಟ ನೋಡೋಣು
….. ದ ರಾ ಬೇಂದ್ರೆ

Advertisement

#ಪಿ.ಜಿ.ಎಸ್.ಎನ್.ಪ್ರಸಾದ್ ಬಾಳಿಲ

ಮಳೆ ಮಾಪನ……

ಇದು ಆಸಕ್ತಿ ಇರುವ ಯಾರೇ ಆದರೂ ರೂಢಿಸಿಕೊಳ್ಳಬಹುದಾದ ಒಂದು ಸರಳ ಹವ್ಯಾಸ. ನಿರ್ದಿಷ್ಟ ಪ್ರದೇಶದಲ್ಲಿ ಬೀಳುವ ಮಳೆ ಹನಿಗಳ ಪ್ರಮಾಣವನ್ನು ಒಂದು ಸರಳ ಸಾಧನದ ಮೂಲಕ ಅಳೆದು ನಾವೇ ತಯಾರಿಸಿಕೊಂಡ ಕೋಷ್ಟಕದಲ್ಲಿ ಬರೆದಿಡುವುದು.ಇದು ದಿನಗಳು ಕಳೆದಂತೆ, ವರ್ಷಗಳು ಉರುಳಿದಂತೆ ನಮ್ಮ ಅರಿವಿಗೆ ಬಾರದೇ ಅಪೂರ್ವ ಅಂಕಿ ಅಂಶಗಳ ಆಗರವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಇತಿಹಾಸ : ಕ್ರಿ.ಪೂ.400 ರಷ್ಟು ಹಿಂದೆಯೇ ಮಳೆ ಮಾಪನ ಮಾಡುತ್ತಿದ್ದ ಬಗ್ಗೆ ” ಕೌಟಿಲ್ಯನ ಅರ್ಥಶಾಸ್ತ್ರ” ದಲ್ಲಿ ಉಲ್ಲೇಖವಿದೆ.
ಮಲೆನಾಡಿನ ಕಾಫಿ ತೋಟಗಳಲ್ಲಿ 19 ನೆ ಶತಮಾನದ ಆರಂಭದಲ್ಲಿ ಮಳೆ ಅಳೆದು ಬರೆದಿಡುವ ಹವ್ಯಾಸ ಆರಂಭಿಸಿದವರು ಬ್ರಿಟಿಷರು. ಮಳೆ ರಿಜಿಸ್ಟರ್ ( ಕೋಷ್ಟಕ ) ತಯಾರಿಸಿ ಅದರಲ್ಲಿ ಹವಾಮಾನದ ವಿವರದೊಂದಿಗೆ ಮಳೆ ಅಳತೆಯನ್ನು ಬರೆದಿಡುತ್ತಿದ್ದರು. ಕಾಫಿ ನಾಡಿನ ರೈತರಲ್ಲಿ ನೂರು ವರ್ಷಗಳಷ್ಟು ಹಳೆಯದಾದ ಮಳೆಯ ರಿಜಿಸ್ಟರ್ ಗಳಿವೆ. ತಜ್ಞರ ಪ್ರಕಾರ ಇವು ಅಮೂಲ್ಯ ದಾಖಲೆಗಳು ಮಳೆ ಮಾಪಕ
ಕೌಟಿಲ್ಯನ ಅರ್ಥಶಾಸ್ತ್ರದಲ್ಲಿನ ಉಲ್ಲೇಖ ಪ್ರಕಾರ ಅಂದು ಮಳೆಯನ್ನು ದ್ರೋಣದ ಲೆಕ್ಕದಲ್ಲಿ ಅಳತೆ ಮಾಡುತ್ತಿದ್ದರು. ಈ ಪದ್ಧತಿಯನ್ನು ‘ವರ್ಷಾನನ’ ಅಂತಲೂ, ಉಪಕರಣವನ್ನು ವರ್ಷಮಾನ್ ಅಂತಲೂ ಕರೆಯುತ್ತಿದ್ದರು. ಇಂದು ಕೂಡಾ ಭಾರೀ ಮಳೆಯನ್ನು ಕುಂಭದ್ರೋಣ ಮಳೆ ಅಂತ ಕರೆಯುವುದುಂಟು.

ಒಂದು ನಿರ್ದಿಷ್ಟ ಪ್ರದೇಶದಲ್ಲಿ, ನಿರ್ದಿಷ್ಟ ಕಾಲದಲ್ಲಿ ಬೀಳುವ ಮಳೆ ಹನಿಗಳ ಪ್ರಮಾಣವನ್ನು ಅಳೆಯಲು ಬಳಸುವ ಸಾಧನವೇ ಮಳೆ ಮಾಪಕ. ಸಾಮಾನ್ಯವಾಗಿ 24 ಗಂಟೆಗಳಲ್ಲಿ ಸುರಿದ ಮಳೆಯನ್ನು ದಿನವಹಿ ದಾಖಲಿಸುವುದು ರೂಢಿ. ಮಳೆ ಮಾಪಕಕ್ಕೆ ಮಳೆ ನೀರು ಅಡೆತಡೆ ಇಲ್ಲದೆ ಬೀಳುವಂತಿರಬೇಕು.

