ಮಳೆ ಹೀಗಾದರೆ ಹೇಗೆ ?

June 27, 2019
11:00 AM

ಕಾಲಕಾಲಕ್ಕೆ ಯಾವ ಹವಾಮಾನ ಇರಬೇಕೊ ಅದು ಇದ್ದರೆ ಮಾತ್ರ ಅಲಫಲಗಳು ಎಂಬುದು ಹಿರಿಯರ ಮಾತು. ಬೇಸಿಗೆ ಹೆಚ್ಚಾದರೂ ಅಪಾಯ. ಮಳೆ ಹೆಚ್ಚಾದರೂ ಕಷ್ಟ. ಹಾಗೆಯೇ ಎರಡೂ ಕಡಿಮೆಯಾದರೆ ಎಲ್ಲವೂ ಅಯೋಮಯ. ಈಗಿನ ಪರಿಸ್ಥಿತಿ ಅಂತಾದ್ದು.

Advertisement
Advertisement

ಹೊರಗೆ ಕಾಲಿಡಲೂ ಅಸಾಧ್ಯ ಅನ್ನುವಂತಹ ಮಳೆ ಸುರಿಯುವ ಸಮಯದಲ್ಲಿ ಬೇಸಿಗೆಯನ್ನು ನಾಚಿಸುವ ಬಿರು ಬಿಸಿಲು. ಜೂನ್ ತಿಂಗಳು ಮುಗಿಯುತ್ತ ಬಂದರೂ ತೋಡು, ನದಿಗಳಲ್ಲಿ ಸರಿಯಾಗಿ ಮಳೆ ನೀರು ಹರಿದು ಹೋಗದ ಪರಿಸ್ಥಿತಿ. ಹಳ್ಳಿಗಳಲ್ಲಿ ಅಲ್ಲಿ ಇಲ್ಲಿ ಇರುವ ತೂತುಗಳಲ್ಲಿ ನೀರೊರತೆ ಮೇಲೆದ್ದು ಸಿಕ್ಕ ಸಿಕ್ಕಲ್ಲಿ ನೀರು ಹರಿದಾಡಬೇಕಾದ ಸಮಯದಲ್ಲಿ ಕುಡಿಯುವ ನೀರಿನ ಸುರಂಗಗಳಲ್ಲಿ, ಬಾವಿಗಳಲ್ಲಿ ಸರಿಯಾದ ಒರತೆಯೇ ಆಗದೆ ಪರಿತಪಿಸುವ ಅವಸ್ಥೆ. ಅಲ್ಲೊಬ್ಬ ಇಲ್ಲೊಬ್ಬ ಗದ್ದೆಯನ್ನು ಉತ್ತು ಬೇಸಾಯ ಮಾಡುವವನಿದ್ದ. ಈ ವರ್ಷ ಅವನಿಗೂ ಬೇಸಾಯಕ್ಕೆ ರಜೆ ಸಾರುವ ಸ್ಥಿತಿ. ಗುಡ್ಡಗಳಲ್ಲಿ ದನ ಕರುಗಳಿಗೆ ಮೇಯಲು ಹುಲ್ಲು ಹುಟ್ಟಿ ಕುರು ಕುರು ಕಚ್ಚಿ ತಿನ್ನಲು ಆಗುವಷ್ಟು ಬೆಳೆದು ನಿಲ್ಲುವ ಸಮಯದಲ್ಲಿ ಹುಲ್ಲೇ ಹುಟ್ಟಬೇಕಷ್ಟೆ ಅಂತ ದಿಗಿಲಾಗುವ ಅನುಭವ. ಮೇ ತಿಂಗಳಿನ ಮಳೆಗೆ ನೆಲ ತೇವವಾದಾಗ ತರಕಾರಿ ಬೀಜಗಳನ್ನು ಬಿತ್ತಿ ಅದು ಮೊಳಕೆಯೊಡೆದು ಗಿಡ ಬಳ್ಳಿಗಳಾಗಿ ಈಗ ಮುಂದಿನ ತರಕಾರಿ ಫಸಲಿಗೆ ಕಾದುಕೂರುವ ರೋಮಾಂಚಿತ ಸಮಯಕ್ಕೆ ಅವಕಾಶವೇ ಇಲ್ಲದಂತೆ ಆಗಿದೆ. ತರಕಾರಿ ಬಿತ್ತಿದರೆ ಈ ಮಳೆಗೆ ಬೆಳೆ ಬರುವುದಾದರೂ ಹೇಗೆ ಎಂದು ಆತಂಕ ಹೊರುವ ಪರಿಸ್ಥಿತಿ ಇಂದಿನದು.

 

ಅಡಿಕೆ ಕೃಷಿಕರಿಗೆ ಮಳೆಗಾಲದಲ್ಲಿ ಅಂಗಳ ತರಕಾರಿ ಕೃಷಿಗೆ ಮೀಸಲು. ಬಗೆ ಬಗೆಯ ತರಕಾರಿ ಬೆಳೆದು ತಾಜಾ ಹಸಿರು ತರಕಾರಿ ಸೇವಿಸುವ ಭಾಗ್ಯ ಯಥೇಚ್ಚವಾಗಿ ದೊರೆಯುವುದು ಮಳೆಗಾಲದಲ್ಲಿ. ಆದರೆ ಅದೂ ಈ ವರ್ಷ ಮರೀಚಿಕೆ. ಮುಂಚಿತವಾಗಿ ಬಿತ್ತನೆ ಮಾಡುವ ತರಕಾರಿ ಕೃಷಿಕರ ಅಂಗಳದಲ್ಲಿ ಗಿಡಗಳೆಲ್ಲ ಆಗಿವೆ. ಆದರೆ ಅದಕ್ಕೆ ಸಮಯಕ್ಕೆ ಕೊಡಬೇಕಾದ ಗೊಬ್ಬರ ಕೊಡಲು ಮಳೆಯಿಲ್ಲ. ಆಧ್ರ್ರಾ ಮಳೆಯ ಸಮಯದಲ್ಲಿ ಗಿಡ, ಗೆಲ್ಲು ಮತ್ತು ಬಳ್ಳಿಗಳನ್ನು ಊರಿ ಬಿಟ್ಟರೆ ಸಾಕು ಅದು ಚಿಗುರಿ ಬೆಳೆಯುತ್ತದೆ ಎಂಬುದು ನಂಬಿಕೆ. ಆದರೆ ಈ ವರ್ಷದ ಆಧ್ರ್ರಾ ಮಳೆಯ ಸಮಯದಲ್ಲೂ ಮಳೆ ಇಲ್ಲ ಅದರ ಹಿಂದೆಯೂ ಮಳೆ ಬಂದು ಒರತೆಯಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಟ್ಟುಬೆಳೆಸುವ ಯೋಚನೆಗೆ ಹಿನ್ನಡೆ ಸಹಜ.

Advertisement

ಕಾಲಕಾಲಕ್ಕೆ ಮಳೆ ಬಾರದೆ ಹೋದರೆ ಇಂತಹ ಭಯ, ಆತಂಕಗಳು ಸಹಜ. ತೋಟದಲ್ಲಿ ಕಾಳುಮೆಣಸಿನ ಬಳ್ಳಿಗಳು ಚಿಗುರದೆ ಫಸಲು ಅಯೋಮಯ. ಇನ್ನು ಮಳೆ ತಡವಾಗಿ ಬಂದ ಕಾರಣ ಕಾಳುಮೆಣಸಿನ ಬಳ್ಳಿಗಳು ಈಗ ಚಿಗುರಿ ಹೂ ಬಿಡುತ್ತಿವೆ. ಹಿಂದೆ ಬಿಟ್ಟ ಹೂವುಗಳು ಮಳೆಯಿಲ್ಲದೆ ಪರಾಗ ಸ್ಪರ್ಶವಾಗದೆ ಹೂಗೊಂಚಲು ಹಳದಿ ಬಣ್ಣಕ್ಕೆ ತಿರುಗಿ ನೆಲಕ್ಕೆ ಬೀಳುತ್ತಿವೆ. ಈಗ ಚಿಗುರಿ ಹೂವು ಫಸಲಾಗಿ ಕೈಸೇರುವಾಗ ತಡವಾಗುವುದು ನಿಶ್ಚಿತ. ಅದು ಕೂಡ ಮಳೆ ನಿತ್ಯ ಬಂದರೆ ಮಾತ್ರ ಹೂವಿಗೆ ಪರಾಗ ಸ್ಪರ್ಶವಾಗಿ ಕಾಯಿಕಚ್ಚಬಹುದು. ಬಾಳೆ, ಅಡಿಕೆ ಗಿಡಗಳನ್ನು ಈ ಮಳೆ ನಂಬಿ ನಡುವುದಾದರೂ ಹೇಗೆ ಎಂಬ ಮಾತು ಕೃಷಿಕರಿಂದ ಬರುವುದು ಸಹಜವೆ.

