ಸುಳ್ಯ: 14 ವರ್ಷಗಳ ಹಿಂದೆ ರೂಪುಗೊಂಡ ಮಾಡಾವು 110 ಕೆವಿ ಸಬ್ ಸ್ಟೇಶನ್ ಕಾಮಗಾರಿ ಮುಗಿದಿದೆ. ಶನಿವಾರ ಪ್ರಾಯೋಗಿಕವಾಗಿ ಚಾಲನೆಗೊಂಡಿದೆ. ಕೊನೆಗೂ ಎರಡು ಬಾರಿ ಸ್ವಿಚ್ ಆನ್ ಭಾಗ್ಯ ಕೊನೆಗೂ ಕಂಡಿತು. ಈಗ ವಿದ್ಯುತ್ ಬಳಕೆದಾರರಿಗೆ ನಿಜವಾದ ನೆಮ್ಮದಿ ಸಿಕ್ಕಿದೆ. ಮುಂದಿನ ವರ್ಷ ವಿದ್ಯುತ್ ವೋಲ್ಟೇಜ್ ಸಮಸ್ಯೆಗೆ ಸ್ವಲ್ಪವಾದರೂ ನೆಮ್ಮದಿ ಸಿಕ್ಕೀತು ಎಂಬ ಆಶಾವಾದ ಇದೆ. ಇದರ ಜೊತೆಗೆ ಸುಳ್ಯ 110 ಕೆವಿ ಸಬ್ ಸ್ಟೇಶನ್ ಹಾಗೂ ಗುತ್ತಿಗಾರು 33 ಕೆವಿ ಸಬ್ ಸ್ಟೇಶನ್ ಯಾವಾಗ ಸಿದ್ಧವಾಗುತ್ತದೆ ಎಂಬ ಪ್ರಶ್ನೆಯೂ ಜೊತೆಗೇ ಎದ್ದಿದೆ.
ಕೆಯ್ಯೂರು ಗ್ರಾಮದ ಮಾಡಾವಿನಲ್ಲಿ 110 ಕೆವಿ ಸಬ್ ಸ್ಟೇಶನ್ ಕಾಮಗಾರಿ ಕಳೆದ ಕೆಲವು ದಿನಗಳ ಹಿಂದೆ ಪೂರ್ಣಗೊಂಡಿತ್ತು. ಶನಿವಾರ ಪ್ರಾಯೋಗಿಕವಾಗಿ ಸ್ವಿಚ್ ಆನ್ ಆಗಿದೆ. ಸಬ್ ಸ್ಟೇಶನ್ ಗೆ ವಿದ್ಯುತ್ ತಲುಪಿ ಚಾಲೂ ಆಗಿದೆ.
ಒಂದು ಫೀಡರ್ ಶನಿವಾರ ಬೆಳಗ್ಗೆ ಮಂಗಳೂರು ವೃತ್ತ ಅಧೀಕ್ಷಕ ಇಂಜಿನಿಯರ್ ರವಿಕಾಂತ ಕಾಮತ್ ಸ್ವಿಚ್ ಆನ್ ಮಾಡುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭ ಮೆಸ್ಕಾಂ ವಿವಿಧ ಅಧಿಕಾರಿಗಳು ಹಾಗೂ ವಿದ್ಯುತ್ ಬಳಕೆದಾರರ ವೇದಿಕೆ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಬಳಕೆದಾರರ ವೇದಿಕೆ ಪರವಾಗಿ ಸಂಚಾಲಕ ಜಯಪ್ರಸಾದ್ ಜೋಶಿ ಅಧಿಕಾರಿಗಳಿಗೆ ಶಾಲು ಹೊದೆಸಿ ಸನ್ಮಾನಿಸಿ ಕಾಮಗಾರಿಯನ್ನು ಪೂರ್ಣಗೊಳಿಸಿ ಪ್ರಾಯೋಗಿಕ ಚಾಲನೆ ನೀಡಿದ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು.
ಬಳಿಕ ಸುಳ್ಯ ಶಾಸಕ ಎಸ್. ಅಂಗಾರ ಆಗಮಿಸಿ ಇನ್ನೆರಡು ಫೀಡರ್ ಗಳಿಗೆ ಚಾಲನೆ ನೀಡಿದರು.ಈ ಸಂದರ್ಭ ಮೆಸ್ಕಾಂ ಅಧಿಕಾರಿಗಳು, ತಾ.ಪಂ.ಮಾಜಿ ಅಧ್ಯಕ್ಷ ಮುಳಿಯ ಕೇಶವ ಭಟ್, ಬಿಜೆಪಿ ಸುಳ್ಯ ಮಂಡಲದ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ, ಸವಣೂರು ಗ್ರಾಪಂ ಅಧ್ಯಕ್ಷೆ ಇಂದಿರಾ ಬಿ ಕೆ ಮೊದಲಾದವರು ಇದ್ದರು.
14 ವರ್ಷಗಳಿಂದ ಕುಂಟುತ್ತಾ ಸಾಗಿದ ಯೋಜನೆ ಕಳೆದ ವರ್ಷದಿಂದ ವೇಗ ಪಡೆದಿತ್ತು. ಇದಕ್ಕಾಗಿ ವಿದ್ಯುತ್ ಬಳಕೆದಾರರ ವೇದಿಕೆ ಸತತ ಪ್ರಯತ್ನ ಮಾಡಿತ್ತು. ಎಲ್ಲಾ ಬಳಕೆದಾರರನ್ನು ಸೇರಿಸುವ ನಿಟ್ಟಿನಲ್ಲಿ ಹಾಗೂ ಮಾಹಿತಿಗಳನ್ನು ನೀಡುವ ನಿಟ್ಟಿನಲ್ಲಿ ವಾಟ್ಸಪ್ ಗ್ರೂಪು ರಚನೆ ಮಾಡಿ ಈ ಮೂಲಕ ಮಾಹಿತಿಗಳನ್ನು ಅಪ್ಡೇಟ್ ಮಾಡುತ್ತಿದ್ದರು ಬೆಳ್ಳಾರೆ ಬಳಕೆದಾರರ ವೇದಿಕೆ ಸಂಚಾಲಕ ಜಯಪ್ರಸಾದ್ ಜೋಶಿ ಅವರ ನೇತೃತ್ವದ ತಂಡ. ಸತತವಾಗಿ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಸಮಸ್ಯೆಗಳ ಪರಿಹಾರಕ್ಕೆ ಜನಪ್ರತಿನಿಧಿಗಳ ಜೊತೆ ಮಾತುಕತೆ ನಡೆಸಿದ್ದರು, ಅಡೆತಡೆ ನಿವಾರಣೆಗೆ ಪ್ರಯತ್ನ ಮಾಡಿದ್ದರು. ಇದೆಲ್ಲದರ ಪರಿಣಾಮವಾಗಿ ಶೀಘ್ರದಲ್ಲೇ ಕಾಮಗಾರಿ ಮುಗಿಯುವುದಕ್ಕೆ ಕಾರಣವಾಯಿತು. ಬೆಳ್ಳಾರೆ ಬಳಕೆದಾರರ ವೇದಿಕೆ ಸಂಚಾಲಕ ಜಯಪ್ರಸಾದ್ ಜೋಶಿ ಅವರ ನೇತೃತ್ವದ ಹೋರಾಟಕ್ಕೆ ಕೃಷಿಕರು, ಸುಳ್ಯ, ಪುತ್ತೂರು ಮತ್ತು ಕಡಬ ತಾಲೂಕುಗಳ ಗ್ರಾಮ ಪಂಚಾಯತ್ ಗಳು, ಇನ್ನಿತರ ಸಂಘ ಸಂಸ್ಥೆಗಳು ಬೆಂಬಲ ಸೂಚಿಸಿದ್ದವು.
ಇದೀಗ ಸುಳ್ಯ ತಾಲೂಕಿನ ಪ್ರಮುಖ ಬೇಡಿಕೆಯಾದ ಸುಳ್ಯ 110 ಕೆವಿ ಸಬ್ ಸ್ಟೇಶನ್ ಕಾಮಗಾರಿ ಹಾಗೂ ಗುತ್ತಿಗಾರು ಸಬ್ ಸ್ಟೇಶನ್ ಕಾಮಗಾರಿ ವೇಗ ಪಡೆಯಬೇಕಿದೆ. ಗುತ್ತಿಗಾರು ಸಬ್ ಸ್ಟೇಶನ್ ಕಾಮಗಾರಿ ಆರಂಭವಾಗಿ 3 ವರ್ಷ ಕಳೆದಿದೆ. ಕಾಮಗಾರಿ ವೇಗ ಪಡೆದು ಸಂಪರ್ಕ ಪಡೆಯಬೇಕಿದೆ. ಇದಕ್ಕೆ ಸಂಬಂಧಿತರು ಗಮನಹರಿಸಬೇಕು ಎಂಬ ಒತ್ತಾಯ ವಿದ್ಯುತ್ ಬಳಕೆದಾರರದ್ದಾಗಿದೆ.