ಮಳೆ ಮಾಪಕದ ರೇಖಾ ಚಿತ್ರ:

ಈ ದಿನಗಳಲ್ಲಿ ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಮಳೆ ಮಾಪಕಗಳು ಲಭ್ಯವಿವೆ.ಸರಳ ಸಾಧನಗಳಿಂದ ತೊಡಗಿ, ದುಬಾರಿ ಸ್ವಯಂಚಾಲಿತ ಸಾಧನಗಳವರೆಗೆ ಸಿಗುತ್ತದೆ.

 

ನಾನು ಅಳವಡಿಸಿಕೊಂಡ ಸುಲಭದಲ್ಲಿ ಅಳತೆ ಮಾಡಬಹುದಾದ ಉಪಕರಣ  ಮೇಲೆ ಕಾಣಿಸಲಾದ ಸರಳ ಗಾಜಿನ ಜಾಡಿಯಲ್ಲಿನ ಅಳತೆ ಕೂಡಾ ನಿಖರವಾದ ಲೆಕ್ಕಾಚಾರವನ್ನು ತೋರಿಸಬಲ್ಲುದು.

ಎಲ್ಲಿ ಸ್ಥಾಪಿಸಬೇಕು…?: ಮನೆಯ ಛಾವಣಿ, ಮರಗಿಡಗಳ ಕೆಳಗೆ ಅಳತೆಯ ಸಾಧನವನ್ನು ಇಡಬಾರದು. ಆದಷ್ಟು ಬಯಲ ಪ್ರದೇಶದಲ್ಲಿ ಇರಬೇಕು.
ಮಿ.ಮೀ.ಅಥವಾ ಸೆಂಟಿಮೀಟರ್ ಅಳತೆಯ ಜಾಡಿ ಸಿಗದಿದ್ದರೆ,ಚಿತ್ರದಲ್ಲಿ ಕಾಣಿಸಿದಂತೆ ನಾವೇ ಅಳತೆಯನ್ನು ಗುರುತು ಹಾಕಿಕೊಳ್ಳಬಹುದು ಇಲ್ಲವೇ ಫೂಟ್ ರೂಲರ್ ಸಹಾಯದಿಂದಲೂ ಅಳತೆ ಮಾಡಬಹುದು. ಪ್ರತಿದಿನ ಅಳತೆಯನ್ನು ನೋಡಿ ಕೋಷ್ಟಕದಲ್ಲಿ ಬರೆದಿಡುವುದು. ನಿನ್ನೆ ಬೆಳಿಗ್ಗೆ 8 ರಿಂದ ಈ ದಿನ ಬೆಳಗ್ಗೆ 8 ರ ತನಕ ದಾಖಲಾದ ಮಳೆಯನ್ನು ನಿನ್ನೆಯ ಲೆಕ್ಕಕ್ಕೆ ಬರೆದಿಡುವುದು ವಾಡಿಕೆ.

ಮೇಲ್ಕಾಣಿಸಿದ ಸಾಂಪ್ರದಾಯಿಕ ಉಪಕರಣದಲ್ಲಿಯಾದರೆ ದೊಡ್ಡ ಜಾಡಿಯಲ್ಲಿ ಸಂಗ್ರಹವಾದ ಮಳೆ ನೀರನ್ನು ಹತ್ತಿರದಲ್ಲಿ ಕಾಣಿಸಲಾದ ಪಾರದರ್ಶಕ ಜಾಡಿಗೆ ವರ್ಗಾಯಿಸಿ ಅಳೆಯಬೇಕಾಗುತ್ತದೆ. ಹೊಸಬರಿಗೆ ಇದು ಸ್ವಲ್ಪ ಕಷ್ಟದ ಕೆಲಸ ಅಂತ ಅನಿಸಬಹುದು.

2014 ರ ಮೊದಲು ನಾಲ್ಕಾರು ಮಂದಿಯಷ್ಟೇ ತೊಡಗಿಸಿಕೊಂಡಿದ್ದ ವಿಶೇಷ ಖರ್ಚಿಲ್ಲದ ಈ ಹವ್ಯಾಸ ಇಂದು ಜನಪ್ರಿಯಗೊಳ್ಳುತ್ತಿದೆ. ಸುಳ್ಯ ತಾಲೂಕಿನಾದ್ಯಂತ ಈಗ 15 ಮಂದಿ ಕೃಷಿಕರು ಮಳೆ ಅಳತೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅನೇಕ ಮಂದಿ ಆಸಕ್ತಿಯನ್ನು ವ್ಯಕ್ತಪಡಿಸಿದ್ದಾರೆ. ಇನ್ನೂ ಅನೇಕ ಮಂದಿ ಕೃಷಿಕರು ಈ ಹವ್ಯಾಸವನ್ನು ರೂಢಿಸಿಕೊಂಡರೆ ಕೃಷಿಕರದ್ದೇ ಆದ NETWORK ನ್ನು ಬಲಗೊಳಿಸಬಹುದು ಮಾತ್ರವಲ್ಲ ಕೃಷಿಕಾಯಕದಲ್ಲಿ ಮಳೆಯ ಪಾತ್ರವನ್ನು ನಿಖರವಾಗಿ ಅಂದಾಜಿಸಬಹುದು.