ಪ್ರಕೃತಿಯ ಮುಂದೆ ಹುಲುಮಾನವರಾದ ನಮ್ಮ ಆಟ ನಡೆಯದು ಎಂಬುದು ಎಲ್ಲರಿಗೂ ತಿಳಿದದ್ದೆ. ಪರಿಸ್ಥಿತಿಗೆ ತಕ್ಕಂತೆ ನಾವು ಇದ್ದುಕೊಳ್ಳಲು, ಬದುಕಿಕೊಳ್ಳಲು ಮತ್ತು ಒಗ್ಗಿಕೊಳ್ಳಲು ಕಲಿತು ಬಿಟ್ಟರೆ ಬಹುತೇಕ ಸಮಸ್ಯೆಗಳು ದೂರ. ಈ ವರ್ಷ ಬರದ ಅನುಭವವನ್ನು ಪ್ರಕೃತಿ ನಮಗೆ ಮಾಡಿ ಕೊಟ್ಟಿದೆ. ಹಿಂದಿನ ವರ್ಷ ಮೂರು ತಿಂಗಳು ಮಳೆ ಎಡೆ ಬಿಡದೆ ಸುರಿದು ಕಾರ್ಗಾಲದ ವೈಭವವನ್ನು ಹಸಿರಾಗಿಸಿತ್ತು. ಅದು ಕಳೆದು ಬಂದ ಹಿಂದಿನ ಬೇಸಿಗೆಯಲ್ಲಿ ನೀರಿನ ಮಹತ್ವ ತಿಳಿಯುವಂತಾಯಿತು. ಇಂತಹ ಯಾವದೇ ಪರಿಸ್ಥಿತಿಯನ್ನು ಎದುರಿಸಲು ಸರ್ವ ಸನ್ನದ್ಧ ಸ್ಥಿತಿಯಲ್ಲಿ ನಾವೆಲ್ಲರೂ ಇರುವಂತಾಗಬೇಕು. ಕೆಲವರಿಗೆ ಪ್ರಕೃತಿ ಕೊಡುವ ಶಿಕ್ಷೆಗಳು ಅನುಭವಕ್ಕೆ ಬಂದರೂ ಅವರು ಎಚ್ಚೆತ್ತುಕೊಳ್ಳುವುದು ಕಡಿಮೆ. ಯಾರಾದರೂ ಮುಂದೆ ನಿಂತು ಮಾಡುವವರಿದ್ದರೆ ನಾಲ್ಕು ಕೊಂಕು ಮಾತಾಡಿ ಉತ್ಸಾಹಕ್ಕೆ ತಣ್ಣೀರೆರೆಚಲು ಅಂತವರು ಮುಂದು. ಮಳೆ ಕಡಿಮೆಯಾದರೆ ಮುಂದಿನ ಬೇಸಿಗೆ ಹೇಗಿರಬಹುದು ಎಂಬುದನ್ನು ಕಲ್ಪಿಸಿಕೊಂಡು ಅಂತರ್ಜಲವನ್ನು ಹೆಚ್ಚಿಸುವ ಪ್ರಯತ್ನಗಳಿಗೆ ಸಮರೋಪಾದಿಯಲ್ಲಿ ಪ್ರತಿಯೊಬ್ಬ ತೊಡಗಿಕೊಳ್ಳುವುದು ಅನಿವಾರ್ಯ. ಕೊಂಕು ನುಡಿಯುವವನಿಗೂ ನೀರು ಬೇಕು, ಉತ್ಸಾಹದಿಂದ ಮುನ್ನಡೆಯುವವನಿಗೂ ನೀರು ಬೇಕು. ಮನಸ್ಸನ್ನು ಸರಿದೂಗಿಸಿಕೊಂಡು ಅಗತ್ಯಗಳತ್ತ ಮುಖಮಾಡುವುದನ್ನು ರೂಢಿಸಿಕೊಂಡಾಗ ಕಷ್ಟಗಳು ಸಮಾನವಾಗಿ ಹಂಚಲ್ಪಡುತ್ತವೆ. ಸಂಘಟನಾತ್ಮಕವಾಗಿ ಎಲ್ಲರೂ ಒಂದಾಗಿ ನಿಂತಾಗ ಯಾರ ಹೆಗಲಿಗೂ ಹೆಚ್ಚಿನ ಭಾರ ಬೀಳದೆ ಕೆಲಸ ನಡೆಯುತ್ತದೆ. ಅಂತಹ ಕಾರ್ಯಗಳು ನಡೆಯಲಿ, ಮುನ್ನಡೆಯಲಿ.

Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಶಂ. ನಾ. ಖಂಡಿಗೆ

ಕೃಷಿಕ, ಬರಹಗಾರರು

ಇದನ್ನೂ ಓದಿ

ಅಡಿಕೆ ಎನ್ನುವ ಚಿನ್ನದ ಮೊಟ್ಟೆ ಇಡುವ ಕೋಳಿ | ವರವೋ ಶಾಪವೋ?
May 24, 2025
9:13 AM
by: ಡಾ|ವಿಘ್ನೇಶ್ವರ ಭಟ್‌ ವರ್ಮುಡಿ
ಹೊಸರುಚಿ | ಉಪ್ಪಿನಲ್ಲಿ ಹಾಕಿದ ಹಲಸಿನ ಕಾಯಿ ರೊಟ್ಟಿ
May 24, 2025
8:00 AM
by: ದಿವ್ಯ ಮಹೇಶ್
ಛದ್ಮ ವೇಷದಲ್ಲಿ ನಮ್ಮ ಪ್ರಜಾಪ್ರಭುತ್ವ
May 22, 2025
6:53 AM
by: ಡಾ.ಚಂದ್ರಶೇಖರ ದಾಮ್ಲೆ
1954 ರಿಂದ 2025 | ಅಡಿಕೆ ಮೇಲೆ ಆಪಾದನೆಗಳು ಬಂದ ದಾರಿ ಯಾವುದೆಲ್ಲಾ…?
May 20, 2025
7:32 AM
by: ಡಾ|ವಿಘ್ನೇಶ್ವರ ಭಟ್‌ ವರ್ಮುಡಿ

You cannot copy content of this page - Copyright -The Rural Mirror

Join Our Group