ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದುವರೆಗೆ ಕೊರೊನಾ ವೈರಸ್ ಸೋಂಕು ಇರುವುದು ದೃಢಪಟ್ಟಿಲ್ಲ. ಆದರೆ ಕಾಸರಗೋಡು ಗಡಿಭಾಗವಾದ್ದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಮಾ.31 ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯನ್ನು ಲಾಕ್ ಡೌನ್ ಮಾಡಲಾಗುತ್ತಿದೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ಆತಂಕ-ಭಯ ಅಗತ್ಯವಿಲ್ಲ. ಜಿಲ್ಲೆಯಲ್ಲಿ ಅಗತ್ಯ ಸೇವೆಗಳು ಲಭ್ಯವಿದೆ. ಕೊರೊನಾ ವೈರಸ್ ಹರಡುವುದನ್ನು ತಡೆಯಲು ಸೂಕ್ತ ಮುನ್ನೆಚ್ಚರಿಕಾ ಕ್ರಮ ಅಗತ್ಯವಾಗಿದೆ.
ಕಾಸರಗೋಡು ಜಿಲ್ಲೆಯು ದಕ್ಷಿಣ ಕನ್ನಡ ಜಿಲ್ಲೆಗೆ ಹೊಂದಿಕೊಂಡು ಇರುವುದರಿಂದ ಸಾಕಷ್ಟು ಮುನ್ನೆಚ್ಚರಿಕಾ ಕ್ರಮ ಅಗತ್ಯವಾಗಿದೆ. ಈಗಾಗಲೇ ಕಾಸರಗೋಡು ಪ್ರದೇಶದಲ್ಲಿಯೇ ಒಟ್ಟು 12 ಕೊರೊನಾ ವೈರಸ್ ಸೋಂಕು ಇರುವ ಪ್ರಕರಣ ದೃಢಪಟ್ಟಿದೆ. ಸೋಂಕು ಇರುವ ವ್ಯಕ್ತಿಗಳು ಈ ಹಿಂದೆ ಸಾಕಷ್ಟು ಕಡೆ ಓಡಾಡಿದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮ ಅಗತ್ಯವಾಗಿದೆ. ವಿಶೇಷವಾಗಿ ಕಾಸರಗೋಡು-ದಕ ಜಿಲ್ಲೆ ಗಡಿಭಾಗದಲ್ಲಿನ ಜನರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಿದೆ.
ಮಾ.31 ರವರೆಗೆ ದ ಕ ಜಿಲ್ಲೆಯೂ ಲಾಕ್ ಡೌನ್ ಎಂಬ ಆತಂಕ ಹಾಗೂ ಭಯ ಅನಗತ್ಯ. ಅಗತ್ಯ ಸೇವೆಗಳು ಲಭ್ಯವಿದ್ದು ಗುಂಪಾಗಿ ಸೇರುವುದು ಹಾಗು ಅನಗತ್ಯವಾಗಿ ನಗರ ಪ್ರದೇಶಗಳಿಗೆ ಹೋಗುವುದು ತಡೆಯುವುದೇ ಇದರ ಮುಖ್ಯ ಉದ್ದೇಶವಾಗಿದೆ. ವಾರಗಳ ಕಾಲ ಜನರು ಈ ಹೋರಾಟದಲ್ಲಿ ಸಹಕರಿಸಿದರೆ ಹಾಗೂ ವಿದೇಶದಿಮದ ಬರುವ ವ್ಯಕ್ತಿಗಳಿಗೆ ತಿಳಿಹೇಳಿ, ಮನೆಯವರೂ ಮುಂಜಾಗ್ರತೆ ವಹಿಸಿದರೆ ಮುಂದಿನ 15 ದಿನಗಳಲ್ಲಿ ಯಥಾ ಸ್ಥಿತಿ ಬರಬಹುದಾಗಿದೆ. ಹೀಗಾಗಿ ಪ್ರತಿಯೊಬ್ಬ ನಾಗರಿಕನೂ ಜಾಗೃತವಾಗುವುದೇ ಕೊರೊನಾ ವೈರಸ್ ತಡೆಗೆ ಇರುವ ಪರಿಹಾರವಾಗಿದೆ.
ಈ ನಡುವೆ ದೇಶದಲ್ಲಿ ಕೊರೊನಾ ವೈರಸ್ ಪತ್ತೆಯಾದ 75 ಜಿಲ್ಲೆಗಳು ಬಂದ್ ಆಗಲಿದೆ. ಅಗತ್ಯ ಸೇವೆಗಳು ಮಾತ್ರವೇ ಲಭ್ಯವಿದ್ದು ಇತರ ಯಾವುದೇ ಸೇವೆಗಳು ಮಾ.31 ರವರೆಗೆ ಲಭ್ಯವಾಗುವುದಿಲ್ಲ.