ಇಲ್ಲೊಂದು ಗಾದೆ ಮಾತು ನೆನಪಾಗ್ತಿದೆ..” ಒಂದು ಮಳೆ ಬಂದರೆ ಎತ್ತಿನ ಎರಡೂ ಕೊಂಬುಗಳು ಒದ್ದೆಯಾಗಬೇಕಾದಿಲ್ಲ..” ಯಾಕೆಂದರೆ ಒಂದು ಪ್ರದೇಶದ ಅತ್ಯಂತ ನಿಖರವಾದ ಮಳೆ ಅಳತೆ ಸಿಗಬೇಕಾದರೆ 3.5 ಕಿ.ಮೀ.ಸುತ್ತಳತೆಯಲ್ಲಿ ಒಂದಾದರೂ ಮಳೆ ಮಾಪನ ಬೇಕು..
ಈ ಕ್ಷಣವೇ ಮಳೆಯ ಚಿಟಪಟಕ್ಕೆ ನೀವೂ ಸ್ವರ ಸೇರಿಸಿ ಮಾತನಾಡಲಾರಂಭಿಸಿ.. ನಿಮ್ಮೊಳಗೊಬ್ಬ ಸಂಶೋಧಕ ಜಾಗೃತನಾಗಲೂಬಹುದು.

ಬರಹ: #ಪಿ.ಜಿ.ಎಸ್.ಎನ್.ಪ್ರಸಾದ್ ಬಾಳಿಲ

ಪಿ.ಜಿ.ಎಸ್.ಎನ್.ಪ್ರಸಾದ್ ಬಾಳಿಲ

( ಮಳೆ ಮಾಪನದ ಆಸಕ್ತರಿದ್ದರೆ ಸಂಪರ್ಕಿಸಬಹುದು – ಮಳೆ ಮಾಹಿತಿ-ಮಳೆ ಮಾಪನಕ್ಕೆಂದು ಕೃಷಿಕರ ಗುಂಪು ವಾಟ್ಸಪ್‌ ಹಾಗೂ ಪೇಸ್‌ ಬುಕ್‌ ನಲ್ಲಿದೆ. ಜಿಲ್ಲೆಯ ವಿವಿದೆಡೆಯ ಮಳೆ ಮಾಹಿತಿ ಲಭ್ಯವಿದೆ. ಜಿಲ್ಲೆಯಲ್ಲಿ ಇನ್ನಷ್ಟು ಮಂದಿ ಆಸಕ್ತರು  ಹೆಚ್ಚಾಗಬೇಕಿದೆ. )

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕಡಿಮೆ ದರದಲ್ಲಿ ಅಡಿಕೆ ಆಮದು ಮಾಡಿದರೆ ಸಂಪೂರ್ಣ ಜಪ್ತಿ – ದೆಹಲಿ ಹೈಕೋರ್ಟ್
February 19, 2026
8:46 PM
by: ಮಿರರ್‌ ಡೆಸ್ಕ್
ಹವಾಮಾನ ವರದಿ | 19-02-2026 | ಕರಾವಳಿ–ಮಲೆನಾಡಿನಲ್ಲಿ ಫೆ.21 ರಿಂದ ಮಳೆ ಸಾಧ್ಯತೆ ಹೆಚ್ಚಳ
February 19, 2026
12:29 PM
by: ಸಾಯಿಶೇಖರ್ ಕರಿಕಳ
ಬೆಂಗಳೂರು ಕಸ ವಿಲೇವಾರಿ ತಡೆದರೆ ಕಠಿಣ ಕ್ರಮ : ಎಸ್ಮಾ ಕಾಯ್ದೆ ಜಾರಿ ಎಚ್ಚರಿಕೆ
February 19, 2026
7:55 AM
by: ಮಿರರ್‌ ಡೆಸ್ಕ್
ಅಡಿಕೆ ಕ್ಯಾನ್ಸರ್‌ಕಾರಕ ಅಲ್ಲ – WHOಗೆ ಅಧಿಕೃತ ಮನವಿ ಮಾಡಿದ ಉತ್ತರ ಕನ್ನಡ ಸಂಸದ
February 19, 2026
7:00 